Justice Yashwant Varma 
ಸುದ್ದಿಗಳು

ಆಂತರಿಕ ಸಮಿತಿ ಆರೋಪ ಎತ್ತಿಹಿಡಿದ ನಂತರವೂ ರಾಜೀನಾಮೆ ನೀಡಲು ನಿರಾಕರಿಸಿದ ನ್ಯಾ. ವರ್ಮಾ

ಪ್ರಸ್ತುತ ಅಲಾಹಾಬಾದ್ ಹೈಕೋರ್ಟ್‌ ನ್ಯಾಯಮೂರ್ತಿಯಾಗಿರುವ ಯಶವಂತ್‌ ವರ್ಮಾ ಅವರು ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ವೇಳೆ ಅವರ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ನಗದು ದೊರೆತಿತ್ತು. ಈ ಕುರಿತು ಸಮಿತಿ ತನಿಖೆ ನಡೆಸಿತ್ತು.

Bar & Bench

ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ಆರೋಪದ ತನಿಖೆ ನಡೆಸಿದ ಆಂತರಿಕ ಸಮಿತಿಯು ತಮ್ಮ ವಿರುದ್ಧ ಆರೋಪ ಹೊರಿಸಿದ ನಂತರವೂ ನ್ಯಾ. ಯಶವಂತ್‌ ವರ್ಮಾ ಅವರು ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.

ಮೂಲಗಳ ಪ್ರಕಾರ, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಆಂತರಿಕ ಸಮಿತಿಯ ವರದಿಯನ್ನು ಸ್ವೀಕರಿಸಿದ ನಂತರ ನ್ಯಾಯಮೂರ್ತಿ ವರ್ಮಾ ಅವರನ್ನು ರಾಜೀನಾಮೆ ನೀಡುವಂತೆ ಅಥವಾ ಮಹಾಭಿಯೋಗ ಪ್ರಕ್ರಿಯೆಗಳನ್ನು (ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆಪಾದನೆಗಳು ಸಾಬೀತಾದ ನಂತರ ಶಾಸನಸಭೆಯ ಮೂಲಕ ಅವರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆ) ಎದುರಿಸುವಂತೆ ಸೂಚಿಸಿದ್ದರು.

ಆದರೆ, ನ್ಯಾಯಮೂರ್ತಿ ವರ್ಮಾ ನ್ಯಾಯಮೂರ್ತಿ ಹುದ್ದೆ ತೊರೆಯಲು ನಿರಾಕರಿಸಿದ್ದರಿಂದ ಸಿಜೆಐ ಖನ್ನಾ ಅವರು ಆಂತರಿಕ ಸಮಿತಿಯ ವರದಿ ಮತ್ತು ಅದಕ್ಕೆ ನ್ಯಾಯಮೂರ್ತಿ ವರ್ಮಾ ಅವರು ಸಲ್ಲಿಸಿರುವ ಪ್ರತಿಕ್ರಿಯೆಯನ್ನು ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಕಳುಹಿಸಿದ್ದು ನ್ಯಾ. ವರ್ಮಾ ಅವರ ಪದಚ್ಯುತಿಗೆ ಕೋರಿದ್ದಾರೆ.

ಆಂತರಿಕ ಸಮಿತಿಯ ಪ್ರತಿಕೂಲ ಶೋಧನೆಗಳ ನಂತರವೂ ವರ್ಮಾ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದರಿಂದಾಗಿ ಅವರನ್ನು ಪದಚ್ಯುತಿಗೊಳಿಸಲು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಸಿಜೆಐ ಅವರು ವರದಿ ಮಾಡಬೇಕಾದುದು ಆಂತರಿಕ ಪ್ರಕ್ರಿಯೆಯ ಭಾಗವಾಗಿದೆ.

ಇದರರ್ಥ ಚೆಂಡು ಈಗ ಸರ್ಕಾರ ಮತ್ತು ಸಂಸತ್ತಿನ ಅಂಗಳದಲ್ಲಿದೆ. ನ್ಯಾಯಮೂರ್ತಿಗಳ ಪದಚ್ಯುತಿಗೆ ಸರ್ಕಾರವು ಮಹಾಭಿಯೋಗ ಪ್ರಕ್ರಿಯೆ ಪ್ರಾರಂಭಿಸಬಹುದಾಗಿದೆ.

ನ್ಯಾಯಮೂರ್ತಿ ವರ್ಮಾ ಅವರ ಪ್ರಕರಣದ ಕುರಿತು ತನಿಖೆಗೆ ನೇಮಿಸಲಾಗಿದ್ದ ಸಮಿತಿಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಇದ್ದರು.

ಸಮಿತಿಯು ಮಾರ್ಚ್ 25 ರಂದು ತನಿಖೆಯನ್ನು ಪ್ರಾರಂಭಿಸಿತ್ತು ಮತ್ತು ಮೇ 4 ರಂದು ಸಿಜೆಐ ಖನ್ನಾ ಅವರಿಗೆ ತನ್ನ ವರದಿಯನ್ನು ಸಲ್ಲಿಸಿತ್ತು.

ಹಿನ್ನೆಲೆ: ನ್ಯಾಯಮೂರ್ತಿ ವರ್ಮಾ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿ ಮಾರ್ಚ್ 14ರ ಸಂಜೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಅಪಾರ ಪ್ರಮಾಣದ ಸುಟ್ಟು ಕರಕಲಾದ ಹಣವನ್ನು ವಶಪಡಿಸಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.

ನ್ಯಾಯಮೂರ್ತಿ ವರ್ಮಾ ಮತ್ತು ಅವರ ಪತ್ನಿ ಆಗ ದೆಹಲಿಯಲ್ಲಿ ಇರಲಿಲ್ಲ. ಮಧ್ಯಪ್ರದೇಶದ ಪ್ರವಾಸದಲ್ಲಿದ್ದರು. ಬೆಂಕಿ ಅವಘಡ ಸಂಭವಿಸಿದಾಗ ಅವರ ಮಗಳು ಮತ್ತು ವೃದ್ಧ ತಾಯಿ ಮಾತ್ರ ಮನೆಯಲ್ಲಿದ್ದರು.

ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ತಮ್ಮ ನಿವಾಸದಲ್ಲಿ ಪತ್ತೆಯಾದ ನಗದಿನ ವಿಚಾರವಾಗಿ ಎದುರಾದ ಭ್ರಷ್ಟಾಚಾರದ ಆರೋಪಗಳನ್ನು ನಿರಾಕರಿಸಿದ್ದರು. ತಮ್ಮ ವಿರುದ್ಧ ಪಿತೂರಿ ಮಾಡಲಾಗಿದೆ ಎಂದು ಹೇಳಿದ್ದರು. ನಂತರದ ಬೆಳವಣಿಗೆಗಳಲ್ಲಿ ಸಿಜೆಐ ಅವರು ಈ ಆರೋಪಗಳ ಬಗ್ಗೆ ಆಂತರಿಕ ತನಿಖೆಯನ್ನು ನಡೆಸಲು ಮಾರ್ಚ್ 22 ರಂದು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು.

ವರ್ಮಾ ಅವರ ಮನೆಯಲ್ಲಿ ಸುಟ್ಟು ಕರಕಲಾಗಿದ್ದ ನಗದಿನ ವಿಡಿಯೋಗಳನ್ನುದೆಹಲಿ ಪೊಲೀಸ್ ಆಯುಕ್ತರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಹಂಚಿಕೊಂಡಿದ್ದರು. ಇದನ್ನು ಸುಪ್ರೀಂ ಕೋರ್ಟ್ ನಂತರ ಸಾರ್ವಜನಿಕಗೊಳಿಸಿತು. ಅಷ್ಟೇ ಅಲ್ಲದೆ ಹಿಂದೆಂದೂ ಕಂಡಿರದ ಬೆಳವಣಿಗೆಯಲ್ಲಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದ ಕುರಿತು ಸಲ್ಲಿಸಿದ ಪ್ರಾಥಮಿಕ ವರದಿ ಹಾಗೂ ನ್ಯಾಯಮೂರ್ತಿ ವರ್ಮಾ ಅವರ ಪ್ರತಿಕ್ರಿಯೆಯನ್ನೂ ಸುಪ್ರೀಂ ಕೋರ್ಟ್ ಪ್ರಕಟಿಸಿತ್ತು.