ಸುದ್ದಿಗಳು

ಹಿಂದೂ ದೇವತೆಗಳ ಉಲ್ಲೇಖ ಒಳಗೊಂಡು ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯ: ಪಿಐಎಲ್‌ ವಜಾಗೊಳಿಸಿದ ಹೈಕೋರ್ಟ್‌

ಕೇಂದ್ರ ಗೃಹ ಇಲಾಖೆಯ ಆದೇಶದಲ್ಲಿ ವಂದೇ ಮಾತರಂ ಗೀತೆ ಹಾಡಬಹುದು ಎಂಬ ಪದ ಬಳಕೆ ಮಾಡಲಾಗಿದ್ದು, ಅದು ಕಡ್ಡಾಯವಲ್ಲ ಎಂಬುದನ್ನು ಸೂಚಿಸುತ್ತದೆ ಎಂದ ಎಎಸ್‌ಜಿ ಅರವಿಂದ್‌ ಕಾಮತ್.‌

Bar & Bench

ಶಾಲೆಗಳಲ್ಲಿ ಪ್ರತಿದಿನ 'ವಂದೇ ಮಾತರಂ' ಗೀತೆಯನ್ನು ಎಲ್ಲ ಆರು ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿಗಳನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್ ಗುರುವಾರ ಅದನ್ನು ವಜಾಗೊಳಿಸಿದೆ.

ಬೆಂಗಳೂರಿನ ವಕೀಲ ಸೋಮಶೇಖರ್ ರಾಜವಂಶಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Chief Justice Vibhu Bhakhru & Justice CM Poonacha

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ಕೇಂದ್ರ ಗೃಹ ಇಲಾಖೆಯ ಆದೇಶದಲ್ಲಿ ವಂದೇ ಮಾತರಂ ಗೀತೆ ಹಾಡಬಹುದು ಎಂಬ ಪದ ಬಳಕೆ ಮಾಡಲಾಗಿದ್ದು, ಅದು ಕಡ್ಡಾಯವಲ್ಲ ಎಂಬುದನ್ನು ಸೂಚಿಸುತ್ತದೆ. ಅಲ್ಲದೇ, ಈಚೆಗೆ ಸುಪ್ರೀಂ ಕೋರ್ಟ್‌ ಇಂಥದ್ದೇ ಮನವಿ ಒಳಗೊಂಡಿದ್ದ ಪಿಐಎಲ್‌ ವಜಾಗೊಳಿಸಿದೆ” ಎಂದರು.

ಇದನ್ನು ಆಲಿಸಿದ ಪೀಠವು “ವಂದೇ ಮಾತರಂ ಗೀತೆಯನ್ನು (national song) ಯಾವುದೇ ಶಾಸನಬದ್ಧ ಚೌಕಟ್ಟಿನಲ್ಲಿ ಸೇರ್ಪಡೆ ಮಾಡಲಾಗಿಲ್ಲ. ಕೇಂದ್ರ ಸರ್ಕಾರದ ಆದೇಶದಲ್ಲಿ ಸಾಧ್ಯತೆ ಎಂಬ ಪದ ಬಳಕೆ ಮಾಡಿದ್ದು, ಅದು ಕಡ್ಡಾಯವಲ್ಲ. ರಾಷ್ಟ್ರಗೀತೆಯಂತೆ “ವಂದೇ ಮಾತರಂ ಗೀತೆಯ ಗಾಯನ ಕಡ್ಡಾಯವಲ್ಲ. ಇಂಥದ್ದೇ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ” ಎಂದು ಅರ್ಜಿ ವಜಾಗೊಳಿಸಿತು.

ವಂದೇ ಮಾತರಂ ಗೀತೆಯನ್ನು ಶಾಲೆಗಳ ಪ್ರಾರಂಭಕ್ಕೂ ಮುನ್ನ ಕಡ್ಡಾಯವಾಗಿ ಹಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆಯ ಅಧಿಕೃತ ಜಾಲಾತಾಣದಲ್ಲಿ ಭಾರತದ ರಾಷ್ಟ್ರಗೀತೆಗೆ ಸಂಬಂಧಿಸಿದ ಆದೇಶಗಳು ಎಂಬ ಆದೇಶ ಪ್ರಕಟಿಸಲಾಗಿದೆ. ಈ ಆದೇಶದಂತೆ ವಂದೇ ಮಾತರಂ ಗೀತೆಯಲ್ಲಿರುವ ಆರು ಚರಣಗಳುಳ್ಳ ಅಧಿಕೃತ ಆವೃತ್ತಿಯನ್ನು ಎಲ್ಲ ಶಾಲೆಗಳು ಪ್ರಾರಂಭಕ್ಕೂ ಮುನ್ನ ಪ್ರತಿ ದಿನ ಸಾಮೂಹಿಕವಾಗಿ ಹಾಡಬೇಕು ಎಂದು ಸೂಚಿಸಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಸಂವಿಧಾನದ ರಚನಾ ಸಭೆಯಲ್ಲಿ ವಂದೇ ಮಾತರಂ ಗೀತೆಯಲ್ಲಿನ ಒಟ್ಟು ಆರು ಚರಣಗಳಲ್ಲಿ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಗೃಹ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಎಲ್ಲ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ತಿಳಿಸಲಾಗಿದೆ. ಆದರೆ, ವಂದೇ ಮಾತರಂ ಗೀತೆಯ 3 ರಿಂದ 6ರ ವರೆಗಿನ ಚರಣಗಳಲ್ಲಿ ಹಿಂದೂ ದೇವತೆಗಳಾದ ದುರ್ಗಾ, ಕಮಲಾ (ಲಕ್ಷ್ಮಿ) ಮತ್ತು ವಾಣಿ (ಸರಸ್ವತಿ)ಯನ್ನು ಸೇರ್ಪಡೆ ಮಾಡಲಾಗಿದೆ. ಅಲ್ಲದೆ, ಈ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಗೀತೆಯ ಶ್ಲೋಕಗಳನ್ನು ಪ್ರತಿದಿನ ಹಾಡುವುದಕ್ಕೆ ನಿರ್ದೇಶನ ನೀಡಲಾಗಿದೆ. ಈ ಅಂಶವು ಸಂವಿಧಾನದ ವಿಧಿ 25 (ಆತ್ಮಸಾಕ್ಷಿಯ ಹಕ್ಕು), 28 (ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆ ನಿಷೇಧ) ಮತ್ತು 14ಕ್ಕೆ (ಸಮಾನತೆ) ತದ್ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.

ವಂದೇ ಮಾತರಂ ಗೀತೆಯ 3ರಿಂದ 6ನೇ ಚರಣಗಳನ್ನು ಅಧಿಕೃತ ಆವೃತ್ತಿಯ ಭಾಗವನ್ನಾಗಿ ಸೂಚಿಸಿ, ಕಡ್ಡಾಯವಾಗಿ ಹಾಡುವುದಕ್ಕೆ ಸಂಬಂಧಿಸಿದ ಶಿಷ್ಟಾಚಾರ ಆದೇಶವನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಶಾಲೆಗಳಲ್ಲಿ ದಿನ ನಿತ್ಯ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿ ಹೊರಡಿಸಲಾಗಿರುವ ಶಿಷ್ಟಾಚಾರ ಮಾರ್ಗಸೂಚಿಗಳ ಆದೇಶವನ್ನು ಪರಿಷ್ಕರಣೆ ಮಾಡುವಂತೆ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನಿರ್ದೇಶಿಸಬೇಕು. ವಂದೇ ಮಾತರಂ ಗೀತೆಯಲ್ಲಿ ಯಾವುದೇ ಧಾರ್ಮಿಕ ಅಂಶಗಳನ್ನು ಒಳಗೊಳ್ಳದ ಮೊದಲ ಎರಡು ಚರಣಗಳಿಗೆ ಸೀಮಿತಗೊಳಿಸಲು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕೇಂದ್ರೀಯ ವಿದ್ಯಾಲಯಗಳ ಸಂಘಟನೆ ಶಾಲೆಗಳಲ್ಲಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಬೇಕು ಎಂದು ಕೋರಲಾಗಿತ್ತು.

ಗೃಹ ಸಚಿವಾಲಯದ ಆದೇಶ ಅಲ್ಪ ಸಂಖ್ಯಾತರ ನಂಬಿಕೆ ಮತ್ತು ದೇವರ ಬಗ್ಗೆ ನಂಬಿಕೆಯಿಲ್ಲದ ಕುಟುಂಬಗಳ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಅಲ್ಪ ಸಂಖ್ಯಾತರ ಆಯೋಗ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೋರಲಾಗಿತ್ತು.