Netflix, Kapil Sharma, Kapil Sharma Show 
ಸುದ್ದಿಗಳು

ಸಂಗೀತ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ: ಕಪಿಲ್ ಶರ್ಮಾ, ಕಾರ್ಯಕ್ರಮ ನಿರ್ಮಾಪಕರ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಅರ್ಜಿ

ಅಗತ್ಯ ಪರವಾನಗಿ ಪಡೆಯದೆ ಕಾರ್ಯಕ್ರಮದ ನೇರ ಪ್ರಸಾರದ ವೇಳೆ ಹಿನ್ನೆಲೆ ಸಂಗೀತದಲ್ಲಿ ಧ್ವನಿಮುದ್ರಣಗಳನ್ನು ನಿರಂತರವಾಗಿ ಬಳಸಲಾಗಿದೆ ಎಂದು ಪಿಪಿಎಲ್ ಆರೋಪಿಸಿದೆ.

Bar & Bench

ಸಂಗೀತ ಹಕ್ಕುಸ್ವಾಮ್ಯ ಉಲ್ಲಂಘಿಸಲಾಗಿದೆ ಎಂದು ದೂರಿ ʼದಿ ಗ್ರೇಟ್ ಇಂಡಿಯನ್ ಕಪಿಲ್ ಶೋʼ  ಕಾರ್ಯಕ್ರಮ ನಿರೂಪಕ ಕಪಿಲ್ ಶರ್ಮಾ ಹಾಗೂ ನೆಟ್‌ಫ್ಲಿಕ್ಸ್‌ ಕಾರ್ಯಕ್ರಮ ನಿರ್ಮಾಪಕರ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಧ್ವನಿಮುದ್ರಣ ಹಕ್ಕುದಾರನಾಗಿರುವ ಫೋನೊಗ್ರಾಫಿಕ್ ಪರ್ಫಾರ್ಮೆನ್ಸ್ ಲಿಮಿಟೆಡ್ ಅರ್ಜಿ ಸಲ್ಲಿಸಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಈ ಶೋಗೆ ಸಂಬಂಧಿಸಿದ ನಿರ್ಮಾಣ ಸಂಸ್ಥೆಗಳು ಹಾಗೂ ನಿರ್ದೇಶಕರಾದ K-9 ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್, ಬೀಯಿಂಗ್‌ಯು ಸ್ಟುಡಿಯೋಸ್ ಪ್ರೈವೇಟ್ ಲಿಮಿಟೆಡ್, ಕಪಿಲ್ ಶರ್ಮಾ, ಭಾವ್ನೀತ್ ಕೌರ್, ಅಕ್ಷಿತ್ ಲಾಹೋರಿಯಾ ಮತ್ತು ಗುರ್ಜೋತ್ ಸಿಂಗ್ ವಿರುದ್ಧ ದೂರು ನೀಡಲಾಗಿದೆ.

ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಮೂರ್ತಿ ಶರ್ಮಿಳಾ ದೇಶಮುಖ್ ಅವರು ಪ್ರತಿವಾದಿಗಳಿಗೆ ಎರಡು ವಾರಗಳ ಕಾಲಾವಕಾಶ ನೀಡಿದರು.

ಅರ್ಜಿಯ ಪ್ರಮುಖಾಂಶಗಳು

  • ಪಿಪಿಎಲ್‌ಗೆ ಸೇರಿರುವ ಹಕ್ಕುಸ್ವಾಮ್ಯ ರಕ್ಷಣೆ ಪಡೆದ ಕೃತಿಗಳನ್ನು ಕಾನೂನುಬಾಹಿರವಾಗಿ ಬಳಸುವುದರಿಂದ ತನ್ನ ಸಂಪೂರ್ಣ ಸಂಗೀತ ವ್ಯವಹಾರ ಹಾಗೂ ಪ್ರತಿಷ್ಠೆಗೆ ಹಾನಿಯಾಗಿದ್ದು, ಮುಂದೆಯೂ ತೊಂದರೆ ಉಂಟಾಗಲಿದೆ.

  • ಅಗತ್ಯ ಪರವಾನಗಿ ಪಡೆಯದೆ ಕಾರ್ಯಕ್ರಮದ ನೇರ ಪ್ರಸಾರದ ವೇಳೆ ಹಿನ್ನೆಲೆಸಂಗೀತದಲ್ಲಿ ಧ್ವನಿಮುದ್ರಣಗಳನ್ನು ನಿರಂತರವಾಗಿ ಬಳಸಲಾಗಿದೆ.

  • ಹಿಂದಿನ ಕಾರ್ಯಕ್ರಮಗಳಲ್ಲಿ ನಡೆದಂತೆ ಸೀಸನ್ 4ರ ಚಿತ್ರೀಕರಣದ ವೇಳೆಯೂ ಪಿಪಿಎಲ್‌ಗೆ ಸೇರಿದ ಧ್ವನಿಮುದ್ರಣಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ.

  • ಹಾಗೆ ಮಾಡುವ ಮೂಲಕ ನಿರ್ಮಾಪಕರು ಕಾಪಿರೈಟ್ ಉಲ್ಲಂಘಿಸಿದ್ದು ಇದಕ್ಕೆ ನ್ಯಾಯಾಲಯ ತಡೆ ನೀಡಬೇಕು.

  • ತನ್ನ ಧ್ವನಿ ಮುದ್ರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದಕ್ಕೆ ಅಥವಾ ಸಾರ್ವಜನಿಕರಿಗೆ ಸಂವಹನಗೊಳಿಸುವುದಕ್ಕೆ ಸಂಬಂಧಿಸಿದಂತೆ ನಿರ್ಮಾಪಕರಿಗೆ  ತಡೆ ನೀಡಬೇಕು.  

  • ಕಾಪಿರೈಟ್ ಉಲ್ಲಂಘನೆಗೆ ಸಂಬಂಧಿಸಿದ ಧ್ವನಿಮುದ್ರಣಗಳನ್ನು ಒಳಗೊಂಡ ಎಲ್ಲಾ ಸಾಧನಗಳನ್ನು ಪೊಲೀಸ್‌ ಸಹಾಯದೊಂದಿಗೆ ವಶಪಡಿಸಿಕೊಳ್ಳುವುದಕ್ಕಾಗಿ ಬಾಂಬೆ ಹೈಕೋರ್ಟ್‌ ಕೋರ್ಟ್‌ ರಿಸೀವರ್‌ ಒಬ್ಬರನ್ನು ನೇಮಕ ಮಾಡಬೇಕು.

ಪಿಪಿಎಲ್ ಪರವಾಗಿ ಹಿರಿಯ ವಕೀಲ ಶರಣ್ ಜಗ್ತಿಯಾನಿ ಮತ್ತು ವಕೀಲ ಅಮೋಘ್ ಸಿಂಗ್, ಹಾಗೂ ಕೆ 9 ಫಿಲ್ಮ್ಸ್, ಕಪಿಲ್ ಶರ್ಮಾ ಹಾಗೂ ಇತರ ಸಂಸ್ಥೆಗಳ ಪರವಾಗಿ ಪರಿಣಾಮ್‌ ಲಾ ಕಾನೂನು ಸಂಸ್ಥೆಯ ವಕೀಲರಾದ ಆನಂದ್ ಮೋಹನ್, ಮೊನಿಷಾ ಮಾನೆ ಮತ್ತು ಚಂದ್ರಜಿತ್ ದಾಸ್ ಹಾಜರಿದ್ದರು.