Karnataka HC
Karnataka HC 
ಸುದ್ದಿಗಳು

ನ್ಯಾಯಮೂರ್ತಿಗಳ ಕೊಲೆ ಬೆದರಿಕೆ: ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆ ಆರಂಭಿಸಿದ ಕರ್ನಾಟಕ ಹೈಕೋರ್ಟ್

Bar & Bench

ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ಮತ್ತು ಇಬ್ಬರು ವಕೀಲರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಹೈಕೋರ್ಟ್ ರಿಜಿಸ್ಟ್ರಿಗೆ ಪತ್ರ ಬರೆದ 72 ವರ್ಷದ ವ್ಯಕ್ತಿಯ ವಿರುದ್ಧ ಕರ್ನಾಟಕ ಹೈಕೋರ್ಟ್ ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆಗೆ ಚಾಲನೆ ನೀಡಿದೆ.

ಎಸ್ ವಿ ಶ್ರೀನಿವಾಸ ರಾವ್ ಅವರ ಪತ್ರದಲ್ಲಿ ಮಾಡಲಾದ ಆರೋಪಗಳು ನ್ಯಾಯಾಲಯಗಳ ಅವಹೇಳನ ಕಾಯಿದೆಯನ್ನು ಉಲ್ಲಂಘಿಸುತ್ತವೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಫೆಬ್ರವರಿ 3 ರಂದು ನ್ಯಾಯಾಲಯವು ಹೊರಡಿಸಿದ ಆದೇಶ ಹೀಗಿದೆ: "ಈ ಪತ್ರದ ಆರೋಪಗಳು ಮೇಲ್ನೋಟಕ್ಕೆ ಕಾಯಿದೆಯ ಸೆಕ್ಷನ್ 2 ರ ನಿಯಮ (ಸಿ) ಅಡಿಯಲ್ಲಿ ಕ್ರಿಮಿನಲ್ ನ್ಯಾಯಾಂಗ ನಿಂದನೆಯಾಗಿದೆ... ಈ ನ್ಯಾಯಾಲಯದ ಮೇಲೆ ನ್ಯಾಯಾಂಗ ನಿಂದನೆ ಕೃತ್ಯ ಎಸಗಿದ ಆರೋಪ ಎದುರಿಸುತ್ತಿರುವ ಪ್ರತಿವಾದಿ/ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲು ಪ್ರಕರಣ ಹೂಡಿರುವ ಕುರಿತು ನಮಗೆ ಖಾತರಿ ಇದೆ. ಆದ್ದರಿಂದ, 1981ರ ಕರ್ನಾಟಕದ ಹೈಕೋರ್ಟ್ (ನ್ಯಾಯಾಂಗ ಪ್ರಕ್ರಿಯೆ ನಿಂದನೆ) ನಿಯಮ 8ರ ಪ್ರಕಾರ ಫಾರ್ಮ್ -1 ರಲ್ಲಿ ನೋಟಿಸ್ ನೀಡತಕ್ಕದ್ದು. ನೋಟಿಸ್‌ ಜೊತೆಗೆ ಈ ಆದೇಶದ ಪ್ರತಿಯನ್ನು ಸಹ ಕಳುಹಿಸತಕ್ಕದ್ದು. ಮಾರ್ಚ್ 1, 2021ರಂದು ನೋಟಿಸ್‌ಗೆ ಉತ್ತರಿಸಬೇಕಿದೆ.”

ಅಲ್ಲದೆ ಆರೋಪಿ ಬರೆದಿರುವ ಪತ್ರದ ಪ್ರತಿಯನ್ನು ಹೈಕೋರ್ಟ್‌ನ ಭದ್ರತೆಯ ಉಸ್ತುವಾರಿ ಹೊತ್ತಿರುವ ಪೊಲೀಸ್ ಅಧಿಕಾರಿಗೆ ಕಳುಹಿಸುವಂತೆ ನ್ಯಾಯಾಲಯ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಅವರಿಗೆ ನಿರ್ದೇಶನ ನೀಡಿದೆ.

ರಾವ್‌ ಭಾಗಿಯಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 4, 2020ರಂದು ಸಲ್ಲಿಸಿದ್ದ ಜ್ಞಾಪಕಪತ್ರದಲ್ಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ತೀವ್ರ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ಭಾರತೀಯ ವಕೀಲರ ಪರಿಷತ್ತನ್ನು ಗುರಿಯಾಗಿಸಿ ವ್ಯಾಪಕ ಆರೋಪ ಮಾಡಿದ್ದರು.

ಈ ಕಾರಣಕ್ಕೆ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ ನವೆಂಬರ್ 6 ರಂದು ರಾವ್‌ ಅವರ ವಿರುದ್ಧ ಸ್ವಯಂಪ್ರೇರಿತವಾಗಿ ಕ್ರಿಮಿನಲ್‌ ನ್ಯಾಯಾಂಗ ಪ್ರಕರಣ ದಾಖಲಿಸಿಕೊಳ್ಳುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಿತ್ತು. ಆರೋಪಗಳನ್ನು ಹಿಂಪಡೆಯುವಂತೆ ರಾವ್‌ ಅವರಿಗೆ ಅವಕಾಶ ನೀಡಿದ ಬಳಿಕ ಈ ಪ್ರಕ್ರಿಯೆ ಆರಂಭಿಸಲಾಗಿತ್ತು.

ನ್ಯಾಯಾಂಗವನ್ನು ವಿವಾದಕ್ಕೀಡುಮಾಡುವ, ಅನಗತ್ಯ ಮತ್ತು ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ನ್ಯಾಯಮೂರ್ತಿಗಳನ್ನು ಬೆದರಿಸಲು ಅಥವಾ ಭೀತಿ ಉಂಟು ಮಾಡಲು ಯಾವುದೇ ವ್ಯಕ್ತಿಗೆ ಅನುಮತಿ ನೀಡುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿತ್ತು.

ಅದರ ಹೊರತಾಗಿಯೂ, 2021ರ ಜನವರಿ 29ರಂದು ಹೈಕೋರ್ಟ್ ರೆಜಿಸ್ಟ್ರಿಗೆ ರಾವ್‌ ಪತ್ರ ಬರೆದರು. ನವೆಂಬರ್ 6 ರಂದು ಆದೇಶ ನೀಡಿದ ವಿಭಾಗೀಯ ಪೀಠದ ಭಾಗವಾಗಿದ್ದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳ ವಿರುದ್ಧ ಪತ್ರದಲ್ಲಿ ವಿವಾದಾಸ್ಪದ ಆರೋಪ ಮಾಡಲಾಗಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಪ್ರಭಾವಕ್ಕೊಳಗಾಗಿ ನ್ಯಾಯಮೂರ್ತಿ ನಡೆದುಕೊಂಡಿದ್ದಾರೆ ಎಂದು ಪತ್ರದಲ್ಲಿ ದೂಷಿಸಲಾಗಿತ್ತು.

" ಪತ್ರದ 5 ನೇ ಪ್ಯಾರಾದಲ್ಲಿ, ಪ್ರತಿವಾದಿ / ಆರೋಪಿ ಇತ್ತೀಚೆಗೆ, ಈ ನ್ಯಾಯಾಲಯದ (ಕರ್ನಾಟಕ ಹೈಕೋರ್ಟ್) ಮತ್ತು ಸುಪ್ರೀಂಕೋರ್ಟ್‌ನ ಅತ್ಯಂತ ಭ್ರಷ್ಟ 28 ನ್ಯಾಯಮೂರ್ತಿಗಳಲ್ಲಿ ದೋಷಪೂರಿತ ಇಬ್ಬರನ್ನು ಹಾಗೂ ಇಬ್ಬರು ವಕೀಲರನ್ನು ಕೊಲ್ಲಲು ನಿರ್ಧರಿಸಿದ್ದಾರೆ" ಎಂದು ಹೈಕೋರ್ಟ್ ತನ್ನ ಫೆಬ್ರವರಿ 3 ರ ಆದೇಶದಲ್ಲಿ ತಿಳಿಸಿದೆ. ಆದ್ದರಿಂದ ರಾವ್ ಅವರಿಗೆ ನೋಟಿಸ್‌ ನೀಡಿದ ನ್ಯಾಯಾಲಯ ವಿಡಿಯೋ ಕಾನ್ಫರೆನ್ಸ್ ಮೂಲಕ ಖುದ್ದು ಹಾಜರಾಗುವಂತೆ ಆದೇಶಿಸಿತು. ಮುಂದಿನ ವಿಚಾರಣೆ ಮಾರ್ಚ್ 1 ರಂದು ನಡೆಯಲಿದೆ.