Justice Abhijit Gangopadhyay Justice Soumen Sen 
ಸುದ್ದಿಗಳು

ರಾಜಕೀಯ ಪಕ್ಷದ ಪರ ನ್ಯಾ. ಸೇನ್‌ ಕಾರ್ಯನಿರ್ವಹಣೆ; ಸುಪ್ರೀಂ ಅವರ ಆದೇಶಗಳನ್ನು ಮರುಪರಿಶೀಲಿಸಲಿ: ನ್ಯಾ. ಗಂಗೋಪಾಧ್ಯಾಯ

ವಿಭಾಗೀಯ ಪೀಠದ ಆದೇಶವನ್ನು ನಿರ್ಲಕ್ಷಿಸಬೇಕು ಮತ್ತು ನಕಲಿ ಜಾತಿ ಪ್ರಮಾಣಪತ್ರ ಹಗರಣದ ತನಿಖೆಯನ್ನು ಸಿಬಿಐ ಪ್ರಾರಂಭಿಸಬೇಕು ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ ನಿರ್ದೇಶಿಸಿದ್ದಾರೆ.

Bar & Bench

ಕೋಲ್ಕತಾ ಹೈಕೋರ್ಟ್‌ನ ಏಕಸದಸ್ಯ ಪೀಠ ಮತ್ತು ವಿಭಾಗೀಯ ಪೀಠದ ನಡುವಿನ ವಿವಾದವು ಕೆಟ್ಟ ತಿರುವು ಪಡೆದುಕೊಂಡಿದ್ದು, ವಿಭಾಗೀಯ ಪೀಠದ ಮುಖ್ಯಸ್ಥರಾಗಿರುವ ನ್ಯಾಯಮೂರ್ತಿ ಸೌಮೆನ್ ಸೇನ್ ಅವರು "ರಾಜ್ಯದ ರಾಜಕೀಯ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಆರೋಪಿಸಿದ್ದಾರೆ [ಇತಿಶಾ ಸೊರೆನ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ].

ಗುರುವಾರ ತಡರಾತ್ರಿ ಅಪ್ಲೋಡ್ ಮಾಡಲಾದ ನಕಲಿ ಜಾತಿ ಪ್ರಮಾಣಪತ್ರಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಹೀಗೆ ಹೇಳಿದ್ದಾರೆ,

"ನ್ಯಾಯಮೂರ್ತಿ ಸೇನ್ ಅವರು ಈ ರಾಜ್ಯದ ಒಂದು ರಾಜಕೀಯ ಪಕ್ಷದ ಪರವಾಗಿ ಸ್ಪಷ್ಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಸುಪ್ರೀಂ ಕೋರ್ಟ್‌ ಭಾವಿಸಿದಲ್ಲಿ, ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅವರು ಹೊರಡಿಸಿದ ಆದೇಶಗಳನ್ನು ಮರುಪರಿಶೀಲಿಸಬೇಕು. ನ್ಯಾಯಮೂರ್ತಿ ಸೇನ್ ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಮುಂದೆ ಮಾಡಿದ್ದು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನು ರಕ್ಷಿಸುತ್ತಿದ್ದಾರೆ. ಅವರ ಈ ಕ್ರಮಗಳು ಸ್ಪಷ್ಟವಾಗಿ ದುರ್ನಡತೆಗೆ ಸಮನಾಗಿವೆ," ಎಂದಿದ್ದಾರೆ.

ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳ ವಿತರಣೆ ವ್ಯಾಪಕವಾಗಿದೆ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಹಲವಾರು ವ್ಯಕ್ತಿಗಳು ಇಂತಹ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ಕಲ್ಕತ್ತಾ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಬುಧವಾರ ಬೆಳಿಗ್ಗೆ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸುವಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ಆದೇಶ ಹೊರಡಿಸಿದ್ದರು.

ಈ ಆದೇಶ ಹೊರಡಿಸಿದ ಕೆಲವೇ ನಿಮಿಷಗಳಲ್ಲಿ, ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಅವರು ನ್ಯಾಯಮೂರ್ತಿಗಳಾದ ಸೌಮೆನ್ ಸೇನ್ ಮತ್ತು ಉದಯ್ ಕುಮಾರ್ ಅವರ ವಿಭಾಗೀಯ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು, ಅದೇ ದಿನ ಏಕ ಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿತ್ತು.

ನಂತರ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಈ ವಿಷಯವನ್ನು ಮತ್ತೆ ಕೈಗೆತ್ತಿಕೊಂಡು ಪ್ರಕರಣದ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ಎಜಿಗೆ ಆದೇಶಿಸಿದರು, ವಿಭಾಗೀಯ ಪೀಠವು ಹೊರಡಿಸಿದ ತಡೆಯಾಜ್ಞೆಯ ಬಗ್ಗೆ ತಮಗೆ ಮಾಹಿತಿ ನೀಡಲಾಗಿಲ್ಲ ಎಂದು ಹೇಳಿದರು.

ತದನಂತರ ವಿಭಾಗೀಯ ಪೀಠವು ಗುರುವಾರ ಬೆಳಿಗ್ಗೆ ಈ ವಿಷಯವನ್ನು ಮತ್ತೆ ಕೈಗೆತ್ತಿಕೊಂಡು, ನ್ಯಾಯಮೂರ್ತಿ ಗಂಗೋಪಾಧ್ಯಾಯ ಹೊರಡಿಸಿದ ಆದೇಶವನ್ನು ಬದಿಗೆ ಸರಿಸಿತು. ಈ ವಿಷಯ ಅಲ್ಲಿಗೆ ಮುಗಿಯಲಿಲ್ಲ.

ಗುರುವಾರ ಮತ್ತೆ ಈ ವಿಷಯವನ್ನು ಕೈಗೆತ್ತಿಕೊಂಡ ಏಕಸದಸ್ಯ ಪೀಠವು ಮೇಲ್ಮನವಿ ಮೆಮೊ ಇಲ್ಲದಿರುವಾಗ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಲು ವಿಭಾಗೀಯ ಪೀಠಕ್ಕೆ ಯಾವ ನಿಯಮ ಅನುಮತಿಸುತ್ತದೆ ಎಂದು ಎಜಿ ಅವರನ್ನು ಪ್ರಶ್ನಿಸಿದರು. ಇದಕ್ಕೆ ಎಜಿ ಅವರು ತಾನು ಈ ಪ್ರಶ್ನೆಗೆ ಉತ್ತರಿಸಲು ಜವಾಬ್ದಾರನಲ್ಲ ಎಂದಿದ್ದು, "ಏಕ ಸದಸ್ಯ ಪೀಠವು ವಿಭಾಗೀಯ ಪೀಠಕ್ಕೆ ಹೋಲಿಸಿದರೆ ಕೆಳ ನ್ಯಾಯಾಲಯವಾಗಿದೆ" ಎನ್ನುವ ಎಜಿಯವರ ಹೇಳಿಕೆಯನ್ನು ಆದೇಶದಲ್ಲಿ ದಾಖಲಿಸಿದರು.

ವಿಭಾಗೀಯ ಪೀಠವು ತನ್ನ ಆದೇಶವನ್ನು ತಡೆಹಿಡಿಯಲು ಯಾವುದೇ ತುರ್ತು ಇರಲಿಲ್ಲ ಎಂದು ನ್ಯಾ. ಗಂಗೋಪಾಧ್ಯಾಯ ಹೇಳಿದ್ದಾರೆ. "ತುರ್ತಿಗೆ ಕಾರಣವಾದ ಯಾವುದೇ ಅಂಶದ ಬಗ್ಗೆ ಆದೇಶದಲ್ಲಿ ಮಾಹಿತಿ ಇಲ್ಲ. ಅಂತಹ ತುರ್ತಿನ ಸಂಗತಿ ಏನಿತ್ತು? ರಾಜ್ಯದ ರಾಜಕೀಯ ಪಕ್ಷದೆಡೆಗೆ ಯಾರು ಆಸಕ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ?" ಎಂದು ಪ್ರಶ್ನಿಸಿದರು. ಈ ಆಧಾರದ ಮೇಲೆ, ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ವಿಭಾಗೀಯ ಪೀಠದ ಆದೇಶವನ್ನು ನಿರ್ಲಕ್ಷಿಸಬೇಕು ಮತ್ತು ಸಿಬಿಐ ತಕ್ಷಣ ತನಿಖೆ ಪ್ರಾರಂಭಿಸಬೇಕು ಎಂದರು.

"ಕಾನೂನುಬಾಹಿರ ಮೇಲ್ಮನವಿಯ ಮುಂದುವರಿಕೆಯಾಗಿ ವಿಭಾಗೀಯ ಪೀಠ ಆದೇಶ ಹೊರಡಿಸಿರುವುದರಿಂದ ಅದನ್ನು ನಿರ್ಲಕ್ಷಿಸುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆಯಿಲ್ಲ. 'ಆಸಕ್ತ ವ್ಯಕ್ತಿ ಗೌರವಾನ್ವಿತ ನ್ಯಾಯಮೂರ್ತಿ ಸೌಮೆನ್ ಸೇನ್' ಅವರ ಆಧಾರ ಸೇರಿದಂತೆ ಮೇಲೆ ತಿಳಿಸಿದ ಕಾರಣಗಳಿಗಾಗಿ ವಿಭಾಗೀಯ ಪೀಠವು ಹೊರಡಿಸಿದ ಕಾನೂನುಬಾಹಿರ ಆದೇಶವನ್ನು ನಾನು ನಿರ್ಲಕ್ಷಿಸಿದ್ದೇನೆ" ಎಂದು ಆದೇಶದಲ್ಲಿ ತಿಳಿಸಿದರು.

ನ್ಯಾಯಾಧೀಶರ ನಡುವಿನ ಕುತೂಹಲಕಾರಿ ಸಂಭಾಷಣೆ

ನ್ಯಾಯಮೂರ್ತಿ ಸೇನ್ ಅವರು ಇತ್ತೀಚೆಗೆ ನ್ಯಾಯಾಲಯದ ರಜೆಯ ಹಿಂದಿನ ಕೊನೆಯ ದಿನ ನ್ಯಾಯಮೂರ್ತಿ ಅಮೃತಾ ಸಿನ್ಹಾ ಅವರನ್ನು ತಮ್ಮ ಕೊಠಡಿಗೆ ಕರೆದು ಅಭಿಷೇಕ್ ಬ್ಯಾನರ್ಜಿಗೆ ರಾಜಕೀಯ ಭವಿಷ್ಯವಿದೆ ಮತ್ತು ಅವರಿಗೆ ತೊಂದರೆಯಾಗಬಾರದು ಎಂದು ಹೇಳಿದ್ದರು ಎಂದು ನ್ಯಾಯಮೂರ್ತಿ ಗಂಗೋಪಾಧ್ಯಾಯ ತಮ್ಮ ಆದೇಶದಲ್ಲಿ ಆರೋಪಿಸಿದ್ದಾರೆ.

ನ್ಯಾಯಮೂರ್ತಿ ಸಿನ್ಹಾ ಪ್ರಸ್ತುತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಬ್ಯಾನರ್ಜಿಗೆ ಸಂಬಂಧಿಸಿದ ವಿಷಯಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಬ್ಯಾನರ್ಜಿ ಭಾಗಿಯಾಗಿರುವ ಎರಡೂ ಪ್ರಕರಣಗಳನ್ನು ವಜಾಗೊಳಿಸುವಂತೆ ನ್ಯಾಯಮೂರ್ತಿ ಸೇನ್ ಅವರು ನ್ಯಾಯಮೂರ್ತಿ ಸಿನ್ಹಾ ಅವರಿಗೆ ತಿಳಿಸಿದ್ದಾರೆ.

"ನ್ಯಾಯಮೂರ್ತಿ ಸಿನ್ಹಾ ಅವರು ರಜೆಯಲ್ಲಿ ನನಗೆ ದೂರವಾಣಿ ಮೂಲಕ ಈ ವಿಷಯವನ್ನು ತಿಳಿಸಿದರು. ತರುವಾಯ, ನ್ಯಾಯಮೂರ್ತಿ ಸಿನ್ಹಾ ಅವರು ಇದನ್ನು ಈ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ತಿಳಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಇದನ್ನು ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಿಗೆ ತಿಳಿಸಿದ್ದಾರೆ ಎಂದು ನನಗೆ ತಿಳಿಸಲಾಯಿತು" ಎಂದು ಆದೇಶದಲ್ಲಿ ವಿವರಿಸಲಾಗಿದೆ.

[ಆದೇಶ ಓದಿ]

Itisha Soren v. Union of India.pdf
Preview