RSS Leader Kalladka Prabhakar Bhat and Karnataka HC 
ಸುದ್ದಿಗಳು

[ಮುಸ್ಲಿಮ್‌ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ] ಪ್ರಭಾಕರ್‌ ಭಟ್‌ಗೆ ಮಾತಿನ ಮೇಲೆ ಹಿಡಿತವಿರಲಿ: ಹೈಕೋರ್ಟ್‌

“ಮಾತನಾಡುವಾಗ ಎಚ್ಚರವಹಿಸಿವಂತೆ ಪ್ರಭಾಕರ್‌ ಭಟ್‌ಗೆ ಸೂಚಿಸಿ. ಇದೆಲ್ಲಾ ಏಕೆ, ಪ್ರಕರಣ ದಾಖಲಿಸಿದ ಬಳಿಕ ಮತ್ತೊಂದು ಪ್ರಕರಣ ಏಕೆ? ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿರುವುದರಿಂದ ಮಾತಿನ ಮೇಲೆ ನಿಗಾ ಇರಬೇಕು” ಎಂದು ಎಚ್ಚರಿಸಿತು.

Bar & Bench

ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌ ಮಾತಿನ ಮೇಲೆ ಹಿಡಿತ ಸಾಧಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಮಂಗಳವಾರ ಹೇಳಿದೆ.

ಪುತ್ತೂರಿನ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿರುವ ಕೋಮು ದ್ವೇಷ ಆರೋಪದ ಸಂಬಂಧಿತ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಡಾ. ಪ್ರಭಾಕರ್‌ ಭಟ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

Justice M Nagaprasanna

ದೂರುದಾರರ ಪರ ವಕೀಲ ಎಸ್‌ ಬಾಲನ್‌ ಅವರು “ಇಂಥದ್ದೇ 12 ಅಪರಾಧ ಪ್ರಕರಣಗಳು ಭಟ್‌ ವಿರುದ್ಧ ಮಂಗಳೂರಿನಲ್ಲಿ ಬಾಕಿ ಇವೆ. ರಾಜ್ಯದ ಹಲವೆಡೆ ಇಂಥದ್ದೇ ಪ್ರಕರಣಗಳು ದಾಖಲಾಗಿವೆ. ಮೈಕ್‌ ಸಿಕ್ಕಿದ ತಕ್ಷಣ ಭಟ್‌ ವಿಷಕಾರುತ್ತಾರೆ. ನಾಯಿಗಳ ರೀತಿಯಲ್ಲಿ ಮುಸ್ಲಿಮ್‌ ಮಹಿಳೆಯರು ಮಕ್ಕಳಿಗೆ ಜನ್ಮ ನೀಡುತ್ತಾರೆ. ಎಂದಿದ್ದಾರೆ” ಎಂದರು.

ಈ ಹಂತದಲ್ಲಿ ಪೀಠವು ಮೈಕ್‌ ಆಫ್‌ ಮಾಡಿ ಮಾತನಾಡುವಂತೆ ವಕೀಲರಿಗೆ ಸೂಚಿಸಿತು.

ಒಂದು ಹಂತದಲ್ಲಿ ಪೀಠವು ಲಘು ದಾಟಿಯಲ್ಲಿ “ವಿಷರಹಿತವಾಗಿ ಭಟ್‌ ಮಾತನಾಡಬೇಕು. ಭಟ್‌ ಅವರು ಮಾತನಾಡಿದರೆ ನೀವು ಸುಮ್ಮನೆ ಕೂರುವುದಿಲ್ಲ. ಇನ್ನೊಂದು ಪ್ರಕರಣ ದಾಖಲಿಸುತ್ತೀರಿ. ಮಾತನಾಡುವಾಗ ಎಚ್ಚರವಹಿಸಿವಂತೆ ಭಟ್‌ಗೆ ಸೂಚಿಸಿ. ಇದೆಲ್ಲಾ ಏಕೆ, ಪ್ರಕರಣ ದಾಖಲಿಸಿದ ಬಳಿಕ ಮತ್ತೊಂದು ಪ್ರಕರಣ ಏಕೆ? ನ್ಯಾಯಾಂಗ ಪ್ರಕ್ರಿಯೆ ನಡೆಯುತ್ತಿರುವುದರಿಂದ ಮಾತಿನ ಮೇಲೆ ನಿಗಾ ಇರಬೇಕು” ಎಂದಿತು.

ಪ್ರಭಾಕರ್‌ ಭಟ್‌ ಪರವಾಗಿ ಹಿರಿಯ ವಕೀಲ ಎಂ ಅರುಣ ಶ್ಯಾಮ್‌ ಹಾಜರಿದ್ದರು.

ಪ್ರಕರಣದ ಹಿನ್ನೆಲೆ: 2025ರ ಅಕ್ಟೋಬರ್‌ನಲ್ಲಿ ಪುತ್ತೂರಿನ ಉಪ್ಪಳಿಗೆಯಲ್ಲಿ ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಆರ್‌ಆರ್‌ಎಸ್‌ ಪ್ರತಿನಿಧಿ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರು ಆಚೆ ಮನೆಯಲ್ಲಿದ್ದ ಬ್ಯಾರಿಯೊಬ್ಬಳು ಆರನೇ ಮಗುವಾದ ಬಳಿಕ ಏಳನೇಯದ್ದಕ್ಕೆ ಗರ್ಭಿಣಿಯಾಗಿದ್ದಳು. ಯಾರಾದರೂ ಅವಳನ್ನು ನೀನು ನಾಯಿ ಮರಿ ಹಾಕಿದಾಗೆ ಹಾಕಿದಿಯಾ ಅಂತ ಯಾರಾದ್ರೂ ಕೇಳಿದ್ರಾ? ಕೇಳುವ ಧೈರ್ಯ ಯಾರಿಗೂ ಇಲ್ಲ. ಅಲ್ಲಾಹ್‌ಗೋಸ್ಕರ ಎನ್ನುತ್ತಾರೆ. ನೀವೇನಾದರೂ ಮಹಾಲಿಂಗೇಶ್ವರಿಗೆ ಮಕ್ಕಳು ಮಾಡುತ್ತೀರಾ? ನಮ್ಮ ಜನಸಂಖ್ಯೆ ಜಾಸ್ತಿಯಾಗಬೇಕು. ಉಲ್ಲಾಳದಲ್ಲಿ ಹಿಂದೂ ಗೆಲ್ಲೋದಕ್ಕೆ ಸಾಧ್ಯವೇ ಇಲ್ಲ. ಅಲ್ಲಿ ಖಾದರೇ ಗೆಲ್ಲೋದು. ಏಕೆಂದರೆ ಅಲ್ಲಿ 1.10 ಲಕ್ಷ ಓಟು ಬ್ಯಾರಿಗಳದ್ದೇ.. ಹಿಂದೂಗಳು 90 ಸಾವಿರ ಇರೋದು, ಗೆಲ್ಲೋದು ಯಾವಾಗ? ನಮ್ಮನ್ನು ಸರ್ವನಾಶ ಮಾಡುತ್ತಾರೆ. ಹೀಗಾಗಿ, ನಮ್ಮಲ್ಲಿ ಮೂರಕ್ಕಿಂತ ಕಡಿಮೆ ಮಕ್ಕಳು ಇರಬಾರದು ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಜನವಾದಿ ಸಂಘಟನೆ ಮತ್ತು ದಲಿತ ಸಂಘಟನೆಯ ಈಶ್ವರಿ ಪದ್ಮುಂಜ ದೂರಿದ್ದರು.

ಇದನ್ನು ಆಧರಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮೀಣ ಠಾಣೆಯಲ್ಲಿ ಪ್ರಭಾಕರ್‌ ಭಟ್‌ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ಗಳಾದ 79,196,299,302,3(5) ಅಡಿ ಪ್ರಕರಣ ದಾಖಲಿಸಲಾಗಿದೆ.