ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಅಕ್ಷರಗಳಿರಬೇಕು ಎಂದು ಆಗ್ರಹಿಸಿ ರಾಜ್ಯ ರಾಜಧಾನಿಯ ಅಂಗಡಿ-ಮುಂಗಟ್ಟುಗಳ ನಾಮಫಲಕ ಹರಿದು, ಕಲ್ಲು ತೂರಾಟ ನಡೆಸಿರುವ ಆರೋಪದಡಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ ಎ ನಾರಾಯಣ ಗೌಡ ಸೇರಿದಂತೆ 53 ಕಾರ್ಯಕರ್ತರಿಗೆ ಬೆಂಗಳೂರಿನ ದೇವನಹಳ್ಳಿಯ ನ್ಯಾಯಾಲಯ ಜನವರಿ 10ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಂಗಳೂರಿನ ಪ್ರಮುಖ ವಾಣಿಜ್ಯ ಮಳಿಗೆಗಳ ಇಂಗ್ಲಿಷ್ ನಾಮಫಲಕ ಹರಿದು, ದೊಣ್ಣೆಯಿಂದ ಹಲ್ಲೆ ನಡೆಸಿ ದಾಂಧಲೆ ನಡೆಸಿರುವ ಆರೋಪದಡಿ ಬುಧವಾರ ತಡರಾತ್ರಿ ಸುಮಾರು 1.30ರಲ್ಲಿ ನಾರಾಯಣಗೌಡ ಸೇರಿದಂತೆ 53 ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಬಂಧಿತರನ್ನು ದೇವನಹಳ್ಳಿಯಲ್ಲಿರುವ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ನ್ಯಾಯಾಲಯವು 53 ಆರೋಪಿಗಳಿಗೆ ಜನವರಿ 10ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಳಿಕ ಆರೋಪಿಗಳನ್ನು ಭಾರಿ ಬಿಗಿ ಭದ್ರತೆ ನಡುವೆ ಬಿಎಂಟಿಸಿ ಬಸ್‌ನಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗ್ರಹಕ್ಕೆ ಸಾಗಿಸಲಾಯಿತು.
ಹೆದ್ದಾರಿ ತಡೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯಿದೆ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕರವೇ ನಾರಾಯಣ ಗೌಡ ಹಾಗೂ ಮತ್ತಿತರರ ವಿರುದ್ಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿವೆ. ಚಿಕ್ಕಜಾಲ ಠಾಣೆಯಲ್ಲಿ ನಾರಾಯಣ ಗೌಡ (ಎ1), ಜಗದೀಶ್ (ಎ2), ಸುರೇಶ್ (ಎ3), ಬಿ.ಕೆ.ನಾರಾಯಣ ಸ್ವಾಮಿ (ಎ4), ಬಿ ಟಿ ಅನಿಲ್ ಕುಮಾರ್ (ಎ5), ಅಂಬರೀಶ್ (ಎ6) ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೇ ಲ್ಯಾವೆಲ್ಲೆ ರಸ್ತೆಯಲ್ಲಿ ಇಂಗ್ಲಿಷ್ ನಾಮಫಲಕ ಹರಿದ ಆರೋಪದ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂಪೈರ್ ಹೋಟೆಲ್‌ಗೆ ಕಲ್ಲು ತೂರಾಟ ನಡೆಸಿದಕ್ಕೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.