Minister Shivanand Patil and Basanagouda Patil Yatnal and Karnataka HC 
ಸುದ್ದಿಗಳು

ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸಲು ಹೈಕೋರ್ಟ್ ನಕಾರ

ದೂರುದಾರರ ಗೌರವಕ್ಕೆ ಧಕ್ಕೆಯಾಗಿದೆ ಎಂದು ಮೂರನೇ ವ್ಯಕ್ತಿ ಸಾಕ್ಷ್ಯ ಹೇಳಲೇಬೇಕು ಎಂಬುದು ಕಡ್ಡಾಯವಲ್ಲ ಎಂದಿರುವ ನ್ಯಾಯಾಲಯ.

Bar & Bench

ಕಾಂಗ್ರೆಸ್‌ ಶಾಸಕ ಹಾಗೂ ಮಾಜಿ ಸಚಿವ ಶಿವಾನಂದ ಎಸ್. ಪಾಟೀಲ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ಗುರುವಾರ ನಿರಾಕರಿಸಿದೆ.

ಮಾನನಷ್ಟ ಮೊಕದ್ದಮೆ ಪ್ರಕ್ರಿಯೆ ರದ್ದು ಕೋರಿ ಬಸನಗೌಡ ಪಾಟೀಲ ಯತ್ನಾಳ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

Justice Anant Ramanath Hegde

ಮಾನಹಾನಿ ಪ್ರಕರಣದಲ್ಲಿ ನ್ಯಾಯಾಲಯ ಸಂಜ್ಞೆ ತೆಗೆದುಕೊಳ್ಳುವ ಹಂತದಲ್ಲಿ ದೂರುದಾರರ ಗೌರವಕ್ಕೆ ಧಕ್ಕೆಯಾಗಿದೆ ಎಂದು ಮೂರನೇ ವ್ಯಕ್ತಿಯೊಬ್ಬರು ನ್ಯಾಯಾಲಯದ ಮುಂದೆ ಸಾಕ್ಷ್ಯ ಹೇಳಲೇಬೇಕು ಎಂಬ ನಿಯಮ ಕಡ್ಡಾಯವಲ್ಲ. ಆರೋಪಿಯ ಹೇಳಿಕೆಯು ಮೇಲ್ನೋಟಕ್ಕೆ ದೂರುದಾರರ ನೈತಿಕತೆ, ಚಾರಿತ್ರ್ಯ ಮತ್ತು ಗೌರವಕ್ಕೆ ಕುಂದು ತರುವಂತಿದ್ದರೆ ದೂರುದಾರರು ಮತ್ತು ಇತರ ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆಗೆ ಮುಂದಾಗಬಹುದು ಎಂದು ಹೈಕೋರ್ಟ್ ಹೇಳಿದೆ.

ಅರ್ಜಿದಾರರ ಹೇಳಿಕೆಗಳು ಮೇಲ್ನೋಟಕ್ಕೆ ದೂರುದಾರ ಶಿವಾನಂದ ಪಾಟೀಲ ಅವರ ಚಾರಿತ್ರ್ಯ ಹಾಗೂ ವರ್ಚಸ್ಸಿಗೆ ಧಕ್ಕೆ ತರುವಂತಿವೆ. ವಿಚಾರಣಾ ನ್ಯಾಯಾಲಯವು ಇಬ್ಬರು ಸಾಕ್ಷಿಗಳ ಹೇಳಿಕೆಗಳನ್ನು ಆಧಾರದಲ್ಲಿ ಸಂಜ್ಞೆ ತೆಗೆದುಕೊಂಡಿದ್ದು, ಇದು ದೋಷಪೂರಿತ ಕ್ರಮ ಎನ್ನಲಾಗದು. ಈ ಹೇಳಿಕೆಗಳಿಂದ ಸಾರ್ವಜನಿಕರ ದೃಷ್ಟಿಯಲ್ಲಿ ನಿಜವಾಗಿಯೂ ಗೌರವ ಕಡಿಮೆಯಾಗಿದೆಯೇ ಅಥವಾ ಇಲ್ಲವೇ ಎಂಬುದು ವಿಚಾರಣಾ ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಿದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಬಸನಗೌಡ ಪಾಟೀಲ ಯತ್ನಾಳ್‌ ಅವರು ಹಲವು ಟಿವಿ ಸಂದರ್ಶನಗಳಲ್ಲಿ ನನ್ನ ವಿರುದ್ಧ ಸುಳ್ಳು, ಆಧಾರರಹಿತ, ಅಹೇಳನಕಾರಿ ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತ ಬಂದಿದ್ದಾರೆ. ಆ ಮೂಲಕ ನನ್ನ ಗೌರವ, ಘನತೆ ಮತ್ತು ಖ್ಯಾತಿಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ, ಶಿವಾನಂದ ಪಾಟೀಲ್ ಅವರು 2025ರ ಜುಲೈ 18ರಂದು ಬೆಂಗಳೂರಿನ 42ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 356(2)ರ ಅಡಿಯಲ್ಲಿ ಪ್ರಕರಣದ ಸಂಜ್ಞೆ ತೆಗೆದುಕೊಂಡಿದ್ದ ನ್ಯಾಯಾಲಯ, 2026ರ ಜನವರಿ 24ರಂದು ಯತ್ನಾಳ್ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಯತ್ನಾಳ್ ಸತ್ರ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಯನ್ನು ಸತ್ರ ನ್ಯಾಯಾಲಯ 2026ರ ಆಗಸ್ಟ್ 18ರಂದು ವಜಾಗೊಳಿಸಿ, ಮ್ಯಾಜಿಸ್ಟ್ರೇಟ್ ಆದೇಶವನ್ನು ಎತ್ತಿಹಿಡಿದಿತ್ತು. ಇದರಿಂದ, ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದರು.

Basanagouda Patil Yatnal v. Shivananda Patil.pdf
Preview