Satish Reddy 
ಸುದ್ದಿಗಳು

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಯ್ಕೆ ಪ್ರಶ್ನಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಚುನಾವಣಾ ಅರ್ಜಿ ಸಲ್ಲಿಸುವಾಗಲೇ ₹2,000 ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯ. ಮರುದಿನ ಪಾವತಿಸಿದರೆ ಲೋಪ ಸರಿಪಡಿಸಿದಂತಾಗುವುದಿಲ್ಲ ಎಂದಿರುವ ನ್ಯಾಯಾಲಯ.

Bar & Bench

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿ ಶಾಸಕ ಎಂ ಸತೀಶ್ ರೆಡ್ಡಿ ಅವರ ಚುನಾವಣೆಯನ್ನು ಪ್ರಶ್ನಿಸಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ ಗೌಡ ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.

ಚುನಾವಣಾ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಪಾವತಿಸಬೇಕಿದ್ದ ₹2,000 ಭದ್ರತಾ ಠೇವಣಿಯನ್ನು ಮರುದಿನ ಪಾವತಿಸಿರುವುದು ಕಾನೂನುಬದ್ಧ ಲೋಪವಾಗಿದ್ದು, ಅದನ್ನು ನಂತರ ಸರಿಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ರವಿ ಹೊಸಮನಿ ಅವರು ನವೆಂಬರ್ 20ರಂದು ಪ್ರಕಟಿಸಿದ ತೀರ್ಪಿನಲ್ಲಿ ಹೇಳಿದ್ದಾರೆ.

Justice Ravi Hosamani

2023ರ ಮೇ 13ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಫಲಿತಾಂಶ ಪ್ರಕಟವಾದ 45 ದಿನಗಳ ಕಾಲಮಿತಿಯ ಕೊನೆಯ ದಿನವಾದ ಜೂನ್ 27ರಂದು ಉಮಾಪತಿ ಚುನಾವಣಾ ಅರ್ಜಿ ಸಲ್ಲಿಸಿದ್ದರು. ಆದರೆ, ಜನಪ್ರತಿನಿಧಿ ಕಾಯಿದೆ ಪ್ರಕಾರ ಕಡ್ಡಾಯವಾಗಿದ್ದ ₹2,000 ಭದ್ರತಾ ಠೇವಣಿಯನ್ನು ಜೂನ್ 28ರಂದು ಪಾವತಿಸಿದ್ದರು.

ಈ ಹಿನ್ನೆಲೆಯಲ್ಲಿ, ಅರ್ಜಿ ಸಲ್ಲಿಸುವ ಮೊದಲು ಠೇವಣಿ ಪಾವತಿಸದಿರುವುದು ಮತ್ತು ಮರುದಿನ ಪಾವತಿಸಿರುವುದನ್ನು ಅರ್ಜಿದಾರರು ಒಪ್ಪಿಕೊಂಡಿರುವುದರಿಂದ, ಈ ಅಂಶದ ಆಧಾರದ ಮೇಲೆ ಅರ್ಜಿಯನ್ನು ವಜಾಗೊಳಿಸಬಹುದು ಎಂದು ಹೈಕೋರ್ಟ್ ಹೇಳಿದೆ.

ಜೂನ್ 27ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಹೈಕೋರ್ಟ್‌ಗೆ ಬಂದಿದ್ದ ಅರ್ಜಿದಾರರು, ಸಂಜೆ 3.55ಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಆರ್ಥಿಕ ವಿಭಾಗದಲ್ಲಿ ನಗದು ಸ್ವೀಕರಿಸುವ ಪ್ರಕ್ರಿಯೆ ಸ್ಥಗಿತಗೊಂಡಿದ್ದರಿಂದ ಠೇವಣಿ ಪಾವತಿಸಲು ಸಾಧ್ಯವಾಗಿರಲಿಲ್ಲ ಎಂದು ಉಮಾಪತಿ ಪರ ವಕೀಲರು ವಾದಿಸಿದ್ದರು.

ಅರ್ಜಿಯಲ್ಲಿ ಕಂಡುಬರುವ ಲೋಪಗಳನ್ನು ನಂತರ ಸರಿಪಡಿಸಲು ಚುನಾವಣಾ ಅರ್ಜಿ ಕಾರ್ಯವಿಧಾನ ನಿಯಮಗಳಲ್ಲಿ ಅವಕಾಶವಿದೆ ಎಂದೂ ಅವರು ಪ್ರತಿಪಾದಿಸಿದ್ದರು.

ಆದರೆ, ಠೇವಣಿ ಪಾವತಿಸಲು ಸಾಧ್ಯವಾಗದಿರುವುದಕ್ಕೆ ತಮ್ಮ ನಿಯಂತ್ರಣಕ್ಕೆ ಮೀರಿದ ಪರಿಸ್ಥಿತಿ ಕಾರಣವಾಗಿತ್ತು ಎಂಬುದನ್ನು ಅರ್ಜಿದಾರರು ಚುನಾವಣಾ ಅರ್ಜಿಯಲ್ಲಿ ಉಲ್ಲೇಖಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ. ಅಲ್ಲದೆ, ಕಚೇರಿ ಸಮಯದ ನಂತರ ಠೇವಣಿ ಪಾವತಿಸಲು ಅನುಮತಿ ಕೋರಿ ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸಿರುವ ಬಗ್ಗೆಯೂ ಅರ್ಜಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಹೇಳಿದೆ.

“ಒಂದು ಕೆಲಸ ಮಾಡಲು ಹಲವು ಮಾರ್ಗಗಳಿರುವಾಗ, ಅಸಾಧ್ಯತೆಯ ವಾದ ಮಾಡುವವರು ಆ ಎಲ್ಲ ಮಾರ್ಗಗಳನ್ನು ಪ್ರಯತ್ನಿಸಿರುವುದನ್ನು ಮತ್ತು ಪ್ರತಿಯೊಂದು ಮಾರ್ಗದಲ್ಲೂ ಹೇಗೆ ಅಡ್ಡಿಯಾಯಿತು ಎಂಬುದನ್ನು ಸಾಬೀತುಪಡಿಸಬೇಕು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 117ರ ಅಡಿಯಲ್ಲಿ ಚುನಾವಣಾ ಅರ್ಜಿಯೊಂದಿಗೆ ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯ. ಅದನ್ನು ಮನ್ನಾ ಮಾಡಲು ಅಥವಾ ತಡವಾಗಿ ಪಾವತಿಸುವುದನ್ನು ಕ್ಷಮಿಸಲು ಹೈಕೋರ್ಟ್‌ಗೆ ಅಧಿಕಾರವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ಉಮಾಪತಿ ಅವರು ಚುನಾವಣಾ ಅರ್ಜಿಯಲ್ಲಿ ಸತೀಶ್ ರೆಡ್ಡಿ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಹಾಗೂ ತಮ್ಮನ್ನು ಚುನಾಯಿತ ಅಭ್ಯರ್ಥಿ ಎಂದು ಘೋಷಿಸುವಂತೆ ಕೋರಿದ್ದರು.

Dama Seshadri Naidu, Senior Advocate

ಉಮಾಪತಿ ಪರ ಹಿರಿಯ ವಕೀಲ ದಾಮ ಶೇಷಾದ್ರಿ ನಾಯ್ಡು, ವಕೀಲರಾದ ಸಿ ಶ್ರೀನಿವಾಸ, ಬರಣಿ ಭಾರತಿ ಬಿ ಮತ್ತು ಸುನಿಲ್ ಕುಮಾರ್ ಪಟೇಲ್ ವಾದಿಸಿದ್ದರು.

Sajan Poovayya, Senior Advocate

ಶಾಸಕ ಎಂ ಸತೀಶ್ ರೆಡ್ಡಿ ಪರ ಹಿರಿಯ ವಕೀಲ ಸಜನ್ ಪೂವಯ್ಯ, ವಕೀಲರಾದ ಮನು ಪ್ರಭಾಕರ್ ಕುಲಕರ್ಣಿ, ಸಂಜಂತಿ ಸಜನ್ ಪೂವಯ್ಯ ಮತ್ತು ಸುಮುಖ್ ಬಿ ರಾಮ್ ವಾದಿಸಿದ್ದರು.

M S Shyamsundar

ಪ್ರತಿವಾದಿಗಳ ಪರ ಹಿರಿಯ ವಕೀಲ ಎಂ ಎಸ್ ಶ್ಯಾಮ್ ಸುಂದರ್ ಹಾಗೂ ವಕೀಲರಾದ ಜಿ ಆರ್ ವೆಂಕಟೇಶ್, ಎ ಪಿ ಪುಲಕೇಶಿ, ಪ್ರಸನ್ನ ಬಿ ಆರ್ ಮತ್ತು ಎಚ್ ಲೋಹಿತ್ ಕುಮಾರ್ ವಾದಿಸಿದ್ದರು.