ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿನ ಅಕ್ರಮ ಆರೋಪಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರನ್ನಾಗಿ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್ ಹಿತೇಂದ್ರ ಅವರನ್ನು ನೇಮಕ ಮಾಡಿ ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಧಾರವಾಡ ಪೀಠವು ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಿ, ಎಸ್ಐಟಿಯ ಪುನರ್ರಚನೆಗೆ ಸಂಬಂಧಿಸಿದಂತೆ ಪರಿಷ್ಕೃತ ಆದೇಶ ಹೊರಡಿಸಿದೆ.
ಇದೇ ವೇಳೆ, ರಾಜ್ಯ ಪೊಲೀಸ್ ಆಡಳಿತ ವಿಭಾಗದ ಎಡಿಜಿಪಿ ಸೋಮೇಂದು ಮುಖರ್ಜಿ ಅವರನ್ನು ಎಸ್ಐಟಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
2026ರ ಸೆಪ್ಟೆಂಬರ್ 21ರಂದು ಹೈಕೋರ್ಟ್, ಕಾರಾಗೃಹ ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಐವರು ಸದಸ್ಯರ ಎಸ್ಐಟಿ ರಚಿಸಿ ಆದೇಶಿಸಿತ್ತು. ಆದರೆ, ಎಸ್ಐಟಿ ಮುಖ್ಯಸ್ಥ ಅಲೋಕ್ ಕುಮಾರ್ ಮತ್ತು ಸದಸ್ಯೆಯಾಗಿದ್ದ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕಿ ಐಜಿಪಿ ಡಾ. ದಿವ್ಯಾ ಗೋಪಿನಾಥನ್ ಅವರನ್ನು ಬದಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಹೈಕೋರ್ಟ್ ಸೋಮವಾರ ತನ್ನ ಹಿಂದಿನ ಆದೇಶವನ್ನು ಮಾರ್ಪಡಿಸಿದ್ದು, ಆರ್ ಹಿತೇಂದ್ರ ಅವರನ್ನು ಎಸ್ಐಟಿಯ ನೂತನ ಮುಖ್ಯಸ್ಥರನ್ನಾಗಿ ನೇಮಿಸಿದೆ. ಡಾ. ದಿವ್ಯಾ ಗೋಪಿನಾಥನ್ ಅವರ ಬದಲಿಗೆ ಸೋಮೇಂದು ಮುಖರ್ಜಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿದೆ.
ಉಳಿದಂತೆ ಉಪ ಪೊಲೀಸ್ ಆಯುಕ್ತ ಅನೂಪ್ ಶೆಟ್ಟಿ, ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮತ್ತು ಉಪ ಪೊಲೀಸ್ ಆಯುಕ್ತ ಶಮಾ ಮಿಶ್ರಾ ಅವರು ಎಸ್ಐಟಿ ಸದಸ್ಯರಾಗಿ ಮುಂದುವರಿಯಲಿದ್ದಾರೆ.
ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಆರೋಪಗಳ ಪ್ರಕರಣದಲ್ಲಿ ಎಸ್ಐಟಿ ಸ್ವತಂತ್ರ ಹಾಗೂ ವಿಶ್ವಾಸಾರ್ಹ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಎಸ್ಐಟಿ ಸೂಚಿಸುವ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ನೇಮಿಸಬೇಕು ಮತ್ತು ತನಿಖೆಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಪೀಠ ಆದೇಶಿಸಿದೆ.
ಈ ಹಿಂದೆ ಪ್ರಕರಣದ ತನಿಖೆಯಲ್ಲಿ ತೊಡಗಿದ್ದ ಸಿಐಡಿ ಅಧಿಕಾರಿಗಳನ್ನು ಎಸ್ಐಟಿಯಲ್ಲಿ ಮುಂದುವರಿಸಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಇದೇ ವೇಳೆ, ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮತ್ತು ಎಸ್ಐಟಿ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಪ್ರಕರಣದ ಹಿನ್ನೆಲೆ: ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ತನಿಖೆಗೆ ಅಲೋಕ್ ಕುಮಾರ್ ನೇತೃತ್ವದ ಐವರು ಸದಸ್ಯರ ಎಸ್ಐಟಿ ರಚಿಸಿ ಹೈಕೋರ್ಟ್ ಸೆಪ್ಟೆಂಬರ್ 21ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ನಂತರ ಸುಪ್ರೀಂ ಕೋರ್ಟ್, ಪ್ರಕರಣದ ತನಿಖೆಯನ್ನು ಆರಂಭದಿಂದಲೇ ಹೊಸದಾಗಿ ನಡೆಸಬೇಕು ಎಂಬ ಹೈಕೋರ್ಟ್ ನಿರ್ದೇಶನವನ್ನು ರದ್ದುಗೊಳಿಸಿತ್ತು. ಈಗಾಗಲೇ ನಡೆದಿರುವ ತನಿಖೆಯ ಹಂತದಿಂದಲೇ ಎಸ್ಐಟಿ ಮುಂದಿನ ತನಿಖೆ ನಡೆಸಬೇಕು ಎಂದು ಸೂಚಿಸಿತ್ತು.
ಜೊತೆಗೆ, ಎಸ್ಐಟಿ ಮುಖ್ಯಸ್ಥರು ಮತ್ತು ಮತ್ತೊಬ್ಬ ಸದಸ್ಯರನ್ನು ಬದಲಿಸಲು ಪರ್ಯಾಯ ಅಧಿಕಾರಿಗಳ ಹೆಸರುಗಳನ್ನು ಸೂಚಿಸುವ ಅವಕಾಶವನ್ನು ರಾಜ್ಯ ಸರ್ಕಾರಕ್ಕೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಲ್ವರು ಅಧಿಕಾರಿಗಳ ಹೆಸರುಗಳನ್ನು ಹೈಕೋರ್ಟ್ಗೆ ಸೂಚಿಸಿತ್ತು. ಅವರಲ್ಲಿ ಇಬ್ಬರನ್ನು ಎಸ್ಐಟಿಗೆ ನೇಮಕ ಮಾಡಬಹುದು ಎಂದು ತಿಳಿಸಿತ್ತು. ಎಸ್ಐಟಿಗೆ ಪೊಲೀಸ್ ಠಾಣೆಯ ಸ್ಥಾನಮಾನ ನೀಡಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು.
ರಾಜ್ಯ ಸರ್ಕಾರದ ಶಿಫಾರಸಿನ ಹಿನ್ನೆಲೆಯಲ್ಲಿ ಹೈಕೋರ್ಟ್ ಎಸ್ಐಟಿಯನ್ನು ಪುನರ್ರಚಿಸಿದ್ದು, ಆರ್ ಹಿತೇಂದ್ರ ಅವರನ್ನು ತನಿಖಾ ತಂಡದ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.