ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ನ 35ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ. ವಿಭು ಬಕ್ರು

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾ. ವಿಭು ಬಕ್ರು ಅವರಿಗೆ ಪ್ರಮಾಣ ವಚನ ಬೋಧಿಸಿದರು.

Bar & Bench

ಕರ್ನಾಟಕ ಹೈಕೋರ್ಟ್‌ನ 35ನೇ ಮುಖ್ಯ ನ್ಯಾಯಮೂರ್ತಿಯಾಗಿ ವಿಭು ಬಕ್ರು ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾ. ವಿಭು ಬಕ್ರು ಅವರಿಗೆ ಪ್ರಮಾಣ ವಚನ ಬೋಧಿಸಿದರು. ನ್ಯಾ. ಬಕ್ರು ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ವಿ ಕಾಮೇಶ್ವರ ರಾವ್‌ ಅವರು ವೇದಿಕೆಯಲ್ಲಿದ್ದರು. ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಹೈಕೋರ್ಟ್‌ ನ್ಯಾಯಮೂರ್ತಿಗಳು ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದರು.

ಕಳೆದ ಮೇ 26ರಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಕೊಲಿಜಿಯಂ ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ವಿಭು ಬಖ್ರು ಅವರನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಜುಲೈ 14ರಂದು ಕೇಂದ್ರ ಸರ್ಕಾರವು ವಿಭು ಬಕ್ರು ಅವರನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿ ಅಧಿಸೂಚನೆ ಪ್ರಕಟಿಸಿತ್ತು.

ನ್ಯಾ. ಬಕ್ರು ಅವರ ಕಿರು ಪರಿಚಯ

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿರುವ ನ್ಯಾ. ಬಖ್ರು ಅವರು 1966ರಲ್ಲಿ ನಾಗಪುರದಲ್ಲಿ ಜನಿಸಿದರು. ಅವರು ದೆಹಲಿಯ ಮಥುರಾ ರಸ್ತೆಯಲ್ಲಿರುವ ದೆಹಲಿ ಪಬ್ಲಿಕ್‌ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, 1987ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. 1989ರಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿಯೂ ಅರ್ಹತೆ ಪಡೆದರು. ಆನಂತರ 1990ರಲ್ಲಿ ಎಲ್‌ಎಲ್‌ಬಿ ಪದವಿ ಪಡೆದು, ಅದೇ ವರ್ಷ ದೆಹಲಿ ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದರು.

ನ್ಯಾ. ಭಕ್ರು ಅವರು ವಕೀಲರಾಗಿದ್ದ ಅವಧಿಯಲ್ಲಿ ಸುಪ್ರೀಂ ಕೋರ್ಟ್‌, ದೆಹಲಿ ಹೈಕೋರ್ಟ್‌, ಕಂಪನಿ ಕಾನೂನು ಮಂಡಳಿ ಮತ್ತು ಇತರೆ ನ್ಯಾಯ ಮಂಡಳಿಗಳಲ್ಲಿ ವಕೀಲಿಕೆ ಮಾಡಿದ್ದಾರೆ. 2011ರಲ್ಲಿ ಹಿರಿಯ ವಕೀಲರಾಗಿ ಅವರು ಪದೋನ್ನತಿ ಪಡೆದಿದ್ದರು. 2013ರ ಏಪ್ರಿಲ್‌ 17ರಂದು ದೆಹಲಿ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2015ರ ಮಾರ್ಚ್‌ 18ರಂದು ಕಾಯಂಗೊಂಡಿದ್ದರು.

ರಾಜಭವನದ ಗಾಜಿನ ಮನೆಯಲ್ಲಿ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾದ ಜಯಂತ್‌ ಬ್ಯಾನರ್ಜಿ ಮತ್ತು ದಿನೇಶ್‌ ಕುಮಾರ್‌ ಸಿಂಗ್‌ ಅವರಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಪ್ರಮಾಣ ವಚನ ಬೋಧಿಸಿದರು. ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಉಪಸ್ಥಿತರಿದ್ದರು.