Justices P S Dinesh Kumar and T G Shivashankare Gowda
Justices P S Dinesh Kumar and T G Shivashankare Gowda 
ಸುದ್ದಿಗಳು

ಒಂದೇ ಪ್ಯಾಕ್‌ನಲ್ಲಿ ಮೊಬೈಲ್‌ ಜೊತೆಗೆ ಚಾರ್ಜರ್‌ ಮಾರಾಟ ಮಾಡಿದರೆ ಹೆಚ್ಚಿನ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್‌

Bar & Bench

ಒಂದೇ ಪ್ಯಾಕ್‌ನಲ್ಲಿ ಮೊಬೈಲ್‌ ಜೊತೆಗೆ ಚಾರ್ಜರ್‌ ಮಾರಾಟ ಮಾಡಿದರೆ ಕರ್ನಾಟಕ ಮೌಲ್ಯವರ್ಧಿತ ತೆರಿಗೆ (ಕೆ-ವ್ಯಾಟ್‌) ಕಾಯಿದೆ 2003ರ ಅಡಿ ಶೇ. 5ರಷ್ಟು ತೆರಿಗೆ ವಿಧಿಸಬಹುದೇ ವಿನಾ ಹೆಚ್ಚುವರಿ ತೆರಿಗೆ ವಿಧಿಸುವಂತಿಲ್ಲ ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಮೊಬೈಲ್‌ ಫೋನ್‌ ಚಿಲ್ಲರೆ ಮಾರಾಟಗಾರರು ಮತ್ತು ಮುಂಚೂಣಿ ಮೊಬೈಲ್‌ ಫೋನ್‌ ಉತ್ಪಾದಕರಿಗೆ 2008 ರಿಂದ 2013ರ ಅವಧಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ಜಾರಿ ಮಾಡಿದ್ದ ನೋಟಿಸ್‌ ವಜಾ ಮಾಡಿ ರಾಜ್ಯ ಮೇಲ್ಮನವಿ ನ್ಯಾಯ ಮಂಡಳಿ 2017ರಲ್ಲಿ ಮಾಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಾರಾಟ ತೆರಿಗೆ ಮರುಪರಿಶೀಲನಾ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಪಿ ಎಸ್‌ ದಿನೇಶ್‌ ಕುಮಾರ್‌ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

ವ್ಯಾಟ್‌ ಕಾಯಿದೆ ಅಡಿ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಟೆಲಿಫೋನ್‌ ಸೆಟ್‌ನಲ್ಲಿ ಅದರ ಜೊತೆಗಿನ ಬಿಡಿ ಭಾಗಗಳೂ ಸೇರಿದಂತೆ ಎಂದು ಹೇಳಲಾಗಿದೆ. ಹೀಗಾಗಿ, ಸರ್ಕಾರದ ಉದ್ದೇಶವು ನಿಸ್ಸಂದೇಹವಾಗಿ ಟೆಲಿಫೋನ್‌ ಮತ್ತು ಅದರ ಬಿಡಿ ಭಾಗಗಳು ಎಂದೇ ಆಗಿದೆ. ಇದರಲ್ಲಿ ಚಾರ್ಜರ್‌ ಸಹ ಸೇರಿದೆ ಎಂದು ನ್ಯಾಯಾಲಯ ಹೇಳಿದೆ.

ಮೊಬೈಲ್‌ ಜೊತೆಗೆ ಮಾರಾಟ ಮಾಡುವ ಚಾರ್ಜರ್‌ಗೆ ಅಧಿಕ ತೆರಿಗೆ ಪಟ್ಟಿಯ ಅಡಿ ವಾಣಿಜ್ಯ ತೆರಿಗೆ ಇಲಾಖೆಯು ಶೇ. 12 ರಿಂದ 14.5ರಷ್ಟು ತೆರಿಗೆ ಬೇಡಿಕೆ ಇಟ್ಟಿತ್ತು. ಒಟ್ಟಾಗಿ (ಕಾಂಪೊಸಿಟ್)‌ ಮಾರಾಟ ಮಾಡುವ ಉತ್ಪನ್ನಕ್ಕೆ ಪ್ರತ್ಯೇಕವಾಗಿ ಅದರ ಮೌಲ್ಯ ನಿರ್ಧರಿಸಲು ಯಾವುದೇ ವಿಧಾನವಿಲ್ಲ ಎಂಬುದನ್ನು ಕೆ-ವ್ಯಾಟ್‌ ಕಾಯಿದೆ ಸೆಕ್ಷನ್‌ 4 (ತೆರಿಗೆ ವಿಭಾಗ) ಮತ್ತು ಕೆ-ವ್ಯಾಟ್‌ ನಿಯಮಗಳ ಅಡಿ ನಿಯಮ 3ರಲ್ಲಿ ಸ್ಪಷ್ಟಪಡಿಸಲಾಗಿದೆ. ಪ್ರತ್ಯೇಕ ಸಾಧನದ ಮೌಲ್ಯವನ್ನು ನಿರ್ಧರಿಸಲು ವಿಧಾನ ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಪ್ರತ್ಯೇಕವಾಗಿ ಒಂದು ಬಾಕ್ಸ್‌ನಲ್ಲಿರುವ ಪ್ರತಿಯೊಂದು ಬಿಡಿ ಭಾಗಕ್ಕೂ ತೆರಿಗೆ ವಿಧಿಸಲು ಸಾಧ್ಯವಿಲ್ಲ” ಎಂದು ಪೀಠ ಹೇಳಿದೆ.

ಮೂರನೇ ಷೆಡ್ಯೂಲ್‌ನಲ್ಲಿನ ಮೊಬೈಲ್‌ ಫೋನ್‌ ಪಟ್ಟಿ ಮಾಡಲಾಗಿದೆ. ಹೀಗಾಗಿ, ಮೊಬೈಲ್‌ ಫೋನ್‌ ಜೊತೆ ಮಾರಾಟ ಮಾಡುವ ಚಾರ್ಜರ್‌ ಒಂದೇ ಸೆಟ್‌ ಆಗಿದ್ದು, ಅದಕ್ಕೆ ಶೇ. 5ರಷ್ಟು ತೆರಿಗೆ ಮಾತ್ರ ವಿಧಿಸಬಹುದಾಗಿದೆ ಎಂದು ಪೀಠ ಸ್ಪಷ್ಟಪಡಿಸಿತು.

ಮೊಬೈಲ್‌ ಫೋನ್‌ ಜೊತೆ ಮಾರಾಟ ಮಾಡಲಾಗುವ ಚಾರ್ಜರ್‌ ಪ್ರತ್ಯೇಜ್‌ ಗ್ಯಾಜೆಟ್ ಆಗಿದೆ. ಹೀಗಾಗಿ, ಮೊಬೈಲ್‌ ಫೋನ್‌ಗೆ ವಿಧಿಸುವ ತೆರಿಗೆಯನ್ನೇ ಅದಕ್ಕೆ ವಿಧಿಸಲಾಗದು ಎಂದು ವಾಣಿಜ್ಯ ತೆರಿಗೆ ಇಲಾಖೆ ವಾದಿಸಿತ್ತು.