ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಅದಿರು ಕಳವು ಮತ್ತು ಅಕ್ರಮ ರಫ್ತು ಮಾಡಿದ ಪ್ರಕರಣದಲ್ಲಿ ದೋಷಿಯಾಗಿ ಜೈಲು ಪಾಲಾಗಿರುವ ಮೆಸರ್ಸ್ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಪಾಲುದಾರ ಕೆ ಮಹೇಶ್ ಕುಮಾರ್ ಅಲಿಯಾಸ್ ಖಾರದಪುಡಿ ಮಹೇಶ್ ಮತ್ತು ಮೆಸರ್ಸ್ ಲಾಲ್ ಮಹಲ್ ಲಿಮಿಟೆಡ್ ಮತ್ತು ಅದರ ಮಾಲೀಕ ಪ್ರೇಮ್ ಚಂದ್ ಗರ್ಗ್ ಅವರು ತಮಗೆ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಬದಿಗೆ ಸರಿಸಲು ಕೋರಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೋಟಿಸ್ ಜಾರಿ ಮಾಡಿದೆ.
ಖಾರದಪುಡಿ ಮಹೇಶ್ ಮತ್ತು ಪ್ರೇಮ್ ಚಂದ್ ಗರ್ಗ್ ಪ್ರಕರಣದಲ್ಲಿ ಖುಲಾಸೆ ಕೋರಿದ್ದಾರೆ. ಗರ್ಗ್ ಅವರು ಸಹೋದರಿಯ ಪುತ್ರನ ವಿವಾಹ ಗೋವಾದಲ್ಲಿ ನಡೆಯುತ್ತಿದ್ದು, ನವೆಂಬರ್ 8 ರಿಂದ 18ರವರೆಗೆ ಜಾಮೀನು ಕೋರಿರುವ ಮಧ್ಯಂತರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಪ್ರೇಮ್ ಚಂದ್ ಗರ್ಗ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು “ವಿಶೇಷ ನ್ಯಾಯಾಲಯದ ತೀರ್ಪು ಬದಿಗೆ ಸರಿಸುವುದಲ್ಲದೇ ನನ್ನ ತಂಗಿಯ ಮಗನ ವಿವಾಹ ಗೋವಾದಲ್ಲಿ ಮುಂದಿನ ವಾರ ನಡೆಯಲಿದೆ. ನಾನೊಬ್ಬನೇ ಸೋದರ ಮಾವ ಇರುವುದರಿಂದ ಸಾಂಪ್ರದಾಯಿಕ ಕರ್ತವ್ಯಗಳನ್ನು ನಾನೇ ನಿಭಾಯಿಸಬೇಕಿದೆ. ಈ ದೃಷ್ಟಿಯಿಂದ ನವೆಂಬರ್ 8ರಿಂದ 18ರವರೆಗೆ 10 ದಿನಗಳ ಕಾಲ ನನ್ನನ್ನು ಬಿಡುಗಡೆ ಮಾಡಬೇಕು” ಎಂದು ಕೋರಿದರು.
ಖಾರಪುಡಿ ಮಹೇಶ್ ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಹಷ್ಮತ್ ಪಾಷಾ ಮತ್ತು ಕಿರಣ್ ಜವಳಿ ಅವರು “ಐಪಿಸಿ ಸೆಕ್ಷನ್ 120ಬಿಗೆ ಐದು ವರ್ಷ ಶಿಕ್ಷೆ ಇದೆ. ಶಿಕ್ಷೆಯು ನಿರ್ದಿಷ್ಟ ಅವಧಿಯವರೆಗೆ ಇದ್ದರೆ ಅದನ್ನು ಉದಾರವಾಗಿ ಪರಿಗಣಿಸಬೇಕು ಎಂದು ಸ್ಥಾಪಿತ ನ್ಯಾಯತತ್ವ ಹೇಳುತ್ತದೆ” ಎಂದರು.
ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು “ವಿಶೇಷ ನ್ಯಾಯಾಲಯದ ತೀರ್ಪು 400 ಪುಟಗಳಿವೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ವಹಿಸಿದ್ದು, ವಿಚಾರಣೆ ಆರಂಭವಾದಾಗಿನಿಂದ ಸರ್ವೋಚ್ಚ ನ್ಯಾಯಾಲಯವು ಅದರ ಮೇಲೆ ನಿಗಾ ಇಟ್ಟಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶಬೇಕು. ಇದು ಸಾಮಾನ್ಯ ಐಪಿಸಿ ಸೆಕ್ಷನ್ 420 ಅಲ್ಲ. ನೈಸರ್ಗಿಕ ಸಂಪತ್ತು ಲೂಟಿ ಮಾಡಲಾಗಿದೆ” ಎಂದು ಆಕ್ಷೇಪಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಸಿಬಿಐಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿ, ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.
ಖಾರದಪುಡಿ ಮಹೇಶ್ ಮತ್ತು ಪ್ರೇಮ್ ಚಂದ್ ಗರ್ಗ್‌ಗೆ ಐಪಿಸಿ ಸೆಕ್ಷನ್ 120-ಬಿ ಅಡಿ ಕ್ರಿಮಿನಲ್ ಪಿತೂರಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐದು ವರ್ಷ ಜೈಲು ಶಿಕ್ಷೆ ಮತ್ತು ₹20,000 ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 420 ಅಡಿ ವಂಚನೆಯ ಅಪರಾಧಕ್ಕೆ ಇಬ್ಬರಿಗೂ ಏಳು ವರ್ಷ ಜೈಲು ವಿಧಿಸಲಾಗಿದ್ದು, ದಂಡದ ಮೊತ್ತವನ್ನು ಕ್ರಮವಾಗಿ ₹9.25 ಕೋಟಿ ಮತ್ತು ₹90 ಲಕ್ಷ ವಿಧಿಸಲಾಗಿದೆ ಮತ್ತು ಐಪಿಸಿ ಸೆಕ್ಷನ್ 379 ಜೊತೆಗೆ 120-ಬಿ ಅಡಿ ಪಿತೂರಿ ನಡೆಸಿ ಕಳವು ಮಾಡಿದ್ದಕ್ಕಾಗಿ ಮೂರು ವರ್ಷ ಜೈಲು ಶಿಕ್ಷೆ ಮತ್ತು ₹20,000 ದಂಡ ವಿಧಿಸಿ, ಎಲ್ಲಾ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗಲಿವೆ ಎಂದು ವಿಶೇಷ ನ್ಯಾಯಾಲಯ ಅಕ್ಟೋಬರ್ 26ರಂದು ತೀರ್ಪು ನೀಡಿತ್ತು. ಇದನ್ನು ಬದಿಗೆ ಸರಿಸಿ ತಮ್ಮನ್ನು ಖುಲಾಸೆಗೊಳಿಸಬೇಕು ಎಂದು ಖಾರದಪುಡಿ ಮಹೇಶ್ ಮತ್ತು ಗರ್ಗ್ ಕೋರಿದ್ದಾರೆ.