ಸುದ್ದಿಗಳು

ಕೆಎಸ್‌ಸಿಎ ಚುನಾವಣೆ: ಶಾಂತಕುಮಾರ್‌ ನಾಮಪತ್ರ ಸಿಂಧುತ್ವ ಎತ್ತಿಹಿಡಿದ ಆದೇಶ ಪ್ರಶ್ನಿಸಿ ಮೇಲ್ಮನವಿ; ನಾಳೆ ವಿಚಾರಣೆ

“ಶಾಂತಕುಮಾರ್‌ ಅನರ್ಹತೆಯನ್ನು ನ್ಯಾಯಸಮ್ಮತ ತತ್ವಗಳ ಆಧಾರದಲ್ಲಿ ಬದಿಗೆ ಸರಿಸಲಾಗಿದೆ. ಇದು ಕೆಎಸ್‌ಸಿಎ ಬೈಲಾಗೂ ವಿರುದ್ಧವಾಗಿದೆ” ಎಂದು ಮೇಲ್ಮನವಿಯಲ್ಲಿ ಕಲ್ಪನಾ ವೆಂಕಟಾಚಾರ್‌ ಆಕ್ಷೇಪಿಸಿದ್ದಾರೆ.

Bar & Bench

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿರುವ ಪತ್ರಿಕೋದ್ಯಮಿ ಕೆ ಎನ್‌ ಶಾಂತಕುಮಾರ್‌ ಅವರ ನಾಮಪತ್ರ ಸಿಂಧುವಾಗಿದೆ ಎಂದಿದ್ದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆಯಾಗಿದ್ದು, ನಾಳೆ ಅರ್ಜಿಯ ವಿಚಾರಣೆ ನಡೆಯಲಿದೆ.

ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿ ಆನಂತರ ನಾಮಪತ್ರ ಹಿಂಪಡೆದಿದ್ದ ಕಲ್ಪನಾ ವೆಂಕಟಾಚಾರ್‌ ಅವರು ಶಾಂತಕುಮಾರ್‌ ನಾಮಪತ್ರ ಸಿಂಧು ಎಂದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾರೆ. ಕಲ್ಪನಾ ಅವರ ಪರವಾಗಿ ವಕಾಲತ್ತು ವಹಿಸಿರುವ ವಕೀಲೆ ಲಕ್ಷ್ಮಿ ಮೆನನ್‌ ಅವರು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠದ ಮುಂದೆ ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಇಂದು ಮನವಿ ಮಾಡಿದರು.

“ಶಾಂತಕುಮಾರ್‌ ಅನರ್ಹತೆಯನ್ನು ನ್ಯಾಯಸಮ್ಮತ ತತ್ವಗಳ ಆಧಾರದಲ್ಲಿ ಬದಿಗೆ ಸರಿಸಲಾಗಿದೆ. ಇದು ಕೆಎಸ್‌ಸಿಎ ಬೈಲಾಗೂ ವಿರುದ್ಧವಾಗಿದೆ” ಎಂದು ಲಕ್ಷ್ಮಿ ಮೆನನ್‌ ಪೀಠಕ್ಕೆ ವಿವರಿಸಿದರು. ಇದನ್ನು ಆಲಿಸಿದ ಪೀಠವು ನಾಳೆ ಮೇಲ್ಮನವಿ ವಿಚಾರಣೆ ನಡೆಸಲಾಗುವುದು ಎಂದಿತು.

ಮೇಲ್ಮನವಿಯಲ್ಲಿ ಶಾಂತಕುಮಾರ್‌, ಚುನಾವಣಾಧಿಕಾರಿ, ಕೆಎಸ್‌ಸಿಎ ಮತ್ತು ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಹಾಗೂ ಭಾರತ ತಂಡ ಮಾಜಿ ವೇಗದ ಬೌಲರ್‌ ವಿ ಎಸ್‌ ವೆಂಕಟೇಶ್‌ ಪ್ರಸಾದ್‌ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

ಪ್ರಜಾವಾಣಿ-ಡೆಕ್ಕನ್‌ ಹೆರಾಲ್ಡ್‌ ಕ್ರೀಡಾ ಕ್ಲಬ್‌ ₹200 ಚಂದಾ ಪಾವತಿಸಿಲ್ಲ ಎಂದು ತಮ್ಮ ನಾಮಪತ್ರ ತಿರಸ್ಕರಿಸಿದ್ದ ಚುನಾವಣಾಧಿಕಾರಿ ಕ್ರಮ ಪ್ರಶ್ನಿಸಿ ಕೆ ಎನ್‌ ಶಾಂತಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಶನಿವಾರ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿತ್ತು.

ಶಾಂತಕುಮಾರ್ ಅವರ ನಾಮಪತ್ರ ತಿರಸ್ಕರಿಸಿ ನವೆಂಬರ್ 24ರಂದು ಚುನಾವಣಾಧಿಕಾರಿ ಹೊರಡಿಸಿದ್ದ ಆದೇಶ ರದ್ದುಪಡಿಸಿತಲ್ಲದೇ, ನಿಗದಿತ ವೇಳಾಪಟ್ಟಿಯಂತೆ ಡಿಸೆಂಬರ್ 7ರಂದು ಕೆಎಸ್‌ಸಿಎ ಚುನಾವಣೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ನಿರ್ದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಲಾಗಿದೆ.