2020ರ ದೆಹಲಿ ವಿಧಾನಸಭೆ ಚುನಾವಣೆ ವೇಳೆ ಮತ ಯಾಚಿಸಲು ಕೋಮು ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.
ಚುನಾವಣಾ ಅಕ್ರಮ ಪ್ರಕರಣದಲ್ಲಿ ಮಿಶ್ರಾ ಅವರಿಗೆ ನೀಡಲಾದ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿದ ನ್ಯಾಯಾಲಯ ಮತ ಗಳಿಸುವುದಕ್ಕಾಗಿ ಕೋಮುವಾದಿ ಭಾಷಣ ಮಾಡುವುದನ್ನು ಖಂಡಿಸಿತು.
ದೆಹಲಿ ಮಿನಿ ಪಾಕಿಸ್ತಾನವಾಗಲಿದೆ. ಶಹೀನ್ ಬಾಗ್ ಪಾಕಿಸ್ತಾನದ ಹೆಬ್ಬಾಗಿಲಾಗಲಿದೆ ಎಂದು ಮಿಶ್ರಾ ಅವರು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೇಳಿಕೆ ನೀಡಿರುವುದು ದ್ವೇಷ ಬಿತ್ತಲಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜನ ಪ್ರತಿನಿಧಿಗಳ ಕಾಯಿದೆಯ ಸೆಕ್ಷನ್ 125ರ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಈ ಸಂಬಂಧ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಜೂನ್ 2024ರಲ್ಲಿ ಮಿಶ್ರಾ ಅವರಿಗೆ ಅವರಿಗೆ ಸಮನ್ಸ್ ಜಾರಿ ಮಾಡಿದ್ದರು. ಸಮನ್ಸ್ ರದ್ದುಗೊಳಿಸಲು ಶುಕ್ರವಾರ ನಿರಾಕರಿಸಿರುವ ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಜನಪ್ರತಿನಿಧಿಗಳ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಮಿಶ್ರಾ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದರು.
ಪಾಕಿಸ್ತಾನ ಮತ್ತು ಶಹೀನ್ ಬಾಗ್ ಪದಗಳು ನಿರ್ದಿಷ್ಟ ಧರ್ಮವನ್ನು ಉಲ್ಲೇಖಿಸುವುದಿಲ್ಲ ಎಂಬ ಮಿಶ್ರಾ ಅವರ ಮನವಿ ಒಪ್ಪದ ನ್ಯಾಯಾಲಯ ದುರದೃಷ್ಟವಶಾತ್, 'ಪಾಕಿಸ್ತಾನ' ಎಂಬ ಪದವನ್ನು ನಿರ್ದಿಷ್ಟ ಧರ್ಮವೊಂದನ್ನು ಸೂಚಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಅಲ್ಲದೆ ವಸಾಹತುಶಾಹಿಗಳ ಒಡೆದು ಆಳುವ ನೀತಿ ದೇಶದಲ್ಲಿ ಈಗಲೂ ಅಸ್ತಿತ್ವದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿತು.
'ಪಾಕಿಸ್ತಾನ' ಎಂಬ ಪದವನ್ನು ದ್ವೇಷ ಹರಡಲು, ಮತ ಗಳಿಸಲು ಬಹಳ ಕೌಶಲ್ಯದಿಂದ ಹೆಣೆಯಲಾಗಿದೆ.ದೆಹಲಿ ನ್ಯಾಯಾಲಯ
ಮತಗಳನ್ನು ಸೆಳೆಯಲು ಕೋಮುವಾದಿ ಭಾಷಣಗಳನ್ನು ಮಾಡುವ ಪ್ರವೃತ್ತಿ ಕಂಡುಬಂದಿದೆ. ವಸಾಹತುಶಾಹಿಗಳ ಒಡೆದು ಆಳುವ ನೀತಿ ದುರದೃಷ್ಟವಶಾತ್ ಭಾರತದಲ್ಲಿ ಇನ್ನೂ ಜಾರಿಯಲ್ಲಿದೆ.ದೆಹಲಿ ನ್ಯಾಯಾಲಯ
ಕಾಯಿದೆಯ ಸೆಕ್ಷನ್ 125 ರ ಅಡಿಯಲ್ಲಿ ಒಂದು ದೇಶಕ್ಕೆ ಸಂಬಂಧಿಸಿದ ಟೀಕೆ ಅಪರಾಧವಾಗುವುದಿಲ್ಲ ಎಂಬ ಮಿಶ್ರಾ ಅವರ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ ಕಾಯಿದೆಯ ಸೆಕ್ಷನ್ 125 ರ ಅಡಿಯಲ್ಲಿ ಈ ಕೃತ್ಯ ಸಂಜ್ಞೇಯ ಅಪರಾಧವಾಗುತ್ತದೆ ಎಂದಿತು.
ಆದ್ದರಿಂದ, ಸಮನ್ಸ್ ಆದೇಶ ಪ್ರಶ್ನಿಸಿ ಮಿಶ್ರಾ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಅದು ವಜಾಗೊಳಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]