Justice V Srishananda 
ಸುದ್ದಿಗಳು

ಮುಕ್ತ ನ್ಯಾಯಾಲಯದಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಗಳ ಸಂಬಂಧ ವಿಷಾದ ವ್ಯಕ್ತಪಡಿಸಿದ ನ್ಯಾ. ಶ್ರೀಶಾನಂದ

ಕಲಾಪದ ವೇಳೆಗೆ ನಾನು ಕೆಲವು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಅವು ಯಾವುದೇ ವ್ಯಕ್ತಿ ಸಮುದಾಯದ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಮಾಡಲಾಗಿಲ್ಲ ಎಂದು ವಿಷಾದ.

Bar & Bench

ನ್ಯಾಯಾಲಯದ ಕಲಾಪದ ವೇಳೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದ ಹಾಗೂ ಸುಪ್ರೀಂ ಕೋರ್ಟ್‌ನ ಅನಪೇಕ್ಷಿತ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಶನಿವಾರ ಮುಕ್ತ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ವಿಚಾರಣೆಯೊಂದರ ವೇಳೆ, ಮುಸ್ಲಿಂ ಬಾಹುಳ್ಯ ಪ್ರದೇಶವಾದ (ಬೆಂಗಳೂರಿನ) ಗೋರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಏಕೆಂದರೆ ಅದು ಪಾಕಿಸ್ತಾನದಲ್ಲಿದೆ ಎನ್ನುವ ಅವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಅಗಿತ್ತು. ಅದೇ ರೀತಿ, ಮಹಿಳಾ ವಕೀಲೆಯೊಬ್ಬರ ಜೊತೆ ಕೀಳು ಅಭಿರುಚಿಯಿಂದ ಮಾತನಾಡಿದ್ದ ವಿಡಿಯೋ ಕೂಡ ವ್ಯಾಪಕವಾಗಿ ಪ್ರಸರಣಗೊಂಡಿತ್ತು. ಇವುಗಳನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಸೂಚಿಸಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಿಗೇ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಮುಕ್ತ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಶನಿವಾರ ಮಧ್ಯಾಹ್ನ ಭೋಜನ ಬಳಿಕ ಕಲಾಪ ಆರಂಭವಾಗುತ್ತಿದ್ದಂತೆ ನ್ಯಾ. ಶ್ರೀಶಾನಂದ ಅವರು ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಹಿರಿಯ ವಕೀಲರ ಸಮ್ಮುಖದಲ್ಲಿ “ಕಲಾಪದ ವೇಳೆ ನಾನು ವ್ಯಕ್ತಪಡಿಸಿರುವ ಅಭಿಪ್ರಾಯವು ಯಾವುದೇ ವ್ಯಕ್ತಿ ಸಮುದಾಯದ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶ ಹೊಂದಿರಲಿಲ್ಲ. ನನ್ನ ಹೇಳಿಕೆಯಿಂದ ಯಾವುದೇ ಸಮಾಜ ಅಥವಾ ವ್ಯಕ್ತಿಯ ಮನಸ್ಸಿಗೆ ಧಕ್ಕೆಯಾಗಿದ್ದರೆ ಅಂತರಾಳದಿಂದ ವಿಷಾದ ವ್ಯಕ್ತಪಡಿಸುತ್ತೇನೆ” ಎಂಬ ಒಕ್ಕಣೆಯನ್ನು ಓದಿದ್ದಾರೆ.

“ರಿಜಿಸ್ಟ್ರಾರ್‌ ಜನರಲ್‌ ಕಚೇರಿಯ ಸೂಚನೆಯ ಮೇರೆಗೆ ಮಧ್ಯಾಹ್ನ 2.30ರ ವೇಳೆಗೆ ವಕೀಲರ ಸಂಘದ ಪದಾಧಿಕಾರಿಗಳು ನ್ಯಾ. ಶ್ರೀಶಾನಂದ ಅವರ ಪೀಠದ ಮುಂದೆ ಹಾಜರಾಗಿದ್ದೆವು. ಮುದ್ರಿತ ಒಕ್ಕಣೆಯನ್ನು ನ್ಯಾಯಮೂರ್ತಿಗಳು ಓದಿದರು” ಎಂದು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದರು.

ಆ ಬಳಿಕ “ನೀವು (ನ್ಯಾ.ಶ್ರೀಶಾನಂದ) ಪ್ರಾಮಾಣಿಕರಾದ ನ್ಯಾಯಮೂರ್ತಿಗಳಾಗಿದ್ದೀರಿ. ಕಿರಿಯ ವಕೀಲರಿಗೆ ತಾವು ಉತ್ತೇಜನ ನೀಡಬೇಕು. ನಿಮ್ಮ ಪೀಠದ ಮುಂದೆ ಕಿರಿಯ ವಕೀಲರು ವಾದಿಸಲು ಹೆದರುವಂತಿರಬಾರದು. ಅನಗತ್ಯ ಮಾತುಗಳನ್ನು ಆಡಬಾರದು ಎಂದು ಸಲಹೆ ನೀಡಿದ್ದೇವೆ. ಇದಕ್ಕೆ ನ್ಯಾಯಮೂರ್ತಿಗಳೂ ಸಹಮತಿಸಿದ್ದಾರೆ” ಎಂದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌ ಅವರು “ಬಾರ್‌ ಅಂಡ್‌ ಬೆಂಚ್‌”ಗೆ ನ್ಯಾ.‌ ಶ್ರೀಶಾನಂದ ಅವರು ವಿಷಾದ ವ್ಯಕ್ತಪಡಿಸಿದ ವಿಚಾರವನ್ನು ಖಾತರಿಪಡಿಸಿದ್ದಾರೆ. “ನ್ಯಾಯಮೂರ್ತಿಗಳು ಒಕ್ಕಣೆ ಓದಿದ ಬಳಿಕ ಬೆಂಗಳೂರು ವಕೀಲರ ಸಂಘದ ಸದಸ್ಯರು ತಮ್ಮ ಅಭಿಪ್ರಾಯ ಹೇಳಲು ಆರಂಭಿಸಿದರು. ಆಗ ನ್ಯಾಯಮೂರ್ತಿಗಳು ನಿಮ್ಮೆಲ್ಲರ ಅಭಿಪ್ರಾಯ ಗೌರವಿಸುತ್ತೇನೆ. ಮುಂದೆ ಅದರಂತೆ ನಡೆಯೋಣ ಎಂದಿದ್ದಾರೆ” ಎಂದು ಎಎಸ್‌ಜಿ ಕಾಮತ್‌ ಅವರು ತಿಳಿಸಿದರು.

ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರೂ ನ್ಯಾ. ಶ್ರೀಶಾನಂದ ಅವರು ವಿಷಾದ ವ್ಯಕ್ತಪಡಿಸಿದ ವಿಚಾರವನ್ನು ದೃಢಪಡಿಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ಹಿರಿ-ಕಿರಿಯ ವಕೀಲರು ಇದ್ದರು ಎನ್ನಲಾಗಿದೆ.

ಬಾಡಿಗೆ ನಿಯಂತ್ರಣ ಕಾಯಿದೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಆಗಸ್ಟ್‌ 28ರಂದು ನ್ಯಾ. ಶ್ರೀಶಾನಂದ ಅವರು “ಮುಸ್ಲಿಂ ಬಾಹುಳ್ಯ ಪ್ರದೇಶವಾದ (ಬೆಂಗಳೂರಿನ) ಗೋರಿಪಾಳ್ಯದ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಅದು ಪಾಕಿಸ್ತಾನದಲ್ಲಿದೆ...” ಎಂದು ಮುಕ್ತ ನ್ಯಾಯಾಲಯದಲ್ಲಿ ಹೇಳಿದ್ದರು. ಆನಂತರ ಪ್ರತಿವಾದಿ ವಕೀಲರೊಬ್ಬರಿಗೆ ಪ್ರಶ್ನೆ ಕೇಳುತ್ತಿದ್ದಾಗ ಮಧ್ಯಪ್ರವೇಶಿಸಿದ ಮಹಿಳಾ ವಕೀಲರೊಬ್ಬರನ್ನು ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡಿದ್ದರು. “ಅವರ ಬಗ್ಗೆ (ಎದುರು ಪಕ್ಷ) ನಿಮಗೆ ಪೂರ್ತಿ ಗೊತ್ತಿದೆ ! ನಾಳೆ ಬೆಳಿಗ್ಗೆ ಕೇಳಿದರೆ ಇನ್ನೇನಾದರೂ ಹೇಳುತ್ತೀರಿ. ಯಾವ ಬಣ್ಣದ ಒಳ ಉಡುಪು ಧರಿಸಿದ್ದಾರೆ ಎಂದೂ ಹೇಳುತ್ತೀರಿ” ಎಂದು ವಕೀಲೆಯನ್ನು ಉದ್ದೇಶಿಸಿ ಲಘುವಾಗಿ ಮಾತನಾಡಿದ್ದರು. ಈ ಎರಡು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

ಇದರ ಬೆನ್ನಿಗೇ, ಶುಕ್ರವಾರ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರಿಂದ ವರದಿ ಕೇಳಿದೆ.

“ಕಲಾಪದ ಸಂದರ್ಭದಲ್ಲಿ ನ್ಯಾ. ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ನೀಡಿದ ಕೆಲ ಹೇಳಿಕೆಗಳ ಬಗ್ಗೆ ನಮ್ಮ ಗಮನ ಸೆಳೆಯಲಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ನಾವು ಎಜಿ ಮತ್ತು ಎಸ್‌ಜಿ ಅವರನ್ನು ಕೇಳಿಕೊಳ್ಳುತ್ತಿದ್ದೇವೆ.  ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರಿಗೆ ತಿಳಿಸುತ್ತಿದ್ದೇವೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಂದ ಆಡಳಿತಾತ್ಮಕ ನಿರ್ದೇಶನಗಳನ್ನು ಪಡೆದು 2 ವಾರಗಳಲ್ಲಿ ಈ ಪ್ರಕ್ರಿಯೆ ಕೈಗೊಳ್ಳಬಹುದು, ” ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.

ಇಂತಹ ಘಟನೆಗಳು ಮರುಕಳಿಸದಿರುವ ನಿಟ್ಟಿನಲ್ಲಿ ತಾನು ಕೆಲ ಮೂಲಭೂತ ಮಾರ್ಗಸೂಚಿಗಳನ್ನು ರೂಪಿಸುವ ಸಾಧ್ಯತೆಗಳಿವೆ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.