ಉನ್ನತ ವ್ಯಾಸಂಗಕ್ಕಾಗಿ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ವಿದ್ಯಾರ್ಥಿಗಳು ಕನ್ನಡ ಕಲಿಯಲು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯದ ಪದವಿ ಕಾಲೇಜುಗಳಲ್ಲಿ ಕನ್ನಡವನ್ನು ಒಂದು ಭಾಷಾ ವಿಷಯವಾಗಿ ಕಲಿಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮುಂದೆ ಗುರುವಾರ ರಾಜ್ಯ ಸರ್ಕಾರವು ಬಲವಾಗಿ ಸಮರ್ಥಿಸಿಕೊಂಡಿತು. ಆದರೆ, ಶಿಕ್ಷಣದಲ್ಲಿ ರಾಜಕೀಯವನ್ನು ಏಕೆ ಬೆರೆಸುತ್ತೀರಿ? ಎಂದು ಸರ್ಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
ರಾಜ್ಯ ಸರ್ಕಾರವು ಪದವಿ ಹಂತದಲ್ಲಿ ಕನ್ನಡ ಭಾಷಾ ಅಧ್ಯಯನವನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಮಹಾವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್, ವ್ಯೋಮಾ ಲಿಂಗ್ವಿಸ್ಟಿಕ್ ಲ್ಯಾಬ್ಸ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
“ರಾಜ್ಯ ಸರ್ಕಾರವು ತನ್ನ ನೀತಿಯನ್ನು ಸಮರ್ಥಿಸಿಕೊಂಡು ಆಕ್ಷೇಪಣೆ ಸಲ್ಲಿಸಿದೆ. ಅರ್ಜಿ ಕುರಿತು ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದ ಮಂಡಿಸಲಿದ್ದಾರೆ. ಅದಕ್ಕಾಗಿ ಸೋಮವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಬೇಕು” ಎಂದು ಸರ್ಕಾರಿ ವಕೀಲರು ಪೀಠವನ್ನು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಪೀಠವು “ಸೋಮವಾರ ಏಕೆ ಇಂದೇ ವಾದ ಮಂಡಿಸಿ. ಕಳೆದ ವಿಚಾರಣೆ ವೇಳೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವುದಾಗಿ ಅಡ್ವೋಕೇಟ್ ಜನರಲ್ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಸದ್ಯ ನಿಮ್ಮ ನೀತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ. ಹಾಗಾದರೆ ಈ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು” ಎಂದು ಸರ್ಕಾರಿ ವಕೀಲರಿಗೆ ತಾಕೀತು ಮಾಡಿತು.
ಆಗ ಸರ್ಕಾರಿ ವಕೀಲರು “ಉನ್ನತ ಶಿಕ್ಷಣದಲ್ಲಿ ಕೇವಲ ಆರು ತಿಂಗಳು ಆರಂಭಿಕರಿಗೆ ಕನ್ನಡ ಕಲಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸಬಹುದಾಗಿದೆ” ಎಂದರು.
ಅದಕ್ಕೆ ಪೀಠವು “ಉನ್ನತ ಶಿಕ್ಷಣಕ್ಕಾಗಿ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡ ಕಲಿಯಬೇಕು ಎಂಬ ಅಂಶವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಎಲ್ಲಿದೆ? ಈ ಕುರಿತ ದಾಖಲೆಯನ್ನು ನ್ಯಾಯಾಲಯಕ್ಕೆ ತೋರಿಸಿ. ನ್ಯಾಯಾಲಯಕ್ಕೆ ಅರ್ಥವಾಗಿರುವ ಪ್ರಕಾರ ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸಬಹುದೇ ಹೊರತು ಕಡ್ಡಾಯ ಮಾಡುವಂತಿಲ್ಲ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಹೇಳುತ್ತದೆ” ಎಂದಿತು.
ಅರ್ಜಿದಾರರ ಪರ ಹಿರಿಯ ವಕೀಲ ಎಸ್ ಎಸ್ ನಾಗನಂದ್ ಅವರು “ಉನ್ನತ ಶಿಕ್ಷಣ ವ್ಯಾಸಂಗದಲ್ಲಿ ಕಡ್ಡಾಯವಾಗಿ ಕನ್ನಡ ಕಲಿಯಬೇಕೆಂಬ ಅಂಶ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಲ್ಲ. ತನಗೆ ಇಷ್ಟಬಂದ ಯಾವುದೇ ವಿಷಯ ಅಥವಾ ಕೋರ್ಸ್ ಅನ್ನು ಅಧ್ಯಯನ ಮಾಡುವ ಸಂಪೂರ್ಣ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗೆ ನೀಡಲಾಗಿದೆ” ಎಂದರು.
ಕನ್ನಡ ಕಲಿಕೆ ಪ್ರೋತ್ಸಾಹಿಸುವುದನ್ನು ಸುಪ್ರೀಂ ಕೊರ್ಟ್ ಪುರಸ್ಕರಿಸಿದೆ ಎಂದು ಸರ್ಕಾರಿ ವಕೀಲರು ಉತ್ತರಿಸಿದಾಗ ಪೀಠವು “ಆ ಕುರಿತು ದಾಖಲೆಗಳನ್ನು ನೀಡಿ. ಉನ್ನತ ಶಿಕ್ಷಣ ಪಡೆಯಲು ಕರ್ನಾಟಕಕ್ಕೆ ಬಂದ ಹೊರ ರಾಜ್ಯ ವಿದ್ಯಾರ್ಥಿಗಳ ಪೈಕಿ ಕನ್ನಡ ಕಲಿಯಬೇಕೆಂಬ ಕಾರಣಕ್ಕೆ ಹಿಂದಿರುಗಿರುವರ ಸಂಖ್ಯೆ ಎಷ್ಟು ಎಂಬುದು ನಿಮಗೆ ಗೊತ್ತಿದೆಯೇ? ಏಕೆ ಶಿಕ್ಷಣದಲ್ಲಿ ರಾಜಕೀಯವನ್ನು ಬೆರಸುತ್ತೀರಿ?” ಎಂದು ಪೀಠ ಖಾರವಾಗಿ ಪ್ರಶ್ನಿಸಿತು.
ಇದಕ್ಕೆ ಸರ್ಕಾರದ ವಕೀಲರು “ಈಗಾಗಲೇ ಪಠ್ಯ ಪುಸ್ತಕ ಪೂರೈಸಲಾಗಿದೆ. ಸಣ್ಣ ಸಣ್ಣ ಕನ್ನಡದ ಪದಗಳು ಕಲಿಯಲು ಹೇಳಿಕೊಡಲಾಗುತ್ತದೆಯಷ್ಟೇ. ಅದೂ ಆರು ತಿಂಗಳ ಕಾಲ. ಮೊದಲನೇ ತರಗತಿ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಪಠ್ಯ ಬೋಧಿಸಲಾಗುತ್ತದೆ. ಇದು ಕೇವಲ ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸುವ ವಿಧಾನವಾಗಿದೆ. ರಾಜ್ಯದಲ್ಲಿ ನೆಲೆಸುವವರಿಗೆ ಸ್ಥಳೀಯರೊಂದಿಗೆ ಸಂವಹನ ನಡೆಸಲು ಅನುಕೂಲವಾಗಷ್ಟು ಕನ್ನಡ ಕಲಿಸಲಾಗುತ್ತದೆ. ಈ ಕ್ರಮವನ್ನು ಉಷಾ ಮೆಹ್ತಾ ಪ್ರಕರಣದಲ್ಲಿ ಸುಪ್ರೀಂ ಕೊರ್ಟ್ ಸಹ ಅನುಮೋದಿಸಿದೆ” ಎಂದು ಸಮರ್ಥಿಸಿಕೊಂಡರು.
“ಇದೇ ಮೊದಲ ಬಾರಿಗೆ ಈ ನೀತಿ ಪರಿಚಯಿಸುತ್ತಿಲ್ಲ. ಕಳೆದ 10 ವರ್ಷಗಳಿಂದ ಎಂಜಿನಿಯರಿಂಗ್ ವ್ಯಾಸಂಗದಲ್ಲಿ ಕನ್ನಡ ಕಲಿಕೆ ಪರಿಚಯಿಸಲಾಗಿದೆ. ಇದು 10ನೇ ತರಗತಿ ನಂತರ ಕನ್ನಡ ವಿಷಯವನ್ನು ವ್ಯಾಸಂಗ ಮಾಡದವರಿಗೆ ಕನ್ನಡ ಕಲಿಯಲು ಅನುಕೂಲವಾಗಿದೆ, ಯಶಸ್ವಿ ಸಹ ಆಗಿದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ನಂತರ ಸರ್ಕಾರದ ಆಕ್ಷೇಪಣಾ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದ ಪೀಠವು ಸರ್ಕಾರದ ಪರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ವಾದ ಮಂಡಿಸಲು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ (ನ.15) ಮುಂದೂಡಿತು.