ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯಿಂದ ಕೋವಿಡ್ ವ್ಯಾಪಕವಾಗಿ ಹರಡುವ ಸಾಧ್ಯತೆ ಇರುವುದರಿಂದ ಇದಕ್ಕೆ ತಡೆ ವಿಧಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಮನವಿಯನ್ನು ಇಂದು ಪಟ್ಟಿಯಾಗಿರುವ ಎಲ್ಲಾ ಪ್ರಕರಣಗಳು ಮುಗಿದ ಬಳಿಕ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಬುಧವಾರ ಕರ್ನಾಟಕ ಹೈಕೋರ್ಟ್ ಹೇಳಿದೆ.
“ಅಪಾರ ಬೆಂಬಲಿಗರನ್ನು ಒಳಗೊಂಡು ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ. ಇದು ಕೋವಿಡ್ ವ್ಯಾಪಕವಾಗಿ ಹರಡಲು ಕಾರಣವಾಗಬಹುದು. ಹಾಗಾಗಿ, ಈ ಪಾದಯಾತ್ರೆಗೆ ನಿರ್ಬಂಧ ವಿಧಿಸಬೇಕು. ಅತ್ಯಂತ ತುರ್ತು ಇರುವುದರಿಂದ ಎಲ್ಲಾ ಪ್ರಕರಣಗಳ ವಿಚಾರಣೆ ಮುಗಿದ ಮೇಲೆ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ವಿಚಾರಣೆಗೆ ಕೈಗೆತ್ತುಕೊಳ್ಳಬೇಕು” ಎಂದು ವಕೀಲ ಶ್ರೀಧರ್ ಪ್ರಭು ಅವರು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ಪೀಠ ಆಸೀನವಾದ ಬಳಿಕ ಅವರ ಗಮನಕ್ಕೆ ತಂದರು.
“ಆಗಬಹುದು. ಈ ಸಂಬಂಧ ಮಾಹಿತಿಯನ್ನು ಪ್ರತಿವಾದಿಗಳಿಗೆ ತಿಳಿಸಬೇಕು. ಎಲ್ಲಾ ಪ್ರಕರಣಗಳ ವಿಚಾರಣೆ ಮುಗಿದ ಬಳಿಕ ಕೊನೆಗೆ ಪಿಐಎಲ್ ಅನ್ನು ಕೈಗೆತ್ತುಕೊಳ್ಳಲಾಗುವುದು” ಎಂದು ಮುಖ್ಯ ನ್ಯಾಯಮೂರ್ತಿಯವರು ಈ ವೇಳೆ ಹೇಳಿದರು.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ನಿರ್ಬಂಧ ಹೇರಿರುವ ನಡುವೆಯೂ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ ಭಾನುವಾರದಿಂದ 10 ದಿನಗಳ ಪಾದಯಾತ್ರೆ ಆರಂಭಿಸಿದೆ. ‘ನಮ್ಮ ನೀರು ನಮ್ಮ ಹಕ್ಕು’ ಎಂಬ ಘೋಷದೊಂದಿಗೆ ನಡೆಯುತ್ತಿರುವ ಪಾದಯಾತ್ರೆಯ ನೇತೃತ್ವವವನ್ನು ಕೆಪಿಸಿಸಿ ಅಧ್ಯಕ್ಷ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಹಿಸಿದ್ದಾರೆ. ಈ ಪಾದಯಾತ್ರೆಯಲ್ಲಿ ಕಾರ್ಯಕರ್ತರು, ಮುಖಂಡರು, ಸಾಂಸ್ಕೃತಿಕ ತಂಡಗಳು ಸೇರಿ ಸಾವಿರಾರು ಮಂದಿ ಪಾಲ್ಗೊಳ್ಳುತ್ತಿದ್ದಾರೆ.