School children 
ಸುದ್ದಿಗಳು

ಒಂದನೇ ತರಗತಿಗೆ ವಯೋಮಿತಿ ಸಡಿಲಿಕೆ: ವಾರದಲ್ಲಿ ಆದೇಶ ಮಾಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಕಳೆದ ವರ್ಷ ನೀಡಿದ ಮಾದರಿಯಲ್ಲಿಯೇ 2026-27ನೇ ಶೈಕ್ಷಣಿಕ ವರ್ಷದ ಒಂದನೇ ತರಗತಿ ಪ್ರವೇಶಕ್ಕಾಗಿ ಕನಿಷ್ಠ ವಯೋಮಿತಿಯಲ್ಲಿ‌ ಒಮ್ಮೆ ಸಡಿಲಿಕೆ ನೀಡಿ 5 ವರ್ಷ 5 ತಿಂಗಳು ವಯಸ್ಸಿನ ಮಕ್ಕಳಿಗೂ ಪ್ರವೇಶ ಅವಕಾಶ ಕಲ್ಪಿಸಬೇಕು ಎಂಬುದು ಅರ್ಜಿದಾರ ಕೋರಿಕೆ.

Bar & Bench

ಮುಂಬರುವ 2026-27ನೇ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿಗೆ ದಾಖಲಾಗಲು ವಯೋಮಿತಿ ಸಡಿಲಿಕೆ ವಿಚಾರವನ್ನು ಮರು ಪರಿಶೀಲಿಸಿ ಒಂದು ವಾರದೊಳಗೆ ಸೂಕ್ತ ಆದೇಶ ಹೊರಡಿಸುವಂತೆ ರಾಜ್ಯ ಶಾಲಾ ಶಿಕ್ಷಣ ಇಲಾಖೆಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರ್ದೇಶನ ನೀಡಿದೆ.

ಬೆಂಗಳೂರಿನ ಮಾಸ್ಟರ್‌ ಕೃಷ್ಣ ಗಣೇಶ್‌ ಸೇರಿ 6 ಮಂದಿ ಪರವಾಗಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್‌ ಅವರ‌ ರಜಾಕಾಲೀನ ಏಕಸದಸ್ಯ ಪೀಠ ನಡೆಸಿತು.

Justice S R Krishna Kumar

ವಯೋಮಿತಿ ವಿಚಾರದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತೊಂದರೆ ಎದುರಿಸುತ್ತಿದ್ದಾರೆ. ಈ ಸಂಬಂಧ ಒಂದು ವಾರದೊಳಗೆ ಎಲ್ಲಾ‌ ಆಯಾಮಗಳಲ್ಲೂ ಪರಿಶೀಲಿಸಿ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ಅರ್ಜಿದಾರರ ಪರ ವಕೀಲ ಅಜಯ್‌ ಕುಮಾರ್‌ ಪಾಟೀಲ್‌ ಅವರಿ “ವಯೋಮಿತಿ ನಿಗದಿಪಡಿಸಿ ಶಾಲಾ ಶಿಕ್ಷ ಣ ಇಲಾಖೆ ಮಾರ್ಚ್‌ 28ರಂದು ಆದೇಶ ಹೊರಡಿಸಲಾಗಿದೆ. ಅರ್ಜಿದಾರರು ಇನ್ನೂ 6 ವರ್ಷ ಪೂರ್ಣಗೊಳಿಸಿಲ್ಲ. ಆದರೆ, 2025-26 ನೇ ಸಾಲಿನ ಪೂರ್ವ ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ. ಸರ್ಕಾರದ ಆದೇಶದಿಂದ ಸುಮಾರು ಐದು ಲಕ್ಷ  ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಆ ವಿದ್ಯಾರ್ಥಿಗಳು ಮತ್ತೆ ಯುಕೆಜಿ ಅಧ್ಯಯನ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ವಯೋಮಿತಿ ಸಡಿಲಿಸಿ ಶಾಲಾ ದಾಖಲಾತಿಗೆ ಅವಕಾಶ ಕಲ್ಪಿಸಬೇಕು” ಎಂದು ವಿವರಿಸಿದರು.

ಅದಕ್ಕೆ ಉತ್ತರಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಸ್‌ ಇಸ್ಮಾಯಿಲ್‌ ಜಬೀವುಲ್ಲಾ ಅವರು “ಸೂಕ್ತ ಸಮಯ ನೀಡಿದಲ್ಲಿ ಅರ್ಜಿದಾರರು ಸಲ್ಲಿಸಿರುವ ವಯೋಮಿತಿ ಸಡಿಲಿಕೆ ಮನವಿಯನ್ನು ಪರಿಗಣಿಸಿ ಅಗತ್ಯ ಆದೇಶ ಹೊರಡಿಸಲಾಗುವುದು” ಎಂದು ತಿಳಿಸಿದರು.

ಪೋಷಕರು ತಮ್ಮ ಮಕ್ಕಳು 2026-27ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಮುಂದುವರಿಯುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಿಸಿದ್ದರು. ಪ್ರೀ-ಸ್ಕೂಲ್‌ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಒಂದನೇ ತರಗತಿಗೆ ಸಿದ್ಧರಾಗಿರುವ ಅನೇಕ ಮಕ್ಕಳು ಈಗ ಒಂದು ಸಂಪೂರ್ಣ ಶೈಕ್ಷಣಿಕ ವರ್ಷ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ನೀಡಿದ ಮಾದರಿಯಲ್ಲಿಯೇ 2026-27ನೇ ಶೈಕ್ಷಣಿಕ ವರ್ಷದ ಪ್ರಥಮ ತರಗತಿ ಪ್ರವೇಶಕ್ಕಾಗಿ ಕನಿಷ್ಠ ವಯೋಮಿತಿಯಲ್ಲಿ‌ ಒಮ್ಮೆ ಸಡಿಲಿಕೆ ನೀಡಿ 5 ವರ್ಷ 5 ತಿಂಗಳು ವಯಸ್ಸಿನ ಮಕ್ಕಳಿಗೂ ಪ್ರವೇಶ ಅವಕಾಶ ಕಲ್ಪಿಸಬೇಕು ಎಂದು ಅರ್ಜಿದಾರರ ಮನವಿಯಾಗಿದೆ.