Farmers and Karnataka High Court 
ಸುದ್ದಿಗಳು

ರೈತ ದೇವರಾಜು ಆತ್ಮಹತ್ಯೆ: ₹5 ಲಕ್ಷ ಪರಿಹಾರ ಮನವಿ ಪರಿಗಣಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ದೇವರಾಜು ಸಾಲಮಾಡಿ ಕೃಷಿ ಚಟುವಟಿಕೆ ನಡೆಸಿದ್ದರು. ಬೆಳೆ ನಷ್ಟ ಉಂಟಾಗಿತ್ತು. ಇದರಿಂದ ಸಾಲಬಾಧೆ ತಾಳಲಾರದೆ 2022ರ ಡಿಸೆಂಬರ್‌ 1ರಂದು ಆತ್ಮಹತ್ಯೆಗೆ ಶರಣಾಗಿದ್ದರು.

Bar & Bench

ಸಾಲಬಾದೆಯಿಂದ 2022ರ ಡಿಸೆಂಬರ್ ತಿಂಗಳಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಹೋಬಳಿ ಬನ್ನಾಂಗಾಡಿ ಗ್ರಾಮದ ರೈತ ದೇವರಾಜು ಆತ್ಮಹತ್ಯೆ ‌ಮಾಡಿಕೊಂಡ ಹಿನ್ನೆಲೆಯಲ್ಲಿ ಆತನ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡುವ ಕುರಿತ ಮನವಿ ಪತ್ರವನ್ನು ಒಂದು ತಿಂಗಳಲ್ಲಿ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ದೇವರಾಜು ಆತ್ಮಹತ್ಯೆ ಹಿನ್ನೆಲೆಯಲ್ಲಿ ಪರಿಹಾರ ಬಿಡುಗಡೆಗೆ ಕೋರಿ ತಾವು ಸಲ್ಲಿಸಿರುವ ಮನವಿ ಪತ್ರ ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮೃತ ರೈತನ ಪತ್ನಿ ವಸಂತಾ, ಪುತ್ರ ಬಿ ಡಿ ಯಶವಂತ ಮತ್ತು ಪುತ್ರಿ ಸಿಂಚನ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.

ಪ್ರಕರಣದಲ್ಲಿ ಪರಿಹಾರ ಪಾವತಿಸಲು ವಿಳಂಬ ಮಾಡಿದ ತಪ್ಪಿತಸ್ಥ‌ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೆಯೇ, ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಯೋಜನೆಗಳ ಪ್ರಯೋಜನಾ ಕೋರಿ ಬರುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಕಂದಾಯ‌ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪೀಠ ಇದೇ ವೇಳೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ದೇವರಾಜು ಸಾಲಮಾಡಿ ಕೃಷಿ ಚಟುವಟಿಕೆ ನಡೆಸಿದ್ದರು. ಬೆಳೆ ನಷ್ಟ ಉಂಟಾಗಿತ್ತು. ಇದರಿಂದ ಸಾಲಬಾಧೆ ತಾಳಲಾರದೆ 2022ರ ಡಿಸೆಂಬರ್‌ 1ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತರ ಕಲ್ಯಾಣ ಪರಿಹಾರ ಯೋಜನೆಯಡಿ ತಮಗೆ ₹5 ಲಕ್ಷ ಪರಿಹಾರ ನೀಡುವಂತೆ 2023ರ ಫೆಬ್ರವರಿ 7ರಂದು ದೇವರಾಜು ಪತ್ನಿ ವಸಂತಾ ಅವರು ಪಾಂಡವಪುರ ಟೌನ್‌ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದ್ದರು. ಮೂರು ವರ್ಷ ಕಳೆದಿದ್ದರೂ ಪರಿಹಾರ ಮಾತ್ರ ಪರಿಹಾರ ಬಿಡುಗಡೆಯಾಗಿಲ್ಲ.

ಇದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವಸಂತಾ, ₹5 ಲಕ್ಷ ಪರಿಹಾರ ಬಿಡುಗಡೆಗೆ ಕೋರಿ ತಾವು ಸಲ್ಲಿಸಿರುವ ಮನವಿ ಪತ್ರವನ್ನು ಪರಿಗಣಿಸಲು ಪಾಂಡವಪುರ ಟೌನ್‌ ತಹಸೀಲ್ದಾರ್ ಮತ್ತು ಪಾಂಡವಪುರ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ನಿರ್ದೇಶಿಸುವಂತೆ ಕೋರಿದ್ದರು.