Karnataka HC and Goonda Act 
ಸುದ್ದಿಗಳು

ಗೂಂಡಾ ಕಾಯಿದೆ: ಹೈಕೋರ್ಟ್‌ನಿಂದ ಸರ್ಕಾರದ ಆದೇಶ ವಜಾ; ಅರ್ಜಿದಾರರಿಗೆ‌ ತಿಂಗಳೊಳಗೆ ₹25 ಸಾವಿರ ಪರಿಹಾರಕ್ಕೆ ನಿರ್ದೇಶನ

ಸಂವಿಧಾನದ 22ನೇ ವಿಧಿಯಡಿ ಅರ್ಜಿದಾರರಿಗೆ ಮನವಿ ಸಲ್ಲಿಸುವ ಹಕ್ಕು ಇದೆ ಎಂದಿದ್ದು, ಬೆಂಗಳೂರು ಪೊಲೀಸ್‌ ಆಯುಕ್ತರು ಮತ್ತು ಅಧಿಕಾರಿಗಳ ಬಿಡುಬೀಸು ನಡೆಯ ಬಗ್ಗೆ ಪೀಠ ಕಿಡಿಕಾರಿದೆ.

Siddesh M S

ಆರೋಪಿಯ ಮನವಿಯನ್ನು ಪರಿಗಣಿಸದೇ ಕಾನೂನುಬಾಹಿರವಾಗಿ ಅರ್ಜಿದಾರರನ್ನು ಕರ್ನಾಟಕದಲ್ಲಿ ವಸ್ತುಗಳ ಕಾನೂನುಬಾಹಿರ ಮಾರಾಟ, ಮಾದಕ ವಸ್ತುಗಳ ಕಾನೂನುಬಾಹಿರ ಮಾರಾಟ, ಜೂಜುಕೋರರು, ಗೂಂಡಾಗಳು (ಅನೈತಿಕ ಟ್ರಾಫಿಕ್‌ ಅಫೆಂಡರ್ಸ್‌, ಕೊಳಚೆ ಪ್ರದೇಶಗಳ ಲೂಟಿಕೋರರು ಮತ್ತು ವಿಡಿಯೊ ಅಥವಾ ಆಡಿಯೊ ಖದೀಮರು) ನಿಯಂತ್ರಣ ಕಾಯಿದೆ 1985ರ ಅಡಿ ಮುಂಜಾಗ್ರತೆಯಿಂದ ವಶಕ್ಕೆ ಪಡೆದಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ವಜಾ ಮಾಡಿದೆ. ಅಲ್ಲದೇ, ಒಂದು ತಿಂಗಳ ಒಳಗಾಗಿ ಅರ್ಜಿದಾರರಿಗೆ 25 ಸಾವಿರ ರೂಪಾಯಿ ಪರಿಹಾರ ಪಾವತಿಸುವಂತೆ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಬೆಂಗಳೂರು ಪೊಲೀಸ್‌ ಆಯುಕ್ತರು ಮತ್ತು ಕೇಂದ್ರ ಕಾರಾಗೃಹದ ಮೇಲ್ವಿಚಾರಕರಿಗೆ ಆದೇಶಿಸಿದೆ.

ಅರ್ಜಿದಾರ ಕಾರ್ತಿಕ್‌ ಅಲಿಯಾಸ್‌ ಉಲ್ಲಾಳ್‌ ಕಾರ್ತಿಕ್‌ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಮನವಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ಸಂವಿಧಾನದ 22ನೇ ವಿಧಿಯಡಿ ಅರ್ಜಿದಾರರಿಗೆ ಮನವಿ ಸಲ್ಲಿಸುವ ಹಕ್ಕು ಇದೆ ಎಂದಿದ್ದು, ಬೆಂಗಳೂರು ಪೊಲೀಸ್‌ ಆಯುಕ್ತರು ಮತ್ತು ಅಧಿಕಾರಿಗಳ ಗಂಭೀರ ರಹಿತವಾದ ನಡೆಯ ಬಗ್ಗೆ ಕಿಡಿಕಾರಿದೆ.

“ಕರ್ನಾಟಕ ಗೂಂಡಾ ಕಾಯಿದೆ 1985ರ ಸೆಕ್ಷನ್‌ 3ರ ಪ್ರಕಾರ ಬೆಂಗಳೂರು ಪೊಲೀಸ್‌ ಆಯುಕ್ತರು ಆರೋಪಿ ಕಾರ್ತಿಕ್‌ನನ್ನು ವಶಕ್ಕೆ ಪಡೆದಿದ್ದರು. ಬಳಿಕ ಸಲಹಾ ಸಮಿತಿಯು ಜನವರಿ 20, 2021ರಂದು ಅರ್ಜಿದಾರರನ್ನು ವಶಕ್ಕೆ ಪಡೆದಿರುವ ಆದೇಶ ಎತ್ತಿ ಹಿಡಿಯಲು ಶಿಫಾರಸ್ಸು ಮಾಡಿತ್ತು. ಇದರ ಅನ್ವಯ ರಾಜ್ಯ ಸರ್ಕಾರವು ಜನವರಿ 30ರಂದು ಆದೇಶ ಮಾಡಿದ್ದು, 2020ರ ಡಿಸೆಂಬರ್‌ 14ರಿಂದ ಪೂರ್ವಾನ್ವಯವಾಗುವಂತೆ ಒಂದು ವರ್ಷಗಳ ಕಾಲ ಕಾರ್ತಿಕ್‌ ಅವರನ್ನು ಗೂಂಡಾ ಕಾಯಿದೆ ಅಡಿ ಬಂಧಿಸಲು ಆದೇಶ ಮಾಡಿತ್ತು. ಇದಕ್ಕೂ ಮುನ್ನ, ಸಲಹಾ ಸಮಿತಿಯು ಜನವರಿ 11ರಂದು ಅರ್ಜಿದಾರ ಕಾರ್ತಿಕ್‌ ವಾದವನ್ನು ಆಲಿಸಿತ್ತು. ಇದರಂತೆ ಸಂವಿಧಾನದ 22ನೇ ವಿಧಿಯ ಕಲಂ 5ರ ಪ್ರಕಾರ ತಮ್ಮ ಬಿಡುಗಡೆ ಕುರಿತು ಮನವಿಯನ್ನು ಕಾರ್ತಿಕ್‌ ಜನವರಿ 12ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ಇದನ್ನು ಸಲಹಾ ಸಮಿತಿ ಅಥವಾ ರಾಜ್ಯ ಸರ್ಕಾರ ಪರಿಗಣಿಸಿರಲಿಲ್ಲ. ಇದನ್ನು ಆಧರಿಸಿದ್ದ ಅರ್ಜಿದಾರರ ಪರ ವಕೀಲರಾದ ರೋಷನ್‌ ತಿಗಡಿ ಅವರು ತಿದ್ದುಪಡಿ ಮಾಡಿದ ಮನವಿಯನ್ನು ಸಲ್ಲಿಸಿದ್ದರು. ಇದಕ್ಕೆ ಪೀಠವು ಸಮ್ಮತಿಸಿತ್ತು” ಎಂದು ಆದೇಶದಲ್ಲಿ ಹೇಳಲಾಗಿದೆ.

“ಮೊದಲು ಅರ್ಜಿದಾರರ ಮನವಿಗೆ ಆಕ್ಷೇಪಣೆ ಸಲ್ಲಿಸಿದ್ದ ರಾಜ್ಯ ಸರ್ಕಾರವು ಆರೋಪಿ ಮನವಿ ಸಲ್ಲಿಸಿದ್ದನ್ನು ಉಲ್ಲೇಖಿಸಿತ್ತು. ಆದರೆ, ತಿದ್ದುಪಡಿ ಮಾಡಲಾದ ಮನವಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಆಕ್ಷೇಪಣೆಯಲ್ಲಿ ಅರ್ಜಿದಾರ ಯಾವುದೇ ಮನವಿ ಸಲ್ಲಿಸಿರಲಿಲ್ಲ ಎಂದು ವಾದಿಸಿತ್ತು. ಈ ಸಂಬಂಧ ಸಿಸಿಬಿಯ ಇನ್‌ಸ್ಪೆಕ್ಟರ್‌ ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ ಅರ್ಜಿದಾರರು ಮನವಿ ಸಲ್ಲಿಸಿಲ್ಲ ಎಂದು ಬಿಡುಬೀಸಾಗಿ ಹೇಳಿದ್ದಾರೆ. ವಾಸ್ತವದಲ್ಲಿ ಆಕ್ಷೇಪಣೆ ಜೊತೆಗೆ ಅಫಿಡವಿಟ್‌ ಸಲ್ಲಿಸುವುದು ಬೆಂಗಳೂರು ಪೊಲೀಸರ ಕರ್ತವ್ಯವಾಗಿದೆ” ಎಂದು ಪೀಠ ಹೇಳಿದೆ.

ಕೆ ಎಂ ಅಬ್ದುಲ್‌ ಕೂನಿ ಮತ್ತು ಇತರರು ಮತ್ತು ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ (ಗೂಂಡಾ ಕಾಯಿದೆಯಡಿ ಬಂಧಿತರಾದ ಆರೋಪಿಗಳ) ಮನವಿ ಪರಿಗಣಿಸಬೇಕು ಎಂದು ಹೇಳಿದೆ. ಇದೇ ಸುಪ್ರೀಂ ಕೋರ್ಟ್‌ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಜಯಮ್ಮ ವರ್ಸಸ್‌ ಬೆಂಗಳೂರು ಪೊಲೀಸ್‌ ಆಯುಕ್ತರ ಪ್ರಕರಣದಲ್ಲಿಯೂ ಪ್ರಸ್ತಾಪಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅರ್ಜಿದಾರರ ಪರ ವಕೀಲ ರೋಹನ್‌ ತಿಗಡಿ ಅವರು “ಅರ್ಜಿದಾರರ ವಿರುದ್ಧ ಮಾದಕವಸ್ತುಗಳು ಮತ್ತು ಅಮುಲು ಪದಾರ್ಥಗಳ ನಿಯಂತ್ರಣ ಕಾಯಿದೆ ಅಡಿ ಎರಡು ಪ್ರಕರಣ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಕೊಲೆ, ಕೊಲೆ ಯತ್ನ, ದರೋಡೆ ಮತ್ತಿತರ ಆರೋಪಗಳ ಅಡಿ ಆರು ಪ್ರಕರಣಗಳನ್ನು ದಾಖಲಿಸಲಾಗಿತ್ತು. ಸೆಷನ್ಸ್‌ ನ್ಯಾಯಾಲಯವು ಎರಡು ಪ್ರಕರಣಗಳಲ್ಲಿ ಅರ್ಜಿದಾರ ಕಾರ್ತಿಕ್‌ ಅವರನ್ನು ಖುಲಾಸೆಗೊಳಿಸಿದೆ. ಆರು ಪ್ರಕರಣಗಳಲ್ಲಿ ಅವರಿಗೆ ಜಾಮೀನು ದೊರೆತಿದೆ. ಇದೆಲ್ಲವನ್ನೂ ಪರಿಗಣಿಸದ ರಾಜ್ಯ ಸರ್ಕಾರವು ಅವರನ್ನು ಏಕಾಏಕಿ ಗೂಂಡಾ ಕಾಯಿದೆ ಅಡಿ ಮುಂಜಾಗ್ರತೆಯಿಂದ ವಶಕ್ಕೆ ಪಡೆಯುವ ಆದೇಶ ಮಾಡಿದೆ” ಎಂದು ವಾದಿಸಿದರು.