ನ್ಯಾ. ಸೋಮಶೇಖರ್ ಸುಂದರೇಶನ್
ನ್ಯಾ. ಸೋಮಶೇಖರ್ ಸುಂದರೇಶನ್ 
ಸುದ್ದಿಗಳು

ತಮ್ಮ ನೇಮಕಾತಿ ವಿಳಂಬ: ನ್ಯಾಯಮೂರ್ತಿ ಸೋಮಶೇಖರ್ ಸುಂದರೇಶನ್ ಹೇಳಿದ್ದೇನು?

Bar & Bench

ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನವೆಂಬರ್ 2023ರಲ್ಲಿ ನೇಮಕಗೊಂಡ ಜಸ್ಟೀಸ್‌ ಸೋಮಶೇಖರ್ ಸುಂದರೇಶನ್ ಅವರು ವಕೀಲ ಸಮುದಾಯದಿಂದ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆಯಲು ಉಂಟಾದ ದೀರ್ಘಕಾಲದ ವಿಳಂಬ ಮತ್ತು ಅಂತಹ ವಿಳಂಬಗಳನ್ನು ವಕೀಲರು ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಇತ್ತೀಚೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಈಚೆಗೆ ಬಾಂಬೆ ಹೈಕೋರ್ಟ್‌ ಆಯೋಜಿಸಿದ್ದ ಚಹಾಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗರ್ಭಧಾರಣೆ ಮತ್ತು ಹೆರಿಗೆಯ ನಡುವಿನ ದೀರ್ಘ ಅವಧಿ ಕೆಲವೊಮ್ಮೆ ಅಗತ್ಯವಾಗಿರುತ್ತದೆ. ಇನ್‌ಕ್ಯುಬೇಟರ್‌ಗಳ ಜೊತೆಗೆ ಕೆಲವೊಮ್ಮೆ ಇದಕ್ಕೆ ಹೆಚ್ಚಿನ ಬೆಂಬಲ ಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದ ಅವರು "ನಾನು ತಲೆ ತಗ್ಗಿಸಿ ಕೆಲಸ ಮಾಡುತ್ತಲೇ ಇರಬೇಕಾಗಿತ್ತು, ಹಾಗಾಗಿಯೇ ನಾನಿಲ್ಲಿ ಇದ್ದೇನೆ ಎಂದು ಹೇಳಲು ಸಂತೋಷವಾಗುತ್ತಿದೆ" ಎಂಬುದಾಗಿ ನುಡಿದರು.

ಸಮವಸ್ತ್ರಧಾರಿ ಪಡೆಯಾಗಿ ಸಂವಿಧಾನ ಎತ್ತಿಹಿಡಿಯಲು ಶ್ರಮಿಸುವುದು ವಕೀಲರ ಪಾತ್ರವಾಗಿರುತ್ತದೆ ಎಂದು ಅಭಿಪ್ರಾಯಪಟ್ಟ ನ್ಯಾ. ಸುಂದರೇಶನ್‌ ಅವರು ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಅವರು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದ ದಿನ ಹೇಳಿದ ಮಾತುಗಳನ್ನು ನೆನೆದರು.

"ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಅಂತರ್ಗತ ಹಕ್ಕು ಯಾವುದೇ ವಕೀಲರಿಗೆ ಇಲ್ಲ, ಆದರೆ ಅದು ಅಗತ್ಯ ಬಂದಾಗ ಪ್ರತಿಯೊಬ್ಬ ವಕೀಲರೂ ನಿರ್ವಹಿಸಲೇಬೇಕಾದ ಕರ್ತವ್ಯವಾಗಿದೆ" ಎಂದು ಅವರು ಹೇಳಿದ್ದರು" ಎಂಬುದಾಗಿ ತಿಳಿಸಿದರು.

...ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವ ಅಂತರ್ಗತ ಹಕ್ಕು ಯಾವುದೇ ವಕೀಲರಿಗೆ ಇಲ್ಲ, ಆದರೆ ಅದು ಅಗತ್ಯ ಬಂದಾಗ ಪ್ರತಿಯೊಬ್ಬ ವಕೀಲರೂ ನಿರ್ವಹಿಸಲೇಬೇಕಾದ ಕರ್ತವ್ಯವಾಗಿದೆ ಎಂದು ಅವರು ಹೇಳಿದ್ದರು.
ನ್ಯಾಯಮೂರ್ತಿ ರೋಹಿಂಟನ್ ನಾರಿಮನ್

ಯಾರಿಗಾದರೂ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಿದರೆ ಕಾನೂನು ಆಡಳಿತವನ್ನು ಮತ್ತು ಸಂವಿಧಾನವನ್ನು ಎತ್ತಿಹಿಡಿಯುವುದಕ್ಕಾಗಿ ನೀಡಬೇಕು ಎಂದ ನ್ಯಾ. ಸುಂದರೇಶನ್‌ ಅವರು ಕಕ್ಷಿದಾರರು ಹೇಳಿದ್ದನ್ನು ಹಂಚಿಕೊಳ್ಳುವಂತೆ ವಕೀಲರನ್ನು ಬಲವಂತಪಡಿಸಲಾಗದು. ಅತ್ಯಂತ ಸರ್ವಾಧಿಕಾರಿ ಆಡಳಿತಗಳಲ್ಲಿಯೂ, ಕನಿಷ್ಠ ಕಾಗದದ ಮೇಲಾದರೂ, ಅದು ಸಾರ್ವತ್ರಿಕವಾಗಿ ಕಾನೂನಾಗಿರುತ್ತದೆ ಎಂಬುದಾಗಿ ತಿಳಿಸಿದರು.

ನ್ಯಾಯಮೂರ್ತಿ ಹುದ್ದೆಗೆ ಪದೋನ್ನತಿ ನೀಡುವಂತೆ ಮೊದಲು ಶಿಫಾರಸು ಮಾಡಿದ ಸುಮಾರು ಎರಡು ವರ್ಷಗಳ ನಂತರ ಹಾಗೂ ಸುಪ್ರೀಂ ಕೋರ್ಟ್ ತನ್ನ ಶಿಫಾರಸನ್ನು ಪುನರುಚ್ಚರಿಸಿದ 10 ತಿಂಗಳ ನಂತರ ನ್ಯಾ. ಸುಂದರೇಶನ್ ಅವರನ್ನು 2023ರ ನವೆಂಬರ್‌ನಲ್ಲಿ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿತ್ತು.