ಸುಪ್ರೀಂ ಕೋರ್ಟ್ ನಿರ್ದೇಶನಗಳನ್ವಯ ರಾಜ್ಯದಲ್ಲಿ ನಾಗರಿಕ ಸೇವಾ ಮಂಡಳಿಯನ್ನು (ಸಿಎಸ್‌ಬಿ) ಯಾವ ಕಾಲಮಿತಿಯೊಳಗೆ ಸ್ಥಾಪಿಸಲಾಗುತ್ತದೆ ಎಂಬ ಬಗ್ಗೆ ವಿವರಣೆ ನೀಡಿ ಪ್ರಮಾಣ ಪತ್ರ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಸೂಚಿಸಿದೆ.
ಸುಪ್ರೀಂ ಕೋರ್ಟ್ 2013ರಲ್ಲಿ ಮಾಡಿರುವ ಆದೇಶದಂತೆ ರಾಜ್ಯದಲ್ಲಿ ನಾಗರಿಕ ಸೇವಾ ಮಂಡಳಿಯನ್ನು ರಚಿಸಲು ಮತ್ತು ಸರ್ಕಾರಿ ಸೇವಕರ ಕನಿಷ್ಠ ಸೇವಾ ಅವಧಿಯನ್ನು ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಶ್ರೀನಗರದ ನಿವಾಸಿ ರಿಷಬ್ ಟಕ್ರೊ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಕೆ ಎಸ್ ಭರತ್ ಕುಮಾರ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ನಡೆಸಿದ ಪೀಠವು ಮಂಡಳಿ ಸ್ಥಾಪನೆ ಕುರಿತಂತೆ ಸರ್ಕಾರದ ಸಂಬಂಧಪಟ್ಟ ಅಧಿಕಾರಿ ಪ್ರಮಾಣ ಪತ್ರ ಸಲ್ಲಿಸಿದ್ದರೂ, ಅದರಲ್ಲಿರುವ ವಿಷಯಗಳ ಬಗ್ಗೆ ನ್ಯಾಯಾಲಯಕ್ಕೆ ತೃಪ್ತಿಯಾಗಿಲ್ಲ. ಆದ್ದರಿಂದ ನಾಗರಿಕ ಸೇವಾ ಮಂಡಳಿಯ ಸ್ಥಾಪನೆಗೆ ಕೈಗೊಂಡ ಕ್ರಮಗಳು ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಯಾವ ಕಾಲಮಿತಿಯೊಳಗೆ ಜಾರಿಗೊಳಿಸಲಾಗುತ್ತದೆ ಎಂಬುದನ್ನು ವಿವರಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿದೆ.
ಇದೇ ವೇಳೆ ಸಿಎಸ್‌ಬಿ ಸ್ಥಾಪಿಸುವವರೆಗೆ ಯಾವುದೇ ವರ್ಗಾವಣೆಯನ್ನು ನಡೆಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂಬ ಅರ್ಜಿದಾರರ ಮನವಿಗೆ ಒಪ್ಪದ ಪೀಠವು ನ್ಯಾಯಾಲಯವು ಮೌಖಿಕವಾಗಿ ಅಂತಹ ಆದೇಶವನ್ನು ನೀಡಲು ಸಾಧ್ಯವಿಲ್ಲ. ಅರ್ಜಿದಾರರು ಅದನ್ನು (ವರ್ಗಾವಣೆ) ಪ್ರಶ್ನಿಸಬಹುದು ಎಂದು ತಿಳಿಸಿ ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಸಂಸತ್ತು ನಾಗರಿಕ ಸೇವಾ ಮಂಡಳಿಯ ಸ್ಥಾಪನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನನ್ನು ಜಾರಿಗೆ ತರುವವರೆಗೆ, ಆಯಾ ಕ್ಷೇತ್ರಗಳಲ್ಲಿ ಪರಿಣಿತರಾಗಿರುವ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಒಳಗೊಂಡ ಮಂಡಳಿಗಳನ್ನು ಮೂರು ತಿಂಗಳೊಳಗೆ ರಚಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2013ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ಅಲ್ಲದೆ, ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದಂತೆ ಶಿಫಾರಸ್ಸುಗಳನ್ನು ಮಾಡುವುದು, ಸೇವಾ ವಿಷಯಗಳಲ್ಲಿ (ವಿಶೇಷವಾಗಿ ವರ್ಗಾವಣೆ, ನಿಯೋಜನೆ ಮತ್ತು ಶಿಸ್ತು ಕ್ರಮಗಳ ಕುರಿತು) ರಾಜ್ಯ ಸರ್ಕಾರಕ್ಕೆ ಮಾರ್ಗದರ್ಶನ ಹಾಗೂ ಸಲಹೆ ನೀಡುವುದು ಮತ್ತು ಸರ್ಕಾರಿ ಕಾರ್ಯಗಳಲ್ಲಿ ಉತ್ತಮ ಆಡಳಿತ, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಖಚಿತಪಡಿಸುವುದು ಈ ಮಂಡಳಿಯ ಜವಾಬ್ದಾರಿಯಾಗಿರುತ್ತದೆ. ಆಡಳಿತ, ನಿರ್ವಹಣೆ, ವಿಜ್ಞಾನ ಮತ್ತು ತಂತ್ರಜ್ಞಾನದಂತಹ ವಿವಿಧ ಕ್ಷೇತ್ರಗಳ ಪರಿಣಿತರನ್ನು ಒಳಗೊಂಡ ನಾಗರಿಕ ಸೇವಾ ಮಂಡಳಿಯು ಸರ್ಕಾರಿ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ವೃತ್ತಿಪರತೆ, ಪರಿಣತಿ ಮತ್ತು ದಕ್ಷತೆಯನ್ನು ತರಬಲ್ಲದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿತು.
ಈ ಆದೇಶವನ್ನು ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಅರ್ಜಿದಾರರು 2024ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.