ಪಾಕಿಸ್ತಾನದ ಲಷ್ಕರ್ ಇ-ತೊಯ್ಬಾ (ಎಲ್‌ಇಟಿ) ಭಯೋತ್ಪಾದನಾ ಸಂಘಟನೆಯ ಜೊತೆಗೂಡಿ ಉಗ್ರ ಚಟುವಟಿಕೆಗೆ ಪಿತೂರಿ ನಡೆಸಿದ್ದರು ಎನ್ನಲಾದ ಪ್ರಕರಣದಲ್ಲಿ ದೋಷಿಗಳು ಎಂದು ಘೋಷಿತವಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಪಾಕಿಸ್ತಾನದ ಪ್ರಜೆ ಸೇರಿ ಮೂವರನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಖುಲಾಸೆಗೊಳಿಸಿದೆ.
ಬೆಂಗಳೂರಿನ ಟಿಪ್ಪು ನಗರದ ಸಯದ್ ಅಬ್ದುಲ್ ರೆಹಮಾನ್ ಮತ್ತು ಚಿಂತಾಮಣಿಯ ಅಪ್ಸರ್‌ಪಾಷಾ ಅಲಿಯಾಸ್ ಖುಶಿರುದ್ದೀನ್ ಹಾಗೂ ಪಾಕಿಸ್ತಾನದ ಕರಾಚಿಯ ಮೊಹಮ್ಮದ್ ಫಹಾದ್ ಅಲಿಯಾಸ್ ಮೊಹಮ್ಮದ್ ಕೊಯಾ ಅವರ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಜೆ ಎಂ ಖಾಜಿ ಅವರ ವಿಭಾಗೀಯ ಪೀಠವು ಭಾಗಶಃ ಪುರಸ್ಕರಿಸಿದೆ.
ಮೂವರು ದೋಷಿಗಳ ವಿರುದ್ಧ ಪ್ರಾಸಿಕ್ಯೂಷನ್ ಸಲ್ಲಿಸಿರುವ ಸಾಕ್ಷಿಯು ಅವರು ದೇಶದ ವಿರುದ್ಧ ಯುದ್ಧಕ್ಕೆ ಇಳಿದಿರುವ ಸಂಘಟನೆಯ ಭಾಗವಾಗಿದ್ದರು ಎಂಬುದಕ್ಕೆ ಸಾಲದು ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಕಾನೂನಿನ ಅನ್ವಯ ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ (ಯುಎಪಿಎ) ಪ್ರಕರಣವನ್ನು ಸ್ವತಂತ್ರ ಪರಿಶೀಲನಾ ಪ್ರಾಧಿಕಾರದ ಪರಿಶೀಲನೆಗೆ ಒಳಪಡಿಸಲಾಗಿಲ್ಲ. ಹೀಗಾಗಿ, (ಯುಎಪಿಎ) ಅನ್ವಯಿಸಿರುವ ಅಭಿಯೋಜನಾ ಆದೇಶವು ತನ್ನ ಪಾವಿತ್ರ್ಯತೆ ಕಳೆದುಕೊಂಡಿದ್ದು, ಇದನ್ನು ವಿಚಾರಣಾಧೀನ ನ್ಯಾಯಾಲಯ ಪರಿಗಣಿಸಲು ವಿಫಲವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಜೈಲಿನಲ್ಲಿ ಮೂವರ ಭೇಟಿ ಮತ್ತು ಅವರ ಕರೆ ದಾಖಲೆಯು ಅವರು ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲು ಸಾಲದು. ಲಭ್ಯ ಇರುವ ಸಾಕ್ಷ್ಯವು ಅವರನ್ನು ದೋಷಿ ಎಂದು ಘೋಷಿಸಿರುವುದನ್ನು ಸಮರ್ಥಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಕೊಯಾನನ್ನು ಪಾಕಿಸ್ತಾನಕ್ಕೆ ವರ್ಗಾಯಿಸುವಂತೆ ಆದೇಶಿಸಿದೆ.
ಈ ಮಧ್ಯೆ, ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡಿರುವುದಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಕಾಯಿದೆ ಅಡಿ ಸಯದ್ ಅಬ್ದುಲ್ ರೆಹಮಾನ್ ದೋಷಿ ಎಂಬ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಆ ಅಪರಾಧಗಳಿಗೆ ನೀಡಲಾಗಿರುವ ಜೈಲು ಶಿಕ್ಷೆ ಜಾರಿಯಲ್ಲಿರಲಿದೆ.
ಪ್ರಕರಣದ ಹಿನ್ನೆಲೆ: ಕ್ರಿಮಿನಲ್ ಹಿನ್ನೆಲೆಯ ರೆಹಮಾನ್ ಎಂಬಾತ (ಮೊದಲನೇ ಆರೋಪಿ) ಎಲ್‌ಇಟಿ ಪೂರೈಸಿರುವ ಶಸ್ತ್ರಾಸ್ತ್ರ ಇರಿಸಿಕೊಂಡು ಬೆಂಗಳೂರಿನ ನಂಜಪ್ಪ ಲೇಔಟ್‌ನ ಜುಮ್ಮಾ ಮಸೀದಿಯ ಬಳಿ ಇದ್ದಾನೆ ಎನ್ನುವ ಮಾಹಿತಿ 2012ರ ಮೇ 7ರಂದು ಅಪರಾಧ ವಿಭಾಗದ ಇನ್‌ಸ್ಪೆಕ್ಟರ್ ಕೆ ಸಿ ಅಶೋಕನ್ ಅವರಿಗೆ ಸಿಕ್ಕಿತ್ತು. ಅವರು ಆತನನ್ನು ಬಂಧಿಸಿದ್ದರು. ಇದಲ್ಲದೆ, ಈ ಆರೋಪಿ ಈ ಹಿಂದೆ ಅಪರಾಧ ಚಟುವಟಿಕೆಯಲ್ಲಿ ಜೈಲು ಸೇರಿದ್ದಾಗ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದ ಪಾಷಾ ಮತ್ತು ಕೊಯಾ ಎಂಬುವರ ಜೊತೆ ಗೆಳೆತನ ಬೆಳೆದಿತ್ತು. ಅವರು ಈತನನ್ನು ಪಾಕಿಸ್ತಾನ ಹಾಗೂ ಯುಎಇಯಲ್ಲಿದ್ದ ಲಷ್ಕರ್ ಎ ತೊಯ್ಬಾದ ಏಜೆಂಟರಿಗೆ ಪರಿಚಯಿಸಿದದರು ಎಂದೂ ತಿಳಿದು ಬಂದಿತ್ತು. ತದನಂತರ ರೆಹಮಾನ್ ಜಾಮೀನಿನ ಮೇಲೆ ಹೊರಬಂದಿದ್ದ ಎನ್ನುವುದು ಗೊತ್ತಾಯಿತು.
ಆನಂತರ ಬೆಂಗಳೂರಿನಲ್ಲಿ 2012ರಲ್ಲಿ ನಡೆದಿದ್ದ ಸ್ಫೋಟ ಸೇರಿದಂತೆ ಭಯೋತ್ಪಾದನಾ ಚಟುವಟಿಕೆಗಾಗಿ ಎಲ್‌ಇಟಿ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿರುವ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರನ್ನು ಪ್ರಾಸಿಕ್ಯೂಷನ್ ಬೆಸೆದಿತ್ತು.
ಪಿತೂರಿ ಮತ್ತು ದೇಶದ ವಿರುದ್ಧ ಯುದ್ಧ ಸಾರುವ ಆರೋಪದಲ್ಲಿ ವಿಚಾರಣಾಧೀನ ನ್ಯಾಯಾಲಯವು ಈ ಮೂವರನ್ನು ದೋಷಿಗಳು ಎಂದು ಘೋಷಿಸಿತ್ತು. ಅಲ್ಲದೇ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು