ಬಿಎಂಸಿ ಅಧಿಕಾರಿಗಳು ಕೈಗೊಂಡ ಕ್ರಮ ಅಧಿಕಾರದಲ್ಲಿರುವ ಪ್ರಭಾವಿಗಳ ಮತ್ತು ಇತ್ತೀಚಿನ ತಮ್ಮ ನಿಲುವುಗಳಿಂದ ವಿಚಲಿತರಾದವರ ಪ್ರತೀಕಾರದ ದ್ಯೋತಕವಾಗಿದೆ ಎಂದು ನಟಿ ಕಂಗನಾ ಅವರು ಬಾಂಬೆ ಹೈಕೋರ್ಟಿಗೆ ಪರಿಹಾರ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.
ಮುಂಬೈನಲ್ಲಿರುವ ತಮ್ಮ ಬಂಗಲೆಯ ಒಂದು ಭಾಗವನ್ನು ಕೆಡವಲು ಬಿಎಂಸಿ ಮುಂದಾಗಿದ್ದನ್ನು ವಿರೋಧಿಸಿ ನಟ ಕಂಗನಾ ರನೌತ್ ಅವರು ತಿದ್ದುಪಡಿ ಮಾಡಿದ ರಿಟ್ ಅರ್ಜಿ ಸಲ್ಲಿಸಿದ್ದು 2 ಕೋಟಿ ರೂ ಪರಿಹಾರಧನ ನೀಡಬೇಕೆಂದು ಕೋರಿದ್ದಾರೆ.
ನಟಿ ಪರ ವಕೀಲ ರಿಜ್ವಾನ್ ಸಿದ್ದಿಕಿ ಅವರು ಪ್ರಕರಣಕ್ಕೆ ಸಂಬಂಧಿಸಿದ ಹೊಸ ಸಂಗತಿಗಳನ್ನು ಸೇರಿಸಲು ಅನಮತಿ ಕೋರಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ತಿದ್ದುಪಡಿ ಮಾಡಿದ ರಿಟ್ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು.
ಹೊಸ ಅರ್ಜಿಯಲ್ಲಿ ದುರಸ್ತಿಗೂ ಮೊದಲು ಬಿಎಂಸಿ ಅನುಮತಿ ಕೋರಲಾಗಿತ್ತು. ಈ ಸಂಬಂಧ ಅಧಿಕಾರಿಗಳು ಅನುಮತಿ ಕೂಡ ನೀಡಿದ್ದರು. ತಮ್ಮ ಪ್ರತಿಕ್ರಿಯೆಗೆ ಕೂಡ ಕಾಯದೆ ಬಿಎಂಸಿ ಬಂಗಲೆಗೆ ಶೇ 40ರಷ್ಟು ಹಾನಿ ಮಾಡಿದೆ. ಒಟ್ಟಾರೆ ನಷ್ಟದ ಅಂದಾಜನ್ನು ಇನ್ನಷ್ಟೇ ಮಾಡಬೇಕಿದೆ ಎಂದು ಪ್ರಸ್ತಾಪಿಸಲಾಗಿದೆ. ಜೊತೆಗೆ ಬಂಗಲೆಯಲ್ಲಿದ್ದ ತೂಗುದೀಪಗಳು, ಸೋಫಾ, ಕಲಾಕೃತಿಗಳು ಸೇರಿದಂತೆ ಅನೇಕ ಅಪರೂಪದ ವಸ್ತುಗಳನ್ನು ಕೂಡ ನಾಶಪಡಿಸಿದೆ ಎಂದು ಆರೋಪಿಸಿದ್ದು ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಕಂಗನಾ ಹೇಳಿಕೆ ನೀಡಿರುವುದನ್ನು ಕೂಡ ಉಲ್ಲೇಖಿಸಲಾಗಿದೆ.
ಬಿಎಂಸಿ ಆದೇಶವನ್ನು ರದ್ದುಪಡಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಕ್ರಮ ಕೈಗೊಳ್ಳದಂತೆ ತಡೆಯಾಜ್ಞೆ ನೀಡಬೇಕು ಎಂದು ಕಂಗನಾ ನ್ಯಾಯಾಲಯವನ್ನು ಕೋರಿದ್ದಾರೆ.