ಕರ್ನಾಟಕ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾದ ಸತೀಶ್ ಚಂದ್ರ ಶರ್ಮಾ ಅವರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿದೆ.
“ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಭಯ್ ಶ್ರೀನಿವಾಸ್ ಓಕಾ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದು, ಅವರು ಹುದ್ದೆ ತೆರವು ಮಾಡಿದ ಬಳಿಕ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಲು ಕರ್ನಾಟಕ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾದ ಸತೀಶ್ ಚಂದ್ರ ಶರ್ಮಾ ಅವರನ್ನು ಭಾರತ ಸಂವಿಧಾನದ 223 ವಿಧಿಯಡಿ ದೊರೆತಿರುವ ಅಧಿಕಾರ ಬಳಸಿ ರಾಷ್ಟ್ರಪತಿ ನೇಮಕ ಮಾಡಿದ್ದಾರೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಭಯ್ ಶ್ರೀನಿವಾಸ್ ಓಕಾ ಅವರು ಆಗಸ್ಟ್ 25ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ನ್ಯಾ. ಓಕಾ ಮಾತ್ರವಲ್ಲದೇ ನ್ಯಾ. ಬಿ ವಿ ನಾಗರತ್ನ ಅವರನ್ನೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿದೆ.
ಆಗಸ್ಟ್ 17ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿಗಳಾದ ಓಕಾ, ವಿಕ್ರಮ್ ನಾಥ್, ಜೆ ಕೆ ಮಹೇಶ್ವರಿ, ಹಿಮಾ ಕೊಹ್ಲಿ, ಬಿ ವಿ ನಾಗರತ್ನ, ಸಿ ಟಿ ರವಿಕುಮಾರ್, ಎಂ ಎಂ ಸುಂದರೇಶ್, ಬೆಲಾ ತ್ರಿವೇದಿ ಹಾಗೂ ಹಿರಿಯ ವಕೀಲ ಪಿ ಎಸ್ ನರಸಿಂಹ ಅವರ ಹೆಸರುಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸ್ಸು ಮಾಡಿತ್ತು.