NLSIU and Supreme Court 
ಸುದ್ದಿಗಳು

ಸ್ಥಳೀಯ ಮೀಸಲಾತಿ: ತಿದ್ದುಪಡಿ ಕಾಯಿದೆ ವಜಾಗೊಳಿಸಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸರ್ಕಾರ

ಕರ್ನಾಟಕ ಶಾಸನಸಭೆ ಅಧಿನಿಯಮದಡಿ ಎನ್‌ಎಲ್ಎಸ್‌ಐಯು ಆರಂಭಿಸಲಾಗಿರುವುದರಿಂದ ಅದನ್ನು ರಾಜ್ಯದ ಸಂಸ್ಥೆ ಎಂದೇ ಪರಿಗಣಿಸಲಾಗುತ್ತದೆ ಎಂದು ಮನವಿಯಲ್ಲಿ ರಾಜ್ಯ ಸರ್ಕಾರವು ಉಲ್ಲೇಖಿಸಿದೆ.

Siddesh M S

ಕರ್ನಾಟಕ ಸರ್ಕಾರವು ಸ್ಥಳೀಯರಿಗೆ ಶೇ. 25ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಜಾರಿಗೆ ತಂದಿದ್ದ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ತಿದ್ದುಪಡಿ ಕಾಯಿದೆ – 2020 ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ ನಿರ್ಧಾರ ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಕೆಳಗಿನ ಅಂಶಗಳ ಆಧಾರದಲ್ಲಿ ಹೈಕೋರ್ಟ್‌ ಆದೇಶವನ್ನು ಕರ್ನಾಟಕ ಸರ್ಕಾರ ಪ್ರಶ್ನಿಸಿದೆ:

  • ಎನ್‌ಎಲ್‌ಎಸ್‌ಐಯುನ ಇಬ್ಬರು ಮಾಜಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ಪರಿಗಣಿಸಬಾರದಿತ್ತು. ಸಾಮಾನ್ಯವಾಗಿ ಶಾಸನದ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗುವ ರಿಟ್‌ ರೂಪದ ಪಿಐಎಲ್‌ಗಳನ್ನು ಹೈಕೋರ್ಟ್‌ ಪರಿಗಣಿಸಬಾರದು ಎಂದು ಗುರುವಾಯೂರು ದೇವಸ್ಥಾನ ನಿರ್ವಹಣಾ ಸಮಿತಿ ವರ್ಸಸ್‌ ಸಿ ಕೆ ರಾಜನ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ.

  • ಕರ್ನಾಟಕ ವಿಧಾನಸಭೆಗೆ ತಿದ್ದುಪಡಿ ಕಾಯಿದೆ ಜಾರಿಗೊಳಿಸುವ ಅಗತ್ಯವಾದ ಅರ್ಹತೆ ಇದೆ ಎಂದು ಹೈಕೋರ್ಟ್‌ ಹೇಳಿದೆ. ಅದಾಗ್ಯೂ ಎನ್‌ಎಲ್‌ಎಸ್‌ಐಯು ಕಾಯಿದೆಯಲ್ಲಿ ಮೀಸಲಾತಿ ಯೋಜನೆಯನ್ನು ಮಾರ್ಪಾಡು ಮಾಡಲಾಗಿದೆ ಎಂಬ ಏಕೈಕ ಕಾರಣಕ್ಕೆ ತಿದ್ದುಪಡಿ ಕಾಯಿದೆಯನ್ನು ಅಸಿಂಧುಗೊಳಿಸಬಾರದಿತ್ತು.

  • ಎನ್‌ಎಲ್‌ಎಸ್‌ಐಯು ಕಾರ್ಯಕಾರಿ ಸಮಿತಿಯ ಅಧಿಕಾರವನ್ನು ತಿದ್ದುಪಡಿ ಕಾಯಿದೆಯು ಆತಿಕ್ರಮಿಸುತ್ತದೆ ಎಂದು ಹೇಳುವ ಮೂಲಕ ಹೈಕೋರ್ಟ್‌ ಎಡವಿದ್ದು, ಪರಿಣಾಮ ಇದು ಕಾಯಿದೆಯ ಯೋಜನೆಗೆ ವಿರುದ್ಧವಾಗಿದೆ ಎಂದಿದೆ. ಶಾಸನದ ಮೂಲಕ ಒಮ್ಮೆ ಪ್ರಾಧಿಕಾರಕ್ಕೆ ಅಧಿಕಾರ ನೀಡಿದ ಮೇಲೆ ಶಾಸನಸಭೆಯು ಆ ಅಧಿಕಾರವನ್ನು ನಿಯಂತ್ರಿಸುವ ಅಥವಾ ನೀಡಲಾದ ಅಧಿಕಾರದ ಬಳಕೆಯನ್ನು ಮಾರ್ಪಡಿಸುವ ಅಧಿಕಾರವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತದೆ ಎಂದು ಈ ಮೂಲಕ ಹೈಕೋರ್ಟ್ ಹೇಳಿದೆ.

  • ಎನ್‌ಎಲ್‌ಎಸ್‌ಐಯು ಅನುದಾನಿತ ಸಂಸ್ಥೆಯಲ್ಲ ಎಂದು ಹೇಳುವ ಮೂಲಕ ಹೈಕೋರ್ಟ್‌ ಎಡವಿದೆ. ವಾರ್ಷಿಕ ಅನುದಾನದ ಜೊತೆಗೆ 23 ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ದರಕ್ಕೆ ಭೋಗ್ಯಕ್ಕೆ ಸರ್ಕಾರ ನೀಡಿದೆ ಎಂಬುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ದಾಖಲೆಗಳನ್ನು ಹೈಕೋರ್ಟ್‌ ಮುಂದಿಡಲಾಗಿದೆ.

  • ಎನ್‌ಎಲ್‌ಎಸ್‌ಐಯು ರಾಜ್ಯ ಸಂಸ್ಥೆಯಲ್ಲ ಅದರಿಂದ ರಾಜ್ಯ ಸರ್ಕಾರಕ್ಕೆ ಅದರ ಮೇಲೆ ಅಧಿಕಾರವಿಲ್ಲ ಎಂದು ಹೇಳುವ ಮೂಲಕ ಹೈಕೋರ್ಟ್‌ ತಪ್ಪಾಗಿ ಅರ್ಥೈಸಿದೆ. ಕರ್ನಾಟಕ ಶಾಸನಸಭೆಯ ಅಧಿನಿಯಮದ ಅನ್ವಯ ಎನ್‌ಎಲ್‌ಎಸ್‌ಐಯು ಆರಂಭಿಸಲಾಗಿರುವುದರಿಂದ ಅದು ರಾಜ್ಯದ ಸಂಸ್ಥೆಯಾಗಿದೆ. ಸಂಸ್ಥೆ ಆರಂಭಿಸುವುದಕ್ಕೆ ಸಂಬಂಧಿಸಿದ ಇತಿಹಾಸ ಮತ್ತು ಅದರಲ್ಲಿ ವಕೀಲರ ಪರಿಷತ್ತಿನ ಪಾತ್ರದ ಹೊರತಾಗಿಯೂ ರಾಜ್ಯ ಶಾಸನಸಭೆಯ ಅಧಿನಿಯಮದಿಂದಾಗಿ ಸಂಸ್ಥೆ ರೂಪುಗೊಂಡಿದೆ ಎಂಬುದು ವಾಸ್ತವ.

  • ಸಂವಿಧಾನದ 14ನೇ ವಿಧಿಯನ್ನು ತಿದ್ದುಪಡಿ ಕಾಯಿದೆ ಉಲ್ಲಂಘಿಸುತ್ತದೆ ಎಂದು ಹೇಳುವ ಮೂಲಕ ಹೈಕೋರ್ಟ್‌ ತಪ್ಪು ಹೆಜ್ಜೆ ಇಟ್ಟಿದೆ. ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸುವ ಉದ್ದೇಶ ಹೊಂದಿರುವುದರಿಂದ ಕಾಯಿದೆ ಜಾರಿಯಲ್ಲಿ ಯಾವುದೇ ದುರುದ್ದೇಶವಿಲ್ಲ. ತಿದ್ದುಪಡಿ ಕಾಯಿದೆಯ ಉದ್ದೇಶಗಳ ಕುರಿತು ರಾಜ್ಯ ಸರ್ಕಾರವು ವಿಸ್ತೃತವಾಗಿ ವಿವರಿಸಿದೆ. ಕಾನೂನು ಶಿಕ್ಷಣಕ್ಕೆ ಆದ್ಯತೆ ನೀಡುವುದರ ಮೂಲಕ ಕಾನೂನು ವೃತ್ತಿ ಮತ್ತು ಶಿಕ್ಷಣ ಕ್ಷೇತ್ರದ ವ್ಯಾಪ್ತಿಯನ್ನು ರಾಜ್ಯ ಮತ್ತು ದೇಶದಲ್ಲಿ ಶ್ರೀಮಂತಗೊಳಿಸುವ ಉದ್ದೇಶ ಹೊಂದಲಾಗಿದೆ.

  • ಕರ್ನಾಟಕದ ವಿದ್ಯಾರ್ಥಿಗಳಿಗೆ ಎನ್‌ಎಲ್‌ಎಸ್‌ಐಯುನಲ್ಲಿ ಅವಕಾಶ ದೊರೆತಿಲ್ಲ ಅಥವಾ ಅವರು ಹಿಂದುಳಿದಿದ್ದಾರೆ ಎಂಬುದಕ್ಕೆ ಸರ್ಕಾರ ದತ್ತಾಂಶದ ದಾಖಲೆ ಸಲ್ಲಿಸಿಲ್ಲ ಎಂದು ಹೇಳುವ ಮೂಲಕ ಹೈಕೋರ್ಟ್‌ ಎಡವಿದೆ. ಕರ್ನಾಟಕದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದಾರೆ ಅಥವಾ ಹಿಂದುಳಿದಿದ್ದಾರೆ ಎಂಬ ವಿಚಾರವೇ ಇಲ್ಲಿ ಇಲ್ಲ. ರಾಜ್ಯದ ಅಭಿವೃದ್ಧಿ ಯೋಜನೆಯ ಭಾಗವಾಗಿ ಅವರು ಪ್ರತಿನಿಧಿಸಲ್ಪಡುತ್ತಾರೆ. ಮೀಸಲಾತಿಯ ಕುರಿತು ರಾಜ್ಯ ಸರ್ಕಾರವು ತನ್ನ ನಿಲುವನ್ನು ಈಗಾಗಲೇ ಸಮರ್ಥಿಸಿದ್ದು, ಶಾಸನಬದ್ಧ ನಿರೀಕ್ಷೆಯಂತೆ ರಾಜ್ಯದ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ರಾಜ್ಯದಲ್ಲಿ ಉಳಿದು, ರಾಜ್ಯದ ಹಿತಾಸಕ್ತಿಯನ್ನು ಕಾಯಲಿದ್ದು, ಕಾನೂನು ವೃತ್ತಿ/ಶಿಕ್ಷಣ ವಲಯದ ವ್ಯಾಪ್ತಿಯನ್ನು ಹೆಚ್ಚಿಸಲಿದ್ದಾರೆ.

ಮೇಲಿನ ಕಾರಣಗಳ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ನ ಸೆಪ್ಟೆಂಬರ್ 29ರ ತೀರ್ಪಿಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಕರ್ನಾಟಕ ಸರ್ಕಾರ ಸ್ಥಳೀಯ ಮೀಸಲಾತಿ ತಿದ್ದುಪಡಿ ಕಾಯಿದೆಯನ್ನು ಪ್ರಶ್ನಿಸಿ ಮೊದಲ ಮನವಿಯನ್ನು 17 ವರ್ಷದ ಸಿಎಲ್‌ಎಟಿ ಆಕಾಂಕ್ಷಿಯಾದ ಬಾಲಚಂದರ್‌ ಕೃಷ್ಣನ್‌ ಸಲ್ಲಿಸಿದ್ದರು. ವಕೀಲ ಸಿ ಕೆ ನಂದಕುಮಾರ್‌ ಪಿಐಎಲ್‌ ರೂಪದಲ್ಲಿ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದರು. ತಮ್ಮ ಜೊತೆ ಸಮಾಲೋಚನೆ ಮಾಡದೇ ಕರ್ನಾಟಕ ಸರ್ಕಾರವು ತಿದ್ದುಪಡಿ ಕಾಯಿದೆ ಜಾರಿಗೊಳಿಸಿದೆ ಎಂದು ಭಾರತೀಯ ವಕೀಲರ ಪರಿಷತ್ತು ಮನವಿ ಸಲ್ಲಿಸಿತ್ತು.