A S Ponnanna, Nayana Motamma
A S Ponnanna, Nayana Motamma 
ಸುದ್ದಿಗಳು

ಕರ್ನಾಟಕ ವಿಧಾನಸಭೆಗೆ ಕಾನೂನು ಲೋಕದಿಂದ ಬಂದ ಹೊಸ ಜನಪ್ರತಿನಿಧಿಗಳು ಇವರು

Bar & Bench

ಕಾರ್ಪೊರೇಟ್ ವಕೀಲೆಯಾಗಿದ್ದ ಹಾಗೂ ಭಾರತ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಹಳೆಯ ವಿದ್ಯಾರ್ಥಿನಿಯಾದ ನಯನಾ ಮೋಟಮ್ಮ ಅವರು ಇತ್ತೀಚೆಗೆ ಮುಕ್ತಾಯಗೊಂಡ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ.

ಅಂತೆಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಕೋಶದ ಅಧ್ಯಕ್ಷರು ಹಾಗೂ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ ಎಸ್ ಪೊನ್ನಣ್ಣ ಅವರು ವಿರಾಜಪೇಟೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಜಯಭೇರಿ ಬಾರಿಸುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ನಯನಾ ಅವರು 1978 ಮತ್ತು 1999ರ ನಡುವೆ ಮೂರು ಬಾರಿ ಮೂಡಿಗೆರೆಯಿಂದ ಗೆದ್ದಿದ್ದ ಮಾಜಿ ಸಚಿವೆ ಕಾಂಗ್ರೆಸ್‌ ನಾಯಕಿ ಮೋಟಮ್ಮ ಅವರ ಪುತ್ರಿ. ಬಿಜೆಪಿ ಅಭ್ಯರ್ಥಿ ದೀಪಕ್‌ ದೊಡ್ಡಯ್ಯ ಅವರನ್ನು 722 ಮತಗಳ ಅಂತರದಿಂದ ಮಣಿಸಿದ್ದಾರೆ ನಯನಾ. ಭಾರತೀಯ ಚುನಾವಣಾ ಆಯೋಗದ ಜಾಲತಾಣದಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ, ನಯನಾ ಅವರು ಶೇ 38ರಷ್ಟುವೋಟ್‌ ಶೇರ್‌ ಪಡೆದಿದ್ದಾರೆ. ದೊಡ್ಡಯ್ಯ ಅವರು  50,121 ಮತಗಳನ್ನು ಪಡೆದರೆ ನಯನಾ 50,843 ಮತ ಗಳಿಸಿದರು.

ದಲಿತ ಸಮುದಾಯಕ್ಕೆ ಸೇರಿದ ನಯನಾ ಅವರು ರಾಷ್ಟ್ರೀಯ ಕಾನೂನು ಶಾಲೆಯಿಂದ 2003ರಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಜೊತೆಗೆ ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಕಾನೂನು ಪದವಿ (ಎಲ್‌ಎಲ್‌ಎಂ) ಗಳಿಸಿದ್ದಾರೆ. ಅವರು ಲೂಥ್ರಾ ಅಂಡ್‌ ಲೂಥ್ರಾ ಕಾನೂನು ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡಿದ್ದಾರೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪೊನ್ನಣ್ಣ ಅವರು  83,791 ಮತ ಪಡೆದು ತಮ್ಮ ಸಮೀಪ ಸ್ಪರ್ಧಿ ಹಾಗೂ ಬಿಜೆಪಿಯ ಹಿರಿಯ ನಾಯಕ ಕೆ ಜಿ ಬೋಪಯ್ಯ ಅವರನ್ನು 4,291 ಮತಗಳಿಂದ ಸೋಲಿಸಿದ್ದಾರೆ. ಬೋಪಯ್ಯ ಅವರು 83,791 ಮತ ಪಡೆದಿದ್ದಾರೆ.

ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವಿದ್ದಾಗ ಐದು ವರ್ಷಗಳ ಕಾಲ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಆಗಿ ಸೇವೆ ಸಲ್ಲಿಸಿದ್ದ ಪೊನ್ನಣ್ಣ ಅವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲೂ ಒಂದು ವರ್ಷ ಎಎಜಿ ಆಗಿ ಕೆಲಸ ಮಾಡಿದ್ದರು. ಪೊನ್ನಣ್ಣ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಪದವೀಧರರು.