ಸುಮಾರು 15 ಸಾವಿರ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಅಲ್ಪಸಂಖ್ಯಾತ ಭಾಷೆಗಳ ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಪಟ್ಟಿಯಿಂದ ಹೊರಟ್ಟಿರುವುದಕ್ಕೆ ವಿವರಣೆ ಬಯಸಿದ ನ್ಯಾಯಾಲಯ. ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಉರ್ದು ಸೇರಿದಂತೆ ಇತರೆ ಅಲ್ಪಸಂಖ್ಯಾತ ಭಾಷೆಗಳ ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಪಟ್ಟಿಯಿಂದ ಹೊರಗಿಟ್ಟಿರುವ ಬಗ್ಗೆ ವಿವರಣೆ ನೀಡುವಂತೆ ಎಂದು ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.
ನೇಮಕಾತಿ ಅಧಿಸೂಚನೆ ಪ್ರಶ್ನಿಸಿ ಹುಬ್ಬಳ್ಳಿ ನೇಕಾರ ನಗರದ ಉರ್ದು ಭಾಷಾ ಶಿಕ್ಷಕಿ ಆಸ್ಮಾ ಘೋರಿ ಮೋಗ್ರೆ ಸೇರಿದಂತೆ ಒಟ್ಟು ಆರು ಜನರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠ ನಡೆಸಿತು.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಎಲ್ಲ ಐವರು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ಪೀಠವು ವಿಚಾರಣೆಯನ್ನು ಆಗಸ್ಟ್ 28ಕ್ಕೆ ಮುಂದೂಡಿದೆ.
ಕನ್ನಡ ಅಥವಾ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿದ್ದ ಶಾಲೆಗಳಲ್ಲಿ ಖಾಲಿ ಹುದ್ದೆಗಳಿದ್ದರೂ, ನೇಮಕಾತಿ ಅಧಿಸೂಚನೆಯಲ್ಲಿ, ಉರ್ದು-ಮಾಧ್ಯಮ ಶಾಲೆಗಳನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ. ಇದು; ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು–2026 ಮತ್ತು 19, 21, 29(1) ಮತ್ತು 350ಎ ವಿಧಿಗಳ ಅಡಿಯಲ್ಲಿನ ಸಾಂವಿಧಾನಿಕ ಖಾತರಿಗಳನ್ನು ಉಲ್ಲಂಘಿಸುತ್ತದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ನೇಮಕಾತಿ ಅಧಿಸೂಚನೆಗೆ ತಡೆ ನೀಡಬೇಕು ಅಥವಾ ಪರ್ಯಾಯವಾಗಿ, ಉರ್ದು ಮಾಧ್ಯಮ ಮತ್ತು ಇತರ ಭಾಷಾ ಅಲ್ಪಸಂಖ್ಯಾತ ಹುದ್ದೆಗಳನ್ನು ಪರಿಗಣಿಸದೆ ನೇಮಕಾತಿ ಪ್ರಕ್ರಿಯೆಯನ್ನು ಅಂತಿಮಗೊಳಿಸದಂತೆ ಪ್ರತಿವಾದಿಗಳನ್ನು ತಡೆಯಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.