ಖಾಸಗಿ ದೂರು ಸಲ್ಲಿಕೆಯಲ್ಲಿನ ಪ್ರಮಾಣ ಪತ್ರದ ತಾಂತ್ರಿಕ ದೋಷವನ್ನು ಮುಂದುಮಾಡಿ ರಾಜಕಾರಣಿಗಳ ವಿರುದ್ಧದ ಭ್ರಷ್ಟಾಚಾರ ಆರೋಪದ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸುವ ಬದಲಿಗೆ ವಿಚಾರಣಾ ನ್ಯಾಯಾಲಯ ಸ್ವತಃ ವಿಚಾರಣೆಗೆ ಮುಂದಾಗುವುದು ತರವಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನಿಯಮಬಾಹಿರವಾಗಿ ನಿವೇಶನ ಮಂಜೂರು ಮಾಡಲಾಗಿದೆ ಎಂಬ ದೂರಿನ ಪ್ರಕರಣವನ್ನು ಜನಪ್ರತಿನಿಧಿಗಳ ಸತ್ರ ನ್ಯಾಯಾಲಯಕ್ಕೆ ಹಿಂದಿರುಗಿಸಿ ಆದೇಶಿಸಿದೆ.
“ಖಾಸಗಿ ದೂರಿನ ಪ್ರಮಾಣಪತ್ರ ಸಮರ್ಪಕವಾಗಿಲ್ಲ. ಅದು ಸುಪ್ರೀಂ ಕೋರ್ಟ್ ರೂಪಿಸಿರುವ ಅಂಶಗಳಿಗೆ ಅನುಗುಣವಾಗಿಲ್ಲ, ದೋಷಗಳಿವೆ ಎಂದು ಉಲ್ಲೇಖಿಸುವ ಮೂಲಕ ಜನಪ್ರತಿನಿಧಿಗಳ ಸತ್ರ ನ್ಯಾಯಾಲಯ ತಾನೇ ವಿಚಾರಣೆಗೆ ಮುಂದಾಗಿರುವುದು ಕಾನೂನಾತ್ಮಕವಾಗಿ ತಪ್ಪು” ಎಂದು ಆಕ್ಷೇಪಿಸಿ ದೂರುದಾರ ವಿಜಯರಾಘವ ಮರಾಠೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಮೇಲಿನ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪ್ರಕಟಿಸಿದೆ.
ಅರ್ಜಿದಾರರ ಪರ ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್ ಅವರು “ಸತ್ರ ನ್ಯಾಯಾಲಯ ಈ ಪ್ರಕರಣದಲ್ಲಿ ಹುರುಳಿಲ್ಲ ಎಂದು ಎಲ್ಲೂ ಹೇಳಿಲ್ಲ. ದೂರು ತನಿಖೆಗೆ ಯೋಗ್ಯವಾಗಿದೆ ಎಂದು ಮೇಲ್ನೋಟಕ್ಕೆ ಒಪ್ಪಿಕೊಂಡಿರುವುದು ದೃಢಪಟ್ಟಿದೆ. ಆದರೆ, ಸುಪ್ರೀಂ ಕೋರ್ಟ್ 2026ರಲ್ಲಿ ಹೊರಡಿಸಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ದೂರುದಾರರ ಪ್ರಮಾಣಪತ್ರ ಸಲ್ಲಿಕೆಯಾಗಿಲ್ಲ ಎಂಬ ಅಂಶವನ್ನು ಮುಂದು ಮಾಡಿದೆ ಅಷ್ಟೇ” ಎಂದಿದ್ದರು.
“ಪ್ರಸಕ್ತ ದೂರನ್ನು 2025ರಲ್ಲೇ ಸಲ್ಲಿಸಲಾಗಿರುವ ಕಾರಣ ಸುಪ್ರೀಂ ಕೋರ್ಟ್ ತೀರ್ಪನ್ನು ಪೂರ್ವಾನ್ವಯ ನಿಲುವಿನಲ್ಲಿ ಪರಿಗಣಿಸಬೇಕಾಗಿಲ್ಲ. ಆದ್ದರಿಂದ, ಸಕ್ಷಮ ಪ್ರಾಧಿಕಾರದ ತನಿಖೆಗೆ ವಹಿಸಲು ದಾರಿ ಸುಗುಮಗೊಳಿಸಲು ಸತ್ರ ನ್ಯಾಯಾಲಯಕ್ಕೆ ನಿರ್ದೇಶಿಬೇಕು” ಎಂದು ಕೋರಿದ್ದರು.
ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ಪೀಠವು “ದೂರಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರದಲ್ಲಿ ದೋಷಗಳಿವೆ ಎಂಬ ಕಾರಣಕ್ಕಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಾನೇ ವಿಚಾರಣೆಗೆ ಮುಂದಾಗುವ ಬದಲಿಗೆ ದೋಷವನ್ನು ಪರಿಹರಿಸಿಕೊಳ್ಳಲು ದೂರುದಾರರಿಗೆ ಅವಕಾಶ ನೀಡಬೇಕಿತ್ತು” ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
“ಪ್ರಮಾಣಪತ್ರದಲ್ಲಿನ ದೋಷವು ದೂರುದಾರರಿಗೆ ನ್ಯಾಯಾಲಯದ ಮುಂದೆ ಕಾನೂನಿನ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ರಮಾಣಪತ್ರವನ್ನು ದಾಖಲಿಸಲು ನಿರ್ದೇಶಿಸುವ ಮೂಲಕ ಅದನ್ನು ಸುಲಭವಾಗಿ ಸರಿಪಡಿಸಬಹುದಾಗಿದ್ದ ಹಂತದಲ್ಲಿತ್ತು. ಆದರೆ, ಸತ್ರ ನ್ಯಾಯಾಲಯ ಅತಿಯಾದ ತಾಂತ್ರಿಕ ನಿಲುವನ್ನು ಪ್ರದರ್ಶಿಸಿದೆ” ಎಂದು ಹೇಳಿದೆ.
ಸೂಕ್ತ ಮತ್ತು ಕಾನೂನಾತ್ಮಕ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಪ್ರಕರಣದ ನ್ಯಾಯಿಕ ಪ್ರಕ್ರಿಯೆ ಮುಂದುವರಿಸುವಂತೆ ಸತ್ರ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ಪರಿಶಿಷ್ಟ ಜಾತಿಗೆ ಸೇರಿದ ಟ್ರಸ್ಟ್ ಎಂದು ಉಲ್ಲೇಖಿಸಿ ಖರ್ಗೆ ಮತ್ತು ಅವರ ಕುಟುಂಬಸ್ಥರ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ನಿಯಮಬಾಹಿರವಾಗಿ ಬಿಟಿಎಂ ಲೇಔಟ್‌ನಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಎರಡು ಎಕರೆ ನಿವೇಶನ ಮಂಜೂರು ಮಾಡಲಾಗಿದೆ ಎಂಬುದು ಫಿರ್ಯಾದುದಾರರ ಆರೋಪವಾಗಿದೆ.
ದೂರಿನಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಪತ್ನಿ ರಾಧಾಭಾಯಿ ಖರ್ಗೆ, ಸಂಸದ ರಾಧಾಕೃಷ್ಣ, ರಾಹುಲ್ ಖರ್ಗೆ ಮತ್ತು ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಆರೋಪಿಗಳನ್ನಾಗಿಸಲಾಗಿದೆ.