ಸುದ್ದಿಗಳು

ಮಾನಹಾನಿಕರ ವರದಿ ಪ್ರಸಾರ ತಡೆಯುವಂತೆ ಆರು ಸಚಿವರ ಅರ್ಜಿ: ಇಲ್ಲಿವೆ ನ್ಯಾಯಾಧೀಶರ ಆದೇಶದ ಪ್ರಮುಖ ಅಂಶಗಳು

Bar & Bench

ರಾಜ್ಯ ಸರ್ಕಾರದ ಆರು ಸಂಪುಟ ದರ್ಜೆ ಸಚಿವರ ವಿರುದ್ಧ ಯಾವುದೇ ತೆರನಾದ ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸದಂತೆ ಅರವತ್ತೇಳು ಮಾಧ್ಯಮ ಸಂಸ್ಥೆಗಳಿಗೆ ಶನಿವಾರ ಬೆಂಗಳೂರಿನ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ. ಆದೇಶ ನೀಡುವ ವೇಳೆ ನ್ಯಾಯಾಧೀಶರಾದ ಡಿ ಎಸ್‌ ವಿಜಯಕುಮಾರ್‌ ಅವರು ವ್ಯಕ್ತಪಡಿಸಿದ ಪ್ರಮುಖ ಅಂಶಗಳು ಇಲ್ಲಿವೆ.

  • ಫಿರ್ಯಾದಿಗಳು ಒದಗಿಸಿರುವ ಸಾಕ್ಷ್ಯಗಳ ಪ್ರಕಾರ ಇನ್ನೂ 19 ಪ್ರಭಾವಿ ವ್ಯಕ್ತಿಗಳ ಸಿಡಿ ಇದೆ ಎಂದು ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿದೆ. ಮಾಧ್ಯಮಗಳಿಗೆ ಯಾವುದೇ ಸಿ ಡಿ ದೊರೆಯದಿದ್ದರೂ ಕೂಡ ಆ ಬಗ್ಗೆ ಸುದ್ದಿ ಪ್ರಸಾರ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

  • ಫಿರ್ಯಾದಿಗಳು ಕರ್ನಾಟಕ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿದ್ದು ಪರಿಶೀಲಿಸದೆ ಸುದ್ದಿಯನ್ನು ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಅದರಿಂದ ಅವರ ಪ್ರತಿಷ್ಠೆಗೆ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ. ಅಲ್ಲದೆ ಸಮಾಜ ಮತ್ತು ಕುಟುಂಬದಲ್ಲಿ ಅವರು ಗೌರವ ಕಳೆದುಕೊಳ್ಳಬಹುದು.

  • ಸಹಜವಾಗಿ ಪ್ರಜೆಗಳಿಗೆ ತಮ್ಮ ನಾಯಕರ ಬಗ್ಗೆ ತಿಳಿಯುವ ಹಕ್ಕಿದೆ. ತಾವು ಚುನಾಯಿಸಿದ ಪ್ರತಿನಿಧಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಅರಿಯುವ ಹಕ್ಕು ಅವರಿಗಿದೆ. ಅಂತೆಯೇ ಮಾಧ್ಯಮಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಇದ್ದು ಜನರಿಂದ ಚುನಾಯಿತರಾದ ಪ್ರತಿನಿಧಿಗಳನ್ನು ಮೌಲ್ಯಮಾಪನ ಮಾಡುವುದು ಅವರ ಕರ್ತವ್ಯ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಇದೇ ವೇಳೆ ಪರಿಶೀಲಿಸದ ಅಂಶಗಳ ಆಧಾರದಲ್ಲಿ ಚಾರಿತ್ರ್ಯ ವಧೆ ಮಾಡುವುದರ ವಿರುದ್ಧ ಫಿರ್ಯಾದಿಗಳು ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ಹೊಂದಿದ್ದಾರೆ.

  • ಸ್ವತಂತರ್ ಕುಮಾರ್‌ ಮತ್ತು ದ ಇಂಡಿಯನ್‌ ಎಕ್ಸ್‌ಪ್ರೆಸ್‌ ಲಿಮಿಟೆಡ್‌ ಮತ್ತಿತರರ ನಡುವಣ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್‌ ನೀಡಿರುವ ತೀರ್ಪನ್ನು ಫಿರ್ಯಾದಿಗಳ ಪರ ವಕೀಲರು‌ ಅವಲಂಬಿಸಿದ್ದಾರೆ. ಅದರಂತೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಬದಲು ವರದಿ ಮಾಡುವ ಕರ್ತವ್ಯ ನಿರ್ವಹಿಸುವ ಹೊಣೆ ಹೊತ್ತ ಮಾಧ್ಯಮಗಳು ಸಾರ್ವಜನಿಕ ವ್ಯವಹಾರಗಳ ಬಗ್ಗೆ ಮೌಲ್ಯಮಾಪನ ಮಾಡುವ ಉದ್ದೇಶದಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸುದ್ದಿ ಪಡೆಯಬೇಕು.

  • ಕಾನೂನುಬದ್ಧವಾಗಿ ಸ್ವೀಕಾರಾರ್ಹ ಪ್ರಕ್ರಿಯೆ ಮೂಲಕ ತಮ್ಮ (ಸುದ್ದಿ) ಮೂಲವನ್ನು ಅವು ಪರಿಶೀಲಿಸಬೇಕು. ಜೊತೆಗೆ ಅಂತಹ ಸುದ್ದಿಗಳ ಹೊಣೆ ಹೊರಲು ಮಾಧ್ಯಮಗಳು ಸಿದ್ಧ ಇದ್ದು ಅವುಗಳನ್ನು ಪ್ರಕಟಿಸಿ ಇಲ್ಲವೇ ಪ್ರಸಾರ ಮಾಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಮತ್ತು ಸಾರ್ವಜನಿಕ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳುವ ನಾಗರಿಕ ಹಕ್ಕನ್ನು ಮುನ್ನಡೆಸಬೇಕು.

  • ಅದರೆ ಪ್ರಸ್ತುತ ಹಂತದಲ್ಲಿ ಫಿರ್ಯಾದಿಗಳು ಒದಗಿಸಿರುವ ದಾಖಲೆಗಳನ್ನು ಗಮನಿಸಿದರೆ ಸುದ್ದಿಗಳು ಪರಿಶೀಲನೆ ಮಾಡದ ಪ್ರಚೋದನಕಾರಿಯಾದ ಸ್ವರೂಪದಲ್ಲಿವೆ.

  • ಈ ಮೇಲಿನ ಸನ್ನಿವೇಶಗಳಲ್ಲಿ ಫಿರ್ಯಾದಿದಾರರು/ಅರ್ಜಿದಾರರ ವಿರುದ್ಧ ಸೂಕ್ತ ಪರಿಶೀಲನೆ ನಡೆಸದೇ ಯಾವುದೇ ಸುದ್ದಿ ಪ್ರಸಾರ ಅಥವಾ ಪ್ರಕಟಣೆಯನ್ನು ತಡೆಯುವುದು ಅಗತ್ಯ ಎಂದು ಅಭಿಪ್ರಾಯಪಡುತ್ತಿದ್ದೇನೆ.

  • ಆದ್ದರಿಂದ ಮುಂದಿನ ವಿಚಾರಣೆಯವರೆಗೆ ಸಿ ಡಿ ಗೆ ಸಂಬಂಧಿಸಿದಂತೆ ಫಿರ್ಯಾದಿದಾರರ ವಿರುದ್ಧ ಮಾನಹಾನಿಕರ ಸುದ್ದಿ, ದೃಶ್ಯ ಹಾಗೂ ಚಿತ್ರಗಳನ್ನು ಪ್ರಸಾರ, ಪ್ರಕಟಣೆ ಮಾಡುವುದು ಅಥವಾ ಹಂಚಿಕೊಳ್ಳುವುದು ಇಲ್ಲವೇ ಪೋಸ್ಟ್‌ ಮಾಡುವುದು ಅಥವಾ ಅದಕ್ಕೆ ಅವಕಾಶ ಮಾಡಿಕೊಡುವುದು, ತಲುಪಿಸುವುದು ಇಲ್ಲವೇ ಹರಡದಂತೆ ಪ್ರತಿವಾದಿಗಳು/ಪ್ರತಿ ಪಕ್ಷಕಾರರನ್ನು ಈ ಮಧ್ಯಂತರ ಆದೇಶದ ಮೂಲಕ ತಡೆ ಹಿಡಿಯಲಾಗಿದೆ.