ದಕ್ಷಿಣ ಕನ್ನಡ ಜಿಲ್ಲೆಯ ನಿಸರ್ಗಧಾಮ ಪಿಲಿಕುಳದಲ್ಲಿ ಡಿಸೆಂಬರ್ ತಿಂಗಳಲ್ಲಿ ಕಂಬಳ ಸ್ಪರ್ಧೆ ಆಯೋಜನೆ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರವು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ನಡೆಯಲಿರುವ ಕಂಬಳ ಸ್ಪರ್ಧೆಯನ್ನು ಪ್ರಾಣಿ ಸಂಗ್ರಹಾಲಯದ ಸಮೀಪ ನಡೆಸಲಾಗುತ್ತಿರುವುದರಿಂದ ಅಲ್ಲಿನ ಪ್ರಾಣಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಆಕ್ಷೇಪಿಸಿ ಪ್ರಾಣಿ ದಯಾ ಸಂಘಟನೆಯಾದ ಪೆಟಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ನಡೆಸಿತು.
ವಿಚಾರಣೆಯ ವೇಳೆ ಸರ್ಕಾರದ ವಕೀಲೆ ನಿಲೋಫರ್ ಅಕ್ಬರ್ “ಕಂಬಳ ಆಯೋಜಿಸುವುದರಿಂದ ನಿಸರ್ಗಧಾಮದಲ್ಲಿನ ಪ್ರಾಣಿ ಸಂಕುಲಕ್ಕೆ ಸಮಸ್ಯೆಯಾಗಲಿದೆಯೇ ಎಂಬುದನ್ನು ಅರಿಯಲು ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿಯು ವರದಿ ನೀಡಿಲ್ಲ. ಹೀಗಾಗಿ, ಡಿಸೆಂಬರ್‌ನಲ್ಲಿ ಪಿಲಿಕುಳದಲ್ಲಿ ಸ್ಪರ್ಧೆ ಆಯೋಜಿಸುವುದಿಲ್ಲ” ಎಂದರು. ಇದನ್ನು ದಾಖಲಿಸಿಕೊಂಡ ನ್ಯಾಯಾಲಯವು ವಿಚಾರಣೆಯನ್ನು ಜನವರಿ 10ಕ್ಕೆ ಮುಂದೂಡಿತು.
ಪೆಟಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು “ತಜ್ಞರ ಸಮಿತಿಯ ವರದಿ ಬರುವವರೆ ಕಾಯಬಹುದು” ಎಂದರು.
ಕಂಬಳ ಸಮಿತಿ ಪ್ರತಿನಿಧಿಸಿದ್ದ ವಕೀಲ ವಿನೋದ್ ಕುಮಾರ್ ಹಾಜರಿದ್ದರು.