Karnataka High Court
Karnataka High Court 
ಸುದ್ದಿಗಳು

ಕರಾವಳಿ ನಿರ್ವಹಣಾ ಕೇಂದ್ರಕ್ಕೆ ಬಂದರು ವಿಸ್ತರಣೆ ಯೋಜನೆ ಸರ್ವೆ ಜವಾಬ್ದಾರಿ ವಹಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

Bar & Bench

ಹೊನ್ನಾವರ ಬಂದರು ವಿಸ್ತರಣೆ ಯೋಜನೆಯ ಯಾವುದಾದರೂ ಭಾಗವು ʼಕಡಲಾಮೆಗಳ ಸಂತಾನಾಭಿವೃದ್ಧಿʼ ವ್ಯಾಪ್ತಿಗೆ ಒಳಪಟ್ಟಿದೆಯೇ ಎಂಬುದರ ಸರ್ವೆ ನಡೆಸಲು ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣಾ ಕೇಂದ್ರಕ್ಕೆ (ಎನ್‌ಸಿಎಸ್‌ಸಿಎಂ) ಜವಾಬ್ದಾರಿ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಕೋಡ್‌ ಟೊಂಕಾದಲ್ಲಿ ಹೊನ್ನಾವರ ಬಂದರು ಪ್ರೈವೇಟ್‌ ಲಿಮಿಟೆಡ್‌ ಯೋಜನೆ ಕೈಗೆತ್ತಿಕೊಂಡಿದೆ.

ಹೊನ್ನಾವರ ತಾಲ್ಲೂಕು ಹಸಿಮೀನು ವ್ಯಾಪಾರಸ್ಥರ ಸಂಘ ಸಲ್ಲಿಸಿದ್ದ‌ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ಪೀಠವು ನಡೆಸಿತು.

ಯೋಜನೆಗೆ ಹಸಿರು ನಿಶಾನೆ ತೋರಿದರೆ ಅಪರೂಪದ ಕಡಲಾಮೆ ಸಂತತಿಗೆ ಗಂಭೀರ ಸಮಸ್ಯೆ ಎದುರಾಗಲಿದೆ. 2012ರಲ್ಲಿ ಪರಿಸರ/ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಅನುಮತಿ ಪಡೆಯಲಾಗಿದ್ದು, 2019ರಲ್ಲಿ ಯೋಜನೆಯ ಸಿಂಧುತ್ವವನ್ನೂ ವಿಸ್ತರಿಸಲಾಗಿದೆ. 44 ಹೆಕ್ಟೇರ್‌ ಭೂ ಪ್ರದೇಶದಲ್ಲಿ ತೆಪ್ಪ/ಹಡಗು ಲೋಡಿಂಗ್‌ ವ್ಯವಸ್ಥೆ ಅಭಿವೃದ್ಧಿಪಡಿಸುವುದು ಯೋಜನೆಯ ಭಾಗವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

2019ರಲ್ಲಿ ಪರಿಸರ ಅನುಮತಿ ನೀಡಲಾಗಿದೆ ಎಂಬ ಆರೋಪ ಪರಿಶೀಲಿಸಲು ಪೀಠವು ನಿರಾಕರಿಸಿದೆ. ಅರ್ಜಿದಾರರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದಾಗಿ ಹೇಳಿದರೂ 2012ರಲ್ಲಿ ನೀಡಲಾಗಿರುವ ಪರಿಸರ ಅನುಮತಿಯನ್ನು ಇಷ್ಟು ತಡವಾಗಿ ಪರಿಶೀಲಿಸಲಾಗದು ಎಂದಿದೆ.

“ಆಮೆ ಸಂತಾನಾಭಿವೃದ್ಧಿ ಪ್ರದೇಶಕ್ಕೆ ಸಂಬಂಧಿಸಿದ ಗಂಭೀರ ವಾದವನ್ನು ಪರಿಗಣಿಸಿ ಚೆನ್ನೈನಲ್ಲಿ ಕಚೇರಿ ಹೊಂದಿರುವ ಎನ್‌ಸಿಎಸ್‌ಸಿಎಂ ಮೂಲಕ ಯೋಜನೆಯ ಸ್ಥಳವಾದ 45 ಹೆಕ್ಟೇರ್‌ ಭೂಪ್ರದೇಶದಲ್ಲಿ ಸರ್ವೆ ನಡೆಸಿ, ಯಾವುದಾದರೂ ಭಾಗವು ಆಮೆ ಸಂತಾನಾಭಿವೃದ್ಧಿ ಪ್ರದೇಶಕ್ಕೆ ಸೇರುತ್ತದೆಯೇ ಎಂಬುದನ್ನು ಪತ್ತೆ ಹೆಚ್ಚಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

ಯೋಜನೆಯ ಸ್ಥಳದಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂಬುದನ್ನು ಸ್ಥಳಕ್ಕೆ ಭೇಟಿ ನೀಡಿ ನಿರ್ಣಯ ದಾಖಲಿಸುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ. ಸಂಬಂಧಪಟ್ಟ ಪಕ್ಷಕಾರರಿಗೆ ನೋಟಿಸ್‌ ಜಾರಿ ಮಾಡಿದ ಬಳಿಕ ಕಂದಾಯ ಇಲಾಖೆಯ ಅಧಿಕಾರಿಗಳ ನೆರವಿನೊಂದಿಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಬಹುದಾಗಿದೆ ಎಂದು ಪೀಠ ಹೇಳಿದೆ. 0.8 ಹೆಕ್ಟೇರ್‌ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ಮುಂದುವರಿಯಲಿದ್ದು, ಯಾವುದೇ ಕೆಲಸ ನಡೆಸಿದರೂ ಅದು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಪೀಠ ಹೇಳಿದೆ.