<div class="paragraphs"><p>MLA S R Vishwanath and Karnataka HC</p></div>

MLA S R Vishwanath and Karnataka HC

 
ಸುದ್ದಿಗಳು

ಬಿಡಿಎ ಅಧ್ಯಕ್ಷ ಶಾಸಕ ವಿಶ್ವನಾಥ್‌ಗೆ ಹ್ಯಾಂಡ್‌ ಸಮನ್ಸ್‌ ನೀಡಲು ಹೈಕೋರ್ಟ್‌ ನಿರ್ದೇಶನ

Bar & Bench

ಆಡಳಿತರೂಢ ಬಿಜೆಪಿ ಪಕ್ಷದ ಯಲಹಂಕ ಶಾಸಕ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಎಸ್‌ ಆರ್‌ ವಿಶ್ವನಾಥ್‌ ಅವರಿಗೆ ಹ್ಯಾಂಡ್‌ ಸಮನ್ಸ್‌ ಜಾರಿ ಮಾಡಲು ಮಂಗಳವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ. ಹಿಂದೆ ಜಾರಿ ಮಾಡಿದ್ದ ನೋಟಿಸ್‌ ತಲುಪದ ಹಿನ್ನೆಲೆಯಲ್ಲಿ ಹ್ಯಾಂಡ್‌ ಸಮನ್ಸ್‌ ನೀಡಲು ನ್ಯಾಯಾಲಯ ಆದೇಶ ಮಾಡಿದೆ.

ವಿಶ್ವನಾಥ್‌ ಅವರನ್ನು ಬಿಡಿಎ ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ವಕೀಲ ಎ ಎಸ್‌ ಹರೀಶ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಪ್ರಿನ್ಸ್‌ ಐಸಾಕ್‌ ಅವರು “ಶಾಸಕ ವಿಶ್ವನಾಥ್‌ ಅವರು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ನೋಟಿಸ್‌ ಸ್ವೀಕಾರ ಮಾಡಿಲ್ಲ. ಹೀಗಾಗಿ, ನೋಟಿಸ್‌ ವಾಪಸ್‌ ಬಂದಿದೆ. ಹ್ಯಾಂಡ್ ಸಮನ್ಸ್‌ ಜಾರಿ ಮಾಡಬೇಕು” ಎಂದು ನ್ಯಾಯಾಲಯವನ್ನು ಕೋರಿದರು. ಮನವಿಯನ್ನು ಪರಿಗಣಿಸಿದ ಪೀಠವು ಪ್ರತಿವಾದಿ ವಿಶ್ವನಾಥ್‌ ಅವರಿಗೆ ಹ್ಯಾಂಡ್‌ ಸಮನ್ಸ್‌ ಜಾರಿ ಮಾಡಲು ಆದೇಶಿಸಿ, ವಿಚಾರಣೆಯನ್ನು ಮುಂದೂಡಿತು.

ಬಿಡಿಎಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯ ವಿಚಾರದಲ್ಲಿ ಪಾರದರ್ಶಕತೆ ಇಲ್ಲವಾಗಿದೆ. ರಾಜ್ಯ ಸರ್ಕಾರವು ತನಗೆ ಬೇಕಾದವರನ್ನು ಅಧ್ಯಕ್ಷ ಮತ್ತು ಸದಸ್ಯರನ್ನಾಗಿ ನೇಮಿಸುತ್ತಿದೆ. ನೇಮಕಾತಿಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮ ಮತ್ತು ಮಾರ್ಗಸೂಚಿ ಇಲ್ಲದೇ ಇರುವುದರಿಂದ ಹೀಗಾಗುತ್ತಿದೆ. ಶಾಸಕರಾಗಿರುವ ವಿಶ್ವನಾಥ್‌ ಅವರು ಬಿಡಿಎ ಅಧ್ಯಕ್ಷರಾಗಿರುವುದು ಕಾನೂನುಬಾಹಿರ ಕ್ರಮವಾಗಿದೆ. ಒಬ್ಬರೇ ವ್ಯಕ್ತಿ ಎರಡು ಹುದ್ದೆಗಳನ್ನು ನಿರ್ವಹಿಸುವಂತಿಲ್ಲ. ಹೀಗಾಗಿ, ರಾಜ್ಯ ಸರ್ಕಾರವು ಕಳೆದ ವರ್ಷದ ನವೆಂಬರ್‌ 24ರಂದು ವಿಶ್ವನಾಥ್‌ ಅವರನ್ನು ಬಿಡಿಎ ಅಧ್ಯಕ್ಷರನ್ನಾಗಿ ನೇಮಿಸಿ ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.