ತಮ್ಮ ತಂದೆಯ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಕ್ಕಳು ತಮ್ಮ ಮಲತಾಯಿ ಪ್ರಿಯಾ ಸಚ್‌ದೇವ್ ಕಪೂರ್ ವಿರುದ್ಧ ಹೂಡಿರುವ ಮೊಕದ್ದಮೆಯು "ಭಾವಾತಿರೇಕದ ನಾಟಕೀಯತೆ"ಗೆ ಹೊರಳುವುದನ್ನು ತಾನು ಬಯಸುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ.
ತಮ್ಮ ತಂದೆ ಸಂಜಯ್ ಕಪೂರ್ ಅವರ ಆಸ್ತಿಯಿಂದ ತಮ್ಮನ್ನು ಪ್ರತ್ಯೇಕಗೊಳಿಸದಂತೆ ತಮ್ಮ ಮಲತಾಯಿ ಪ್ರಿಯಾ ಕಪೂರ್ ಅವರನ್ನು ನಿರ್ಬಂಧಿಸುವಂತೆ ಮಧ್ಯಂತರ ಪ್ರತಿಬಂಧಕಾದೇಶ ಕೋರಿ ಕರಿಷ್ಮಾ ಕಪೂರ್ ಅವರ ಮಕ್ಕಳು ದಾಖಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾ. ಜ್ಯೋತಿ ಸಿಂಗ್ ಅವರ ನ್ಯಾಯಪೀಠವು ನಡೆಸಿತು.
"ವಿಚಾರಣೆಯು ಭಾವಾತಿರೇಕಗೊಳ್ಳುವುದುನ್ನು ನಾನು ಬಯಸುವುದಿಲ್ಲ," ಎಂದು ನ್ಯಾ. ಜ್ಯೋತಿ ಸಿಂಗ್ ಅವರು ವಿಚಾರಣೆಯ ಒಂದು ಹಂತದಲ್ಲಿ ಎಚ್ಚರಿಸಿದರು.
ವಿಚಾರಣೆಯ ವೇಳೆ ಕರಿಷ್ಮಾ ಕಪೂರ್ ಅವರ ಮಕ್ಕಳನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಅವರು, ಕರಿಷ್ಮಾ ಅವರ ಪುತ್ರಿ ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದು ಕಳೆದೆರಡು ತಿಂಗಳಿನಿಂದ ಅವರ ಶುಲ್ಕವನ್ನು ಪಾವತಿಸಲಾಗಿಲ್ಲ ಎಂದು ಆರೋಪಿಸಿದರು.
ಮುಂದುವರೆದು, ವೈವಾಹಿಕ ವ್ಯಾಜ್ಯದ ಕುರಿತಾದ ಆದೇಶದಲ್ಲಿ ಸಂಜಯ್ ಕಪೂರ್ ಅವರು ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುತ್ತಾರೆಂದು ತಿಳಿಸಲಾಗಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತಂದರು.
"ಮಕ್ಕಳ ಎಸ್ಟೇಟ್ ಆಸ್ತಿಯು ಈಗ ಪ್ರತಿವಾದಿ ನಂ.1 (ಪ್ರಿಯಾ ಕಪೂರ್) ಅವರ ಬಳಿ ಇದೆ. ಅವರ ಜವಾಬ್ದಾರಿ ಇದೆ. ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಸಂಜಯ್ ಕಪೂರ್ ಅವರು ಭರಿಸುವುದಾಗಿ ತಿಳಿಸಿದ್ದರು" ಎಂದು ಜೇಠ್ಮಲಾನಿ ವಿವರಿಸಿದರು.
ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಪ್ರಿಯಾ ಕಪೂರ್ ಪರ ಹಿರಿಯ ವಕೀಲ ರಾಜೀವ್ ನಾಯರ್ ಅವರು, ಮಕ್ಕಳ ಎಲ್ಲ ಖರ್ಚುವೆಚ್ಚಗಳನ್ನು ತಮ್ಮ ಕಕ್ಷಿದಾರರು ಭರಿಸಿರುವುದಾಗಿ ಒತ್ತಿ ಹೇಳಿದರು. ಅಲ್ಲದೆ, ಇಂತಹ ವಿಚಾರಗಳು ದಿನಪತ್ರಿಕೆಗಳಲ್ಲಿ ಬರಬೇಕು ಎನ್ನುವ ಉದ್ದೇಶದಿಂದ ಅವುಗಳನ್ನು ಎತ್ತಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾ. ಜ್ಯೋತಿ ಸಿಂಗ್ ಇಂತಹ ವಿಚಾರಗಳನ್ನು ನ್ಯಾಯಾಲಯಕ್ಕೆ ತರದಂತೆ ಸೂಚಿಸಿದರು.
ಪ್ರಿಯಾ ಕಪೂರ್ ಅವರನ್ನು ಪ್ರತಿನಿಧಿಸಿದ್ದ ಮತ್ತೋರ್ವ ಹಿರಿಯ ವಕೀಲರಾದ ಶೈಲ್ ತ್ರೆಹಾನ್ ಅವರಿಗೆ, "ನಾನು ಈ ವಿಚಾರವಾಗಿ 30 ಸೆಕೆಂಡುಗಳಿಗೂ ಹೆಚ್ಚು ಕಾಲ ವ್ಯಯಿಸಲು ಇಷ್ಟಪಡುವುದಿಲ್ಲ. ಈ ವಿಚಾರಣೆಯು ಭಾವಾತಿರೇಕಗೊಳ್ಳುವುದನ್ನು ನಾನು ಬಯಸುವುದಿಲ್ಲ. ಹೀಗಾಗದಂತೆ ನೋಡಿಕೊಳ್ಳುವ ಹೊಣೆ ನಿಮ್ಮದು (ಶೈಲ್ ತೆಹ್ರಾನ್)," ಎಂದು ಎಚ್ಚರಿಸಿದರು.
ತಮ್ಮ ಮಲತಾಯಿ ಪ್ರಿಯಾ ಕಪೂರ್ ಅವರು, ಸಂಜಯ್ ಕಪೂರ್ ಅವರ ಉಯಿಲು ಫೋರ್ಜರಿ ಮಾಡಿ ಆಸ್ತಿಗಳನ್ನುಸಂಪೂರ್ಣ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕರಿಷ್ಮಾ ಕಪೂರ್ ಮಕ್ಕಳು ಆರೋಪಿಸಿರುವುದು ಪ್ರಕರಣದ ತಿರುಳಾಗಿದೆ.
ಕರಿಷ್ಮಾಕಪೂರ್ ಸಂಜಯ್ ಅವರನ್ನು 2003ರಲ್ಲಿ ವರಿಸಿದ್ದರು. 2016ರಲ್ಲಿ ಅವರು ವಿಚ್ಛೇದನ ಪಡೆಯುವ ಮೂಲಕ 13 ವರ್ಷಗಳ ದಾಂಪತ್ಯ ಅಂತ್ಯಗೊಂಡಿತ್ತು. ಕಳೆದ ಜೂನ್‌ನಲ್ಲಿ ಸಂಜಯ್ ಇಂಗ್ಲೆಂಡ್‌ನಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಆ ಬಳಿಕ ಸಂಜಯ್ ಅವರ ಮನೆಯಿಂದ ಪ್ರಿಯಾ ಕಪೂರ್ ನಮ್ಮನ್ನು ಅಕ್ರಮವಾಗಿ ಹೊರಗಟ್ಟಿದ್ದಾರೆ. ಎಂದು ಕರಿಷ್ಮಾ ಅವರ ಅಪ್ರಾಪ್ತ ಮಕ್ಕಳು ತಮ್ಮ ತಾಯಿಯ ಮುಖೇನ ನ್ಯಾಯಾಲಯದ ಮೊರೆ ಹೋಗಿದ್ದರು.
ವಿಚಾರಣೆಯ ವೇಳೆ, ನಯ್ಯರ್ ಅವರು ಪ್ರಿಯಾ ವಿರುದ್ಧ ಕೋರಿರುವ ಮಧ್ಯಂತರ ಪ್ರತಿಬಂಧಕಾಜ್ಞೆಯ ಕೋರಿಕೆಯ ವಿರುದ್ಧ ವಾದ ಮಂಡಿಸಿದರು.
ಉಯಿಲು ಅಧಿಕೃತವಾಗಿದ್ದು, ಅದನ್ನು ಕುಟುಂಬದ ವಾಟ್ಸಾಪ್ ಗುಂಪಿನಲ್ಲಿಯೂ ಹಂಚಿಕೊಳ್ಳಲಾಗಿದೆ ಎಂದು ಒತ್ತಿ ಹೇಳಿದರು. "ಉಯಿಲಿನ ಜಾರಿ ಮತ್ತು ದೃಢೀಕರಣವನ್ನು ಇಬ್ಬರು ಸಾಕ್ಷಿಗಳು ಸಾಬೀತುಪಡಿಸಿದ್ದಾರೆ, ವಿಚಾರಣೆ ಪೂರ್ಣಗೊಳ್ಳುವವರೆಗೆ ಅದನ್ನು ಮಾನ್ಯವೆಂದೇ ಪರಿಗಣಿಸಬೇಕು" ಎಂದು ಆಗ್ರಹಿಸಿದರು.
ಅಂತಿಮವಾಗಿ ನವೆಂಬರ್ 19ಕ್ಕೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಿತು. ಮಧ್ಯಂತರ ತಡೆಯಾಜ್ಞೆ ಅರ್ಜಿಯ ಮೇಲಿನ ವಾದಗಳನ್ನು ತ್ವರಿತವಾಗಿ ಮುಗಿಸಲು ಬಯಸುವುದಾಗಿ ಅದು ಹೇಳಿದೆ.