Kerala High Court and Prithviraj Sukumaran 
ಸುದ್ದಿಗಳು

‘ವರಾಹರೂಪಂ’ ಹಕ್ಕುಸ್ವಾಮ್ಯ ಉಲ್ಲಂಘನೆ: ನಟ ಪೃಥ್ವಿರಾಜ್ ವಿರುದ್ಧದ ಎಫ್ಐಆರ್‌ಗೆ ಕೇರಳ ಹೈಕೋರ್ಟ್ ತಡೆ

ಪೃಥ್ವಿರಾಜ್ ಕೇವಲ ಚಲನಚಿತ್ರ ವಿತರಕರಾಗಿದ್ದು ಅವರನ್ನು ಅನಗತ್ಯವಾಗಿ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ ಎಂದ ನ್ಯಾಯಾಲಯ.

Bar & Bench

ʼಕಾಂತಾರʼ ಚಿತ್ರದ 'ವರಾಹ ರೂಪಂ' ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಪೃಥ್ವಿರಾಜ್ ಸುಕುಮಾರನ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಕೇರಳ ಹೈಕೋರ್ಟ್ ತಡೆ ನೀಡಿದೆ. [ಪೃಥ್ವಿರಾಜ್ ಸುಕುಮಾರನ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಪೃಥ್ವಿರಾಜ್ ಕೇವಲ ಚಲನಚಿತ್ರದ ವಿತರಕರಾಗಿದ್ದು ಅವರನ್ನು ಅನಗತ್ಯವಾಗಿ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ ಎಂದು ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ತಿಳಿಸಿದರು. ಈ ಹಿನ್ನೆಲೆಯಲ್ಲಿ ನಟನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಪೀಠ ಫೆಬ್ರವರಿ 22ರವರೆಗೆ ತಡೆ ನೀಡಿತು.

ಕಾಂತಾರ ಕನ್ನಡ ಸಿನಿಮಾದ ‘ವರಹರೂಪಂ ಹಾಡನ್ನು ಮಲಯಾಳಂನ  ‘ನವರಸಂʼ ಹಾಡಿನಿಂದ ಕೃತಿಚೌರ್ಯ ಮಾಡಲಾಗಿದೆ ಎಂಬ ಆರೋಪದ ಮೇಲೆ ಕೋರಿಕ್ಕೋಡ್ ನಗರ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಮಲಯಾಳಂನ ಪ್ರಸಿದ್ಧ ನಟ ಹಾಗೂ ವಿತರಕರಾದ ಪೃಥ್ವಿರಾಜ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿತ್ತು. ʼನವರಸಂʼ ಗೀತೆಯನ್ನು ಮಾತೃಭೂಮಿ ಸಂಸ್ಥೆ ಒಡೆತನದ 'ಕಪ್ಪಾ ಟಿವಿ'ಯಲ್ಲಿ ಪ್ರದರ್ಶಿಸಲಾಗಿತ್ತು. ಥೈಕ್ಕುಡಂ ಬ್ರಿಜ್‌ ಸಂಗೀತ ತಂಡ ಹಾಡಿನ ಮೂಲ ಸೃಷ್ಟಿಕರ್ತ ತಾನೆಂದು ಹೇಳಿದೆ.

ಹಕ್ಕುಸ್ವಾಮ್ಯ ಉಲ್ಲಂಘಿಸುವುದು ಅಪರಾಧ ಎಂದು ಸಾರುವ ಕೃತಿಸ್ವಾಮ್ಯ ಕಾಯಿದೆಯ ಸೆಕ್ಷನ್ 63ರ ಅಡಿಯಲ್ಲಿ ಕಾಂತಾರ ಚಿತ್ರದ ವಿತರಕ ʼಪೃಥ್ವಿರಾಜ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ʼನ ನಿರ್ದೇಶಕರಾಗಿರುವ ಪೃಥ್ವಿರಾಜ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಆದರೆ ತಾವು ಕೇವಲ ವಿತರಕರಾಗಿದ್ದು ಕಾಂತಾರ ಚಿತ್ರದ ನಿರ್ಮಾಣ ಅಥವಾ ಸಂಗೀತ ಸಂಯೋಜನೆಯಲ್ಲಿ ತೊಡಗಿರಲಿಲ್ಲ. ನಿರ್ಮಾಪಕರಿಂದ ವಿತರಣಾ ಹಕ್ಕುಗಳನ್ನು ಪಡೆದು ಚಿತ್ರಮಂದಿರಗಳ ಮೂಲಕ ಚಲನಚಿತ್ರಗಳನ್ನು ವಿತರಿಸುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಚಿತ್ರದ ವಿತರಕನ ಪಾತ್ರ ಸೀಮಿತವಾಗಿದೆ. ಅಲ್ಲದೆ ತಮ್ಮ ಸಂಸ್ಥೆಯು ಚಿತ್ರ ವಿತರಣೆಯನ್ನು ನವೆಂಬರ್ 4, 2022 ರಂದು ಸ್ಥಗಿತಗೊಳಿಸಿತ್ತು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.