Vidhana Soudha 
ಸುದ್ದಿಗಳು

ನೀಟ್, ಒಂದು ರಾಷ್ಟ್ರ ಒಂದು ಚುನಾವಣೆ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜ್ಯ ಸರ್ಕಾರ

ಕರ್ನಾಟಕವಷ್ಟೇ ಅಲ್ಲದ ತಮಿಳುನಾಡು ಮತ್ತು ಪ. ಬಂಗಾಳ ಕೂಡ ನೀಟ್ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿವೆ. ತಮಿಳುನಾಡು ಸರ್ಕಾರ ಬಹಳ ಹಿಂದೆಯೇ ಪರೀಕ್ಷೆ ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದನ್ನು ಇಲ್ಲಿ ಸ್ಮರಿಸಬಹುದು.

Bar & Bench

ನೀಟ್‌ ಪರೀಕ್ಷೆ ರದ್ದತಿ, ಹೊಸ ಜನಗಣತಿ ಆಧರಿಸಿ ಕ್ಷೇತ್ರ ಪುನರ್‌ವಿಂಗಡಣೆ ನಡೆಸಬಾರದು ಹಾಗೂ ಕೇಂದ್ರ ಸರ್ಕಾರದ ಒಂದು ದೇಶ ಒಂದು ಚುನಾವಣೆ ಜಾರಿಯಾಗುವುದನ್ನು ವಿರೋಧಿಸಿ ರಾಜ್ಯ ಸರ್ಕಾರ ಮಂಡಿಸಿದ ನಿರ್ಣಯಗಳಿಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್‌ಗಳಲ್ಲಿ ಗುರುವಾರ ಅಂಗೀಕಾರ ದೊರೆತಿದೆ.

ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ನಡೆಸುತ್ತಿದ್ದ ಧರಣಿ ಮತ್ತು ಗದ್ದಲದ ಮಧ್ಯೆಯೇ ಸರ್ಕಾರ ನಿರ್ಣಯ ಮಂಡಿಸಿ ಒಪ್ಪಿಗೆ ಪಡೆಯಿತು.

ನೀಟ್‌ ಬೇಡ

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆ ಗ್ರಾಮೀಣ ಪ್ರದೇಶದ ಬಡ ಮಕ್ಕಳ ವೈದ್ಯಕೀಯ ಶಿಕ್ಷಣ ಅವಕಾಶಗಳಿಗೆ ಅಡ್ಡಿ ಉಂಟು ಮಾಡುತ್ತದೆ. ಇದು ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಅರ್ಥಹೀನಗೊಳಿಸುವುದಷ್ಟೇ ಅಲ್ಲದೆ ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಒದಗಿಸುವ ರಾಜ್ಯ ಸರ್ಕಾರದ ಅವಕಾಶಗಳನ್ನು ಕಸಿದುಕೊಳ್ಳುತ್ತಿದೆ. ಹೀಗಾಗಿ ನೀಟ್‌ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ರಾಜ್ಯ ಸರ್ಕಾರ ನಿರ್ಣಯ ಆಗ್ರಹಿಸಿದೆ.

ಬದಲಿಗೆ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಅಂಕಗಳನ್ನು ಆಧರಿಸಿ ವೈದ್ಯಕೀಯ ಪದವಿ ಅಧ್ಯಯನಕ್ಕೆ ಪ್ರವೇಶಾತಿ ಕಲ್ಪಿಸಬೇಕು. ಪದೇ ಪದೇ ಅಕ್ರಮಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನೀಟ್‌ ಪರೀಕ್ಷೆಯನ್ನು ರದ್ದುಗೊಳಿಸಬೇಕು. ಕೇಂದ್ರ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿನಿಯಮ 2019ಕ್ಕೆ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಕರ್ನಾಟಕವಷ್ಟೇ ಅಲ್ಲದ ತಮಿಳುನಾಡು ಮತ್ತು ಪ. ಬಂಗಾಳ ಕೂಡ ನೀಟ್‌ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿವೆ. ತಮಿಳುನಾಡು ಸರ್ಕಾರ ಬಹಳ ಹಿಂದೆಯೇ ಪರೀಕ್ಷೆ ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದನ್ನು ಇಲ್ಲಿ ಸ್ಮರಿಸಬಹುದು.

ಕ್ಷೇತ್ರ ಮರುವಿಂಗಡಣೆಗೆ 1971ರ ಜನಗಣತಿ ಆಧಾರವಾಗಿರಲಿ

ಇದೇ ವೇಳೆ 2026 ಹಾಗೂ ಅದರ ನಂತರ ನಡೆಸುವ ಹೊಸ ಜನಗಣತಿ ಆಧರಿಸಿ ಕ್ಷೇತ್ರ ಮರುವಿಂಗಡಣೆಗೆ ಮುಂದಾಗದೆ 1971ರ ಜನಗಣತಿ ಆಧರಿಸಿ  ಪುನರ್‌ವಿಂಗಡಣೆ ನಡೆಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುವ ನಿರ್ಣಯ ಮಂಡಿಸಿ ಅಂಗೀಕಾರ ಪಡೆಯಲಾಗಿದೆ.

ಈ ಕುರಿತ ನಿರ್ಣಯವನ್ನು ಮುಖ್ಯಮಂತ್ರಿ ಪರವಾಗಿ ವಿಧಾನಸಭೆಯಲ್ಲಿ ಕಾನೂನೂ ಸಚಿವ ಎಚ್‌ ಕೆ ಪಾಟೀಲ ಹಾಗೂ ವಿಧಾನ ಪರಿಷತ್ತಿನಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮಂಡಿಸಿದರು.

ಪ್ರತೀ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಮತ್ತು ಪ್ರತಿ ರಾಜ್ಯದ ವಿಧಾನಸಭೆಗೆ ನಿಗದಿಪಡಿಸಬೇಕಾದ ಸ್ಥಾನಗಳ ಒಟ್ಟು ಸಂಖ್ಯೆಯನ್ನು 1971ರ ಜನಗಣತಿಯನ್ನಾಧರಿಸಿ ನಿರ್ಧರಿಸಬೇಕೆಂದು ಸದನ ಒತ್ತಾಯಿಸಿದೆ.

ಒಕ್ಕೂಟ ವ್ಯವಸ್ಥೆಗೆ ಏಕ ಚುನಾವಣೆ ಮಾರಕ

ಮತ್ತೊಂದೆಡೆ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಒಂದು ರಾಷ್ಟ್ರ ಒಂದು ಚುನಾವಣೆ ದೇಶದ ಪ್ರಜಾಸತ್ತಾತ್ಮಕ ಹಾಗೂ ಒಕ್ಕೂ ವ್ಯವಸ್ಥೆಗೆ ಧಕ್ಕೆ ತರಲಿದೆ. ಬೇರೆ ಬೇರೆ ರಾಜ್ಯಗಳ ವಿಧಾನಸಭೆಗಳಿಗೆ ಅವುಗಳದ್ದೇ ಆದ ಅಧಿಕಾರವಧಿ ಇದ್ದು ಏಕರೂಪ ಚುನಾವಣೆ ಸ್ಥಳೀಯ ಕಾಳಜಿಗಳನ್ನು ನಿರ್ಲಕ್ಷಿಸಿ ರಾಜ್ಯಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸಬಹುದು. ಇದರಿಂದ ಸರ್ಕಾರದ ಉತ್ತರದಾಯಿತ್ವದಂತಹ ಸಮಸ್ಯೆಗಳು ತಲೆದೋರಬಹುದು ಎಂದು ರಾಜ್ಯ ಸರ್ಕಾರ ಆಕ್ಷೇಪಿಸಿದೆ. ಅಂತೆಯೇ ಪ್ರಸ್ತಾವನೆ ಜಾರಿ ವಿರೋಧಿಸಿ ನಿರ್ಣಯ ಅಂಗೀಕರಿಸಿತು.

ನಿರ್ಣಯಕ್ಕೆ ಪ್ರತಿಪಕ್ಷದ ನಾಯಕರಾದ ಆರ್‌ ಅಶೋಕ ಅಸಮಾಧಾನ ವ್ಯಕ್ತಪಡಿಸಿದರು. ಒಂದು ರಾಷ್ಟ್ರ ಒಂದು ಚುನಾವಣೆ ಉತ್ತಮ ಪರಿಕಲ್ಪನೆ. ಅದು ಜಾರಿಗೆ ಬರಬೇಕು. ಇದರಿಂದ ದೇಶದ ಬೊಕ್ಕಸಕ್ಕೆ ಹಣ ಉಳಿತಾಯ ಆಗುತ್ತದೆ. ವರ್ಷವಿಡೀ ಚುನಾವಣೆಗಳಲ್ಲಿ ಅಧಿಕಾರಿಗಳು ತೊಡಗಿಕೊಂಡರೆ ಜನರ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುತ್ತವೆ ಎಂದರು.