ಸುದ್ದಿಗಳು

ಸಿಡಿ ಹಗರಣ‌: 6 ಸಚಿವರ ವಿರುದ್ಧ ಮಾನಹಾನಿ ವಿಷಯ ಪ್ರಕಟಿಸದಂತೆ 67 ಮಾಧ್ಯಮ ಸಂಸ್ಥೆಗಳಿಗೆ ನಿರ್ಬಂಧ

ಆರು ಸಚಿವರ ವಿರುದ್ಧ ಮಾನಹಾನಿ ವಿಚಾರಗಳನ್ನು ಹೊರತುಪಡಿಸಿ, ಪರಿಶೀಲಿಸಿದ ಮತ್ತು ದೃಢೀಕರಿಸಿದ ಸುದ್ದಿಗಳನ್ನು ಮಾಧ್ಯಮ ಸಂಸ್ಥೆಗಳು ಪ್ರಕಟಿಸಬಹುದು ಎಂದು ಹೆಚ್ಚುವರಿ ನಗರ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

Bar & Bench

ರಾಜ್ಯದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಉದ್ಯೋಗದ ಆಮಿಷವೊಡ್ಡಿ ಯುವತಿಯೋರ್ವರನ್ನು ಲೈಂಗಿಕ ದುರ್ಬಳಕೆ ಮಾಡಿಕೊಂಡ ಹಗರಣಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಆರು ಸಂಪುಟ ದರ್ಜೆ ಸಚಿವರ ವಿರುದ್ಧ ಯಾವುದೇ ತೆರನಾದ ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸದಂತೆ ಅರವತ್ತೇಳು ಮಾಧ್ಯಮ ಸಂಸ್ಥೆಗಳಿಗೆ ಶನಿವಾರ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

ನಕಾರಾತ್ಮಕವಾಗಿ ಅಥವಾ ವಿಡಂಬನೆಯಿಂದ ಹಗರಣಕ್ಕೆ ಕಾರಣವಾದ ಸಿಡಿಯಲ್ಲಿನ ಮಾಹಿತಿ ಅಥವಾ ವಿಡಿಯೋವನ್ನು ಮುದ್ರಣ ಅಥವಾ ಪ್ರಸಾರ ಮಾಡದಂತೆ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಡಿ ಎಸ್‌ ವಿಜಯಕುಮಾರ್ ಅವರು ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ.

ಅದಾಗ್ಯೂ, ಆರು ಸಚಿವರ ವಿರುದ್ಧ ಮಾನಹಾನಿ ವಿಚಾರಗಳನ್ನು ಹೊರತುಪಡಿಸಿ, ಪರಿಶೀಲಿಸಿದ ಮಾಹಿತಿ ಮತ್ತು ದೃಢೀಕರಿಸಿದ ಸುದ್ದಿಗಳನ್ನು ಮಾಧ್ಯಮ ಸಂಸ್ಥೆಗಳು ಪ್ರಕಟಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಉದ್ಯೋಗ ಕೊಡಿಸುವ ಭರವಸೆ ನೀಡಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್‌ ಜಾರಕಿಹೊಳಿ ಅವರು ರಾಜೀನಾಮೆ ನೀಡಿದ ಬಳಿಕ ಸಂಪುಟ ದರ್ಜೆ ಸಚಿವರುಗಳಾದ ಡಾ. ಕೆ ಸುಧಾಕರ್‌, ಬಿ ಸಿ ಪಾಟೀಲ್, ಶಿವರಾಮ್‌ ಹೆಬ್ಬಾರ್‌, ಎಚ್‌ ಟಿ ಸೋಮಶೇಖರ್, ಭೈರತಿ ಬಸವರಾಜ್‌ ಮತ್ತು ಕೆ ಸಿ ನಾರಾಯಣಗೌಡ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಯುವತಿಯೊಂದಿಗೆ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಸಿ.ಡಿ ಬಿಡುಗಡೆಗೊಂಡ ಮಾರನೇಯ ದಿನ ಜಾರಕಿಹೊಳಿ ರಾಜೀನಾಮೆ ಸಲ್ಲಿಸಿದ್ದರು.

ಸಿ.ಡಿಗೆ ಸಂಬಂಧಿಸಿದಂತೆ ಮಾನಹಾನಿ ಉಂಟು ಮಾಡುವಂಥ ಅಥವಾ ಪರಿಶೀಲನೆ ಮಾಡದ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಆರು ಸಚಿವರು ಮನವಿಯಲ್ಲಿ ಕೋರಿದ್ದರು.

“1 ರಿಂದ 14 ಮತ್ತು 16 ರಿಂದ 68 ರವಗಿನ ಪ್ರತಿವಾದಿ ಮಾಧ್ಯಮ ಸಂಸ್ಥೆಗಳು ಆರೋಪಿತ ಸಿಡಿ ಅಥವಾ ಇತರ ಯಾವುದೇ ವಸ್ತು ವಿಷಯಗಳನ್ನು ನಕಾರಾತ್ಮಕವಾಗಿ ಪ್ರಸಾರ ಅಥವಾ ಪ್ರಕಟಣೆ ಅಥವಾ ವಿತರಣೆ ಮಾಡದಂತೆ ಮಧ್ಯಂತರ ತಡೆಯಾಜ್ಞೆ ಮೂಲಕ ಆದೇಶ ಮಾಡಲಾಗಿದೆ. ಮಾನಹಾನಿಕರ ಕೃತ್ಯಕ್ಕೆ ಕಾರಣವಾಗುವ ಫಿರ್ಯಾದುದಾರರ ಘನತೆಗೆ ಚ್ಯುತಿ ಉಂಟು ಮಾಡಬಹುದಾದ ಅಥವಾ ಘನತೆಯನ್ನು ನಾಶ ಮಾಡಬಹುದಾದ, ಅಣಕಕ್ಕೆ ಕಾರಣವಾಗುವಂಥ ದೃಶ್ಯ ಅಥವಾ ಚಿತ್ರಗಳನ್ನು ಪ್ರಸಾರ ಮಾಡಬಾರದು. ಜೊತೆಗೆ ಯಾವುದೇ ರೀತಿಯಲ್ಲಿ ಫಿರ್ಯಾದುದಾರರ ಬಗ್ಗೆ ಮುಂದಿನ ವಿಚಾರಣೆಯವರೆಗೆ ನಕಾರಾತ್ಮಕವಾದ ಪರಿಧಿಗೆ ಬರುವಂತಹ ಅಭಿಪ್ರಾಯ ವ್ಯಕ್ತಪಡಿಸಬಾರದು” ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

ಆಸಕ್ತಿಕರ ವಿಚಾರವೆಂದರೆ ತಡೆಯಾಜ್ಞೆ ಕೋರಿರುವ ಆರು ಸಚಿವರು ವರ್ಷದ ಹಿಂದೆ ಕಾಂಗ್ರೆಸ್‌ – ಜೆಡಿಎಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕಾರಣರಾದ ಹದಿನೇಳು ಶಾಸಕರಲ್ಲಿ ಸೇರಿದ್ದಾರೆ. ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿ, ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ಈ ಶಾಸಕರುಗಳು ಆನಂತರ ವಿಧಾನಸಭೆಯ ಸ್ಪೀಕರ್‌ ಅವರಿಂದ ಅನರ್ಹಗೊಂಡು ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದಾರೆ.

ದಿನಪತ್ರಿಕೆಗಳು, ವಾರ ಪತ್ರಿಕೆಗಳು, ಟ್ಯಾಬ್ಲಾಯ್ಡ್‌ಗಳು, ಸುದ್ದಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿ ವೆಬ್‌ಸೈಟ್‌ಗಳು ಸೇರಿದಂತೆ ಅರವತ್ತೆಂಟು ಮಾಧ್ಯಮ ಸಂಸ್ಥೆಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ. ಒಂದು ಮಾಧ್ಯಮ ಸಂಸ್ಥೆ ಕೇವಿಯಟ್‌ ಸಲ್ಲಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶವನ್ನು ಪೀಠ ಹೊರಡಿಸಿಲ್ಲ. ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 18ಕ್ಕೆ ಮುಂದೂಡಲಾಗಿದೆ.