Jail 
ಸುದ್ದಿಗಳು

ಅಕ್ರಮ ಮದ್ಯ ಮಾರಾಟ: ಪ್ರಕರಣದ 10 ತಿಂಗಳ ಬಳಿಕ ಆರೋಪಿಯನ್ನು ಕಸ್ಟಡಿಗೆ ಕೇಳಿದ ಅಧಿಕಾರಿಗಳು, ತಿರಸ್ಕರಿಸಿದ ನ್ಯಾಯಾಲಯ

ಈ ವೇಳೆಗಾಗಲೇ ತನಿಖೆ ಗಣನೀಯ ಮಟ್ಟದಲ್ಲಿ ಪೂರ್ಣಗೊಳ್ಳಬೇಕಿತ್ತು. ಈಗ ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಅಧಿಕಾರಿಗಳ ಲೋಪದೆಡೆಗೆ ಬೆರಳು ಮಾಡಿದ ಕೋರ್ಟ್‌

Bar & Bench

ಅಕ್ರಮ ಮದ್ಯ ಸಂಗ್ರಹ ಮತ್ತು ಮಾರಾಟದ ಪ್ರಕರಣವೊಂದರ ತನಿಖೆಯಲ್ಲಿ ವಿಳಂಬ ಧೋರಣೆ ಅನುಸರಿಸಿದ ಕಾರಣಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಆರೋಪಿಯನ್ನು ಕಸ್ಟಡಿಗೆ ಪಡೆಯಲು ಕಲಬುರ್ಗಿ ಪ್ರಧಾನ ಸತ್ರ ನ್ಯಾಯಾಲಯ ಇತ್ತೀಚೆಗೆ ಅನುಮತಿ ನಿರಾಕರಿಸಿದೆ.

“ಅಬಕಾರಿ ಇಲಾಖೆಯ ಅಧಿಕಾರಿಗಳು 2021ರ ಆಗಸ್ಟ್‌ 13ರಂದು ಆರೋಪಿಯ ಮನೆಯಲ್ಲಿ 8.640 ಲೀಟರ್‌ನಷ್ಟು ವಿಸ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆಗಾಗಲೇ ತನಿಖೆ ಗಣನೀಯ ಮಟ್ಟದಲ್ಲಿ ಪೂರ್ಣಗೊಳ್ಳಬೇಕಿತ್ತು. ಈಗ ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ” ಎಂದು ಹೇಳಿದ ಕಲಬುರ್ಗಿ ಪ್ರಧಾನ ಸತ್ರ ನ್ಯಾಯಾಲಯ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿ ಮಹಿಳೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕಲಬುರ್ಗಿ ತಾಲ್ಲೂಕಿನ ಪಟ್ಟಣ್‌ ಗ್ರಾಮದ ಜಯದೇವಿ ಎಂಬವರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಪ್ರಧಾನ ಸತ್ರ ನ್ಯಾಯಾಧೀಶರಾದ ಕೆ ಸುಬ್ರಮಣ್ಯ ಅವರು ಈ ಆದೇಶ ಮಾಡಿದ್ದಾರೆ.

ಆರೋಪಿಯು 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್‌, ಅಷ್ಟೇ ಮೌಲ್ಯದ ಭದ್ರತೆ ನೀಡಬೇಕು. 30 ದಿನಗಳ ಒಳಗೆ ಆರೋಪಿ ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರಾಗಿ, ಸಾಮಾನ್ಯ ಜಾಮೀನು ಪಡೆದುಕೊಳ್ಳಬೇಕು. ನಿರ್ದೇಶನ ನೀಡಿದ ನ್ಯಾಯಾಲಯದ ಮುಂದೆ ಹಾಜರಾಗಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ವಿಚಾರಣಾಧೀನ ನ್ಯಾಯಾಲಯದಿಂದ ಹೊರ ಹೋಗುವಂತಿಲ್ಲ. ಪ್ರಾಸಿಕ್ಯೂಷನ್‌ ಸಾಕ್ಷಿ ತಿರುಚುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ಆರೋಪಿಯ ಜಾಮೀನು ಮನವಿ ವಿರೋಧಿಸಿದ್ದ ಸರ್ಕಾರಿ ವಕೀಲರು “ಸೂಕ್ತ ಪರವಾನಗಿ ಪಡೆಯದೇ ಆರೋಪಿಯು ಮದ್ಯ ಮಾರಾಟ ಮಾಡುವ ಮೂಲಕ ಜನರ ಆರೋಗ್ಯಕ್ಕೆ ಕಂಟಕ ತರುತ್ತಿದ್ದಾರೆ. ಪ್ರಕರಣ ದಾಖಲಾದಾಗಿನಿಂದ ಆರೋಪಿಯು ನಾಪತ್ತೆಯಾಗಿದ್ದು, ತನಿಖೆಗೆ ಸಹಕರಿಸಿಲ್ಲ. ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಆಕೆ ಮತ್ತದೇ ಕೃತ್ಯದಲ್ಲಿ ಭಾಗವಹಿಸಬಹುದು. ಹೀಗಾಗಿ, ನಿರೀಕ್ಷಣಾ ಜಾಮೀನು ಮನವಿ ಪುರಸ್ಕರಿಸಬಾರದು” ಎಂದು ಆಕ್ಷೇಪಿಸಿದ್ದರು.

ಘಟನೆ ಹಿನ್ನೆಲೆ: ಕಲಬುರ್ಗಿ ತಾಲ್ಲೂಕಿನ ಪಟ್ಟಣ್‌ ಗ್ರಾಮದಲ್ಲಿ ಜಗದೇವಿ ಎಂಬವರು ತಮ್ಮ ಮನೆಯಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದರ ಖಚಿತ ಮಾಹಿತಿ ಪಡೆದು 2021ರ ಆಗಸ್ಟ್‌ 13ರಂದು ಕಲಬುರ್ಗಿಯ ಎರಡನೇ ರೇಂಜ್‌ನ ಅಬಕಾರಿ ಇನ್‌ಸ್ಪೆಕ್ಟರ್‌ ನರೇಂದ್ರಕುಮಾರ್‌ ಅವರ ತಂಡ ದಾಳಿ ನಡೆಸಿತ್ತು. ಆರೋಪಿಯ ಮನೆಯಲ್ಲಿದ್ದ ತಲಾ 180 ಎಂ ಎಲ್‌ ಒರಿಜಿನಲ್‌ ಚಾಯ್ಸ್‌ ವಿಸ್ಕಿಯ 48 ಟೆಟ್ರಾ ಪ್ಯಾಕೆಟ್‌ನ ಒಟ್ಟು 8.640 ಲೀಟರ್‌ ಮದ್ಯ ವಶಪಡಿಸಿಕೊಂಡಿದ್ದರು. ದಾಳಿ ಸೂಚನೆ ಪಡೆದು ಜಗದೇವಿ ನಾಪತ್ತೆಯಾಗಿದ್ದರು.

Jagadevi Versus Kalburgi Excise Range.pdf
Preview