K Kavitha and ED
K Kavitha and ED  K Kavitha (Facebook)
ಸುದ್ದಿಗಳು

ಪಿಎಂಎಲ್ಎ ಅಡಿ ಮಹಿಳೆಯರಿಗೆ ವಿನಾಯಿತಿ: ಕೆ ಕವಿತಾಗೆ ಮಧ್ಯಂತರ ಜಾಮೀನು ಕೋರಿಕೆ; ಇ ಡಿ ವಿರೋಧ

Bar & Bench

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕವಿತಾ ಅವರು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ಆದೇಶವನ್ನು ದೆಹಲಿ ನ್ಯಾಯಾಲಯ ಗುರುವಾರ ಕಾಯ್ದಿರಿಸಿದೆ.

ಕವಿತಾ ಮತ್ತು ಜಾರಿ ನಿರ್ದೇಶನಾಲಯದ ವಾದ ಆಲಿಸಿದ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ತೀರ್ಪು ಕಾಯ್ದಿರಿಸಿದರು.

ಕವಿತಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ಸೆಕ್ಷನ್ 45ರ ಅಡಿಯಲ್ಲಿ ಕವಿತಾ ಅವರಿಗೆ ಜಾಮೀನಿನ ಅನುಕೂಲ ಕಲ್ಪಿಸಲು ಮನವಿ ಮಾಡಿದರು. ಪಿಎಂಎಲ್‌ಎ ಅಡಿ ಜಾಮೀನಿಗೆ ಕಠಿಣ ಷರತ್ತುಗಳಿದ್ದರೂ ಮಹಿಳಾ ಆರೋಪಿಯನ್ನು ಬಿಡುಗಡೆ ಮಾಡುವುದನ್ನು ನ್ಯಾಯಾಲಯದ ವಿವೇಚನೆಗೆ ಬಿಟ್ಟಿರುವುದರ ಬಗ್ಗೆ ಈ ಸೆಕ್ಷನ್‌ ಹೇಳುತ್ತದೆ.

ಇಲ್ಲಿ ಮಹಿಳೆಗೆ ಶಾಸಕಾಂಗ ಪ್ರತ್ಯೇಕ ಅವಕಾಶವನ್ನು ಕಲ್ಪಿಸಿದ್ದು ಅದನ್ನು ವಾಸ್ತವಿಕ ಉದ್ದೇಶ ಹಾಗೂ ತತ್ವಾದರ್ಶದ ಹಿನ್ನೆಲೆಯಲ್ಲಿ ಪರಿಗಣಿಸಬೇಕು. ಅಲ್ಲದೆ ಕವಿತಾ ಅವರ ಮಗ ಪರೀಕ್ಷೆ ಬರೆಯುತ್ತಿರುವುದರಿಂದ ಆಕೆಯ ಉಪಸ್ಥಿತಿ ಮಗನಿಗೆ ಅಗತ್ಯವಿದೆ ಎಂದು ಸಿಂಘ್ವಿ ಮನವಿ ಮಾಡಿದರು.

ಈ ಎರಡೂ ವಿಚಾರಗಳಿಗೆ ಜಾಮೀನು ನೀಡುವುದಕ್ಕೆ ಇ ಡಿ ವಿರೋಧ ವ್ಯಕ್ತಪಡಿಸಿತು. ಯಾವುದೇ ವಿನಾಯಿತಿ ಇರುವುದು ಸಾಮಾನ್ಯ ಮಹಿಳೆಯರಿಗೇ ವಿನಾ ಸ್ತ್ರೀ ರಾಜಕಾರಣಿಗೆ ಅಲ್ಲ. ಕವಿತಾ ಅವರ ಮಗನ ಹನ್ನೆರಡು ಪರೀಕ್ಷೆಗಳಲ್ಲಿ ಏಳು ಮುಕ್ತಾಯಗೊಂಡಿವೆ. ಆತನ ಬೆಂಬಲಕ್ಕೆ ಆತನ ತಂದೆ ಮತ್ತು ಸಹೋದರ ಇದ್ದಾರೆ ಎಂದಿತು.

ವಾದ ಆಲಿಸಿದ ನ್ಯಾಯಾಲಯ ಏಪ್ರಿಲ್ 8ರಂದು (ಬರುವ ಸೋಮವಾರ) ಪ್ರಕರಣದ ತೀರ್ಪು ನೀಡುವುದಾಗಿ ತಿಳಿಸಿತು.