ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿರುವ ನ್ಯಾ. ತಾಜ್ ಅಲಿ ಮೌಲಾಸಾಬ್ ನದಾಫ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಇಂದು ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ನ್ಯಾ. ತಾಜ್ ಅಲಿ ನದಾಫ್ ಅವರು “ಈ ಘನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ನನಗೆ ಒದಗಿ ಬಂದಿದ್ದು, ಸಿಜೆ ಅಂಜಾರಿಯಾ ಮತ್ತು ಸಹೋದ್ಯೋಗಿ ನ್ಯಾಯಮೂರ್ತಿಗಳ ಮಾರ್ಗದರ್ಶನ ಕೋರುತ್ತೇನೆ” ಎಂದರು.
ನ್ಯಾಯಮೂರ್ತಿ ನದಾಫ್ ಅವರ ನೇಮಕಾತಿಯೊಂದಿಗೆ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಒಟ್ಟು 62 ಹುದ್ದೆಗಳು ಹೈಕೋರ್ಟ್‌ನಲ್ಲಿದ್ದು, ಇನ್ನೂ 12 ಹುದ್ದೆಗಳು ಖಾಲಿ ಇವೆ.
ನ್ಯಾ. ನದಾಫ್ ಅವರು 1976ರಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನಲ್ಲಿ ಜನಿಸಿದರು. ನ್ಯಾ. ನದಾಫ್ ಅವರ ತಂದೆ ಮೌಲಾ ಸಾಬ್ ನದಾಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಕಾರವಾರ ಜಿಲ್ಲೆಯ ಪೊಲೀಸ್ ಪ್ರಧಾನ ಕಚೇರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಬೆಂಗಳೂರಿನ ಚಾಮರಾಜಪೇಟೆಯ ಸೇಂಟ್ ಜೋಸೆಫ್ ಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದಿದ್ದು, ಪಿಯುಸಿಯನ್ನು ಕೆಎಲ್‌ಇ ಸೊಸೈಟಿಯ ನಿಜಲಿಂಗಪ್ಪ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಬಿಎ, ಎಲ್‌ಎಲ್‌ಬಿ ಪದವಿಯನ್ನು ಪೂರೈಸಿದ್ದಾರೆ.
ಕೆಎಸ್‌ಬಿಸಿಯಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿದ್ದ ನ್ಯಾ. ನದಾಫ್ ಅವರು ವಕೀಲರಾದ ಕೆ ಅಪ್ಪಾರಾವ್, ಅಶೋಕ್ ಆರ್. ಕಲ್ಯಾಣಶೆಟ್ಟಿ ಅವರ ಕಚೇರಿಯಲ್ಲಿ ವೃತ್ತಿ ಬದುಕು ಆರಂಭಿಸಿದ್ದರು. ವಕೀಲ ಪಿ ಕೆ ಪೊನ್ನಪ್ಪ ಅವರ ಮಾರ್ಗದರ್ಶನದಲ್ಲಿ ವಿಚಾರಣಾಧೀನ ನ್ಯಾಯಾಲಯದಲ್ಲೂ ವಕೀಲಿಕೆ ಮಾಡಿದ್ದಾರೆ.
ಸಿವಿಲ್, ಕ್ರಿಮಿನಲ್ ವಿಭಾಗದಲ್ಲಿ ಹೆಚ್ಚು ನೈಪುಣ್ಯತೆ ಸಾಧಿಸಿರುವ ನ್ಯಾ. ನದಾಫ್ ಅವರು ಹೈಕೋರ್ಟ್‌ನ ಧಾರವಾಡ ಸಂಚಾರಿ ಪೀಠ ಆರಂಭವಾದ ನಂತರ ಧಾರವಾಡದಲ್ಲಿ ನೆಲೆಸಿ ವೃತ್ತಿ ಮುಂದುವರಿಸಿದ್ದರು. ನಾಗರಿಕ, ಸಾಂವಿಧಾನಿಕ, ಕಾರ್ಮಿಕ ಮತ್ತು ಅಪರಾಧಿಕ ವಿಷಯಗಳಲ್ಲಿ ವಕೀಲಿಕೆ ನಡೆಸುವ ಮೂಲಕ ಅಲ್ಪಾವಧಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಪ್ರಖ್ಯಾತ ವಕೀಲರಾಗಿ ಹೆಸರು ಮಾಡಿದರು. ಹಲವು ನಾಗರಿಕ ಮತ್ತು ಅಪರಾಧಿಕ ಪ್ರಕರಣಗಳಲ್ಲಿ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿದ್ದರು. 2020ರಲ್ಲಿ ಹೈಕೋರ್ಟ್, ಜಿಲ್ಲಾ ನ್ಯಾಯಾಂಗ ಕೋಶದಲ್ಲಿ ಅರ್ಜಿದಾರರ ಪರ ವಾದಿಸುವ ಸಲಹೆಗಾರರಾಗಿ ನೇಮಕವಾಗಿದ್ದರು.
ನ್ಯಾ. ನದಾಫ್ ಅವರಿಗೆ ಪತ್ನಿ, ಒಬ್ಬ ಪುತ್ರಿ ಮತ್ತು ಪುತ್ರ ಇದ್ದಾರೆ. ಹಿರಿಯ ಸಹೋದರ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಿರಿಯ ಸಹೋದರ ಹಿರಿಯ ಸಿವಿಲ್ ನ್ಯಾಯಾಧೀಶರಾಗಿದ್ದಾರೆ. ಉತ್ತಮ ಗಾಯಕರಾಗಿಯೂ ಹೆಸರು ಮಾಡಿರುವ ನ್ಯಾ. ನದಾಫ್ ಅವರು ಕೀರ್ತನೆಗಳು, ದೇಶಭಕ್ತಿ ಮತ್ತು ಭಾವಗೀತೆಗಳನ್ನು ಹಾಡಿದ್ದಾರೆ.