Justice SS Shinde
Justice SS Shinde 
ಸುದ್ದಿಗಳು

ಒಂದೇ ದಿನದಲ್ಲಿ ದಾಖಲೆಯ 190 ಪ್ರಕರಣಗಳ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ ನ್ಯಾ. ಎಸ್‌ ಎಸ್‌ ಶಿಂಧೆ

Bar & Bench

ಬಾಂಬೆ ಹೈಕೋರ್ಟ್‌ನ ನ್ಯಾ. ಎಸ್‌ ಎಸ್‌ ಶಿಂಧೆ ಅವರ ನೇತೃತ್ವದ ಏಕಸದಸ್ಯ ಪೀಠವು ಗುರುವಾರದಂದು ರಾತ್ರಿ 8ರ ವರೆಗೆ ಕಾರ್ಯನಿರ್ವಹಿಸುವ ಮೂಲಕ 190 ಪ್ರಕರಣಗಳ ವಿಚಾರಣೆ ನಡೆಸಿದೆ. ಕ್ರಿಮಿನಲ್‌ ಮನವಿಗಳು, ಪೆರೋಲ್‌ ಮತ್ತು ಫರ್ಲೊ (ದೀರ್ಘಕಾಲೀನ ಕಾರಾಗೃಹ ಶಿಕ್ಷೆಯ ವೇಳೆ ನೀಡುವ ಷರತ್ತು ಬದ್ಧ ಬಿಡುಗಡೆ) ಮನವಿಗಳು ಸೇರಿದಂತೆ 200ಕ್ಕೂ ಹೆಚ್ಚು ಪ್ರಕರಣಗಳು ಅವರ ಮುಂದೆ ಪಟ್ಟಿಯಾಗಿದ್ದವು.

ಬಾಂಬೆ ಹೈಕೋರ್ಟ್‌ ಸಾಮಾನ್ಯವಾಗಿ ಬೆಳಗ್ಗೆ 10.30 ರಿಂದ ಸಂಜೆ 4.30ರ ವರೆಗೆ ಸಾಮಾನ್ಯವಾಗಿ ಕೆಲಸ ನಿರ್ವಹಿಸುತ್ತದೆ. ನಿಗದಿತ ಅವಧಿಯಲ್ಲಿ ಪೀಠವು ವಿಚಾರಣೆ ಪೂರ್ಣಗೊಳಿಸಲು ಸಾಧ್ಯವಾಗದೇ ಇದ್ದುದರಿಂದ ರಾತ್ರಿ 8ವರೆಗೆ ವಿಚಾರಣೆ ನಡೆಸಿತು.

ಸಾಮಾನ್ಯ ಕೆಲಸದ ಅವಧಿಯ ನಂತರವೂ ಪ್ರಕರಣಗಳ ವಿಚಾರಣೆ ನಡೆಸುವುದು ಬಾಂಬೆ ಹೈಕೋರ್ಟ್‌ಗೆ ಹೊಸದೇನಲ್ಲ. ಈಚೆಗೆ ನಿವೃತ್ತರಾದ ನ್ಯಾ. ಎಸ್‌ ಜೆ ಕಥಾವಲ್ಲಾ ಅವರು ತಮಗೆ ನಿಗದಿಪಡಿಸಿದ ಪ್ರಕರಣಗಳ ವಿಚಾರಣೆ ನಡೆಸಲು ನಿಗದಿತ ಅವಧಿಗಿಂತಲೂ ಹೆಚ್ಚಿನ ಸಮಯದವರೆಗೆ ವಿಚಾರಣೆ ನಡೆಸಿದ್ದರು. ಅವರು 150 ಪ್ರಕರಣಗಳನ್ನು ಒಂದೇ ದಿನ ವಿಚಾರಣೆ ನಡೆಸಿದ್ದರು.

ಹೈಕೋರ್ಟ್‌ನಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಿರುವುದರಿಂದ ನ್ಯಾಯಮೂರ್ತಿಗಳು ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ವಿಚಾರಣೆ ನಡೆಸುವ ಉದ್ದೇಶದಿಂದ ನಿಗದಿತ ಅವಧಿಗಿಂತ ಹೆಚ್ಚು ಕಾಲ ಕುಳಿತು ವಿಚಾರಣೆ ನಡೆಸುತ್ತಿದ್ದಾರೆ. ಬೇಸಿಗೆ ರಜೆಯ ಬಳಿಕ ತಮಗೆ ನಿಗದಿಪಡಿಸಿದ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲು ಕೆಲವು ಪೀಠಗಳು ನಿಗದಿತ ಅವಧಿಗಿಂತ ಹೆಚ್ಚಿನ ಸಮಯ ಕೆಲಸ ಮಾಡುವ ಮೂಲಕ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿವೆ. ಇವುಗಳಲ್ಲಿ ನ್ಯಾ. ಎಸ್‌ ವಿ ಗಂಗಾಪುರ್‌ವಾಲಾ ನೇತೃತ್ವದ ವಿಭಾಗೀಯ ಪೀಠ, ನ್ಯಾಯಮೂರ್ತಿಗಳಾದ ಪಿ ಡಿ ನಾಯಕ್‌ ಮತ್ತು ಭಾರತಿ ಡಾಂಗ್ರೆ ನೇತೃತ್ವದ ಏಕಸದಸ್ಯ ಪೀಠಗಳು ಸೇರಿವೆ.