Karnataka HC 
ಸುದ್ದಿಗಳು

ಸಾಂಕ್ರಾಮಿಕ ರೋಗದ ವೇಳೆ ಪರೀಕ್ಷೆ ನಡೆಸದೇ ಇರುವ ವಿವೇಚನಾಧಿಕಾರ ರಾಜ್ಯ ಸರ್ಕಾರಕ್ಕೆ ಇದೆ: ಕರ್ನಾಟಕ ಹೈಕೋರ್ಟ್

ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳು ಪಡೆದ ಆಂತರಿಕ ಮೌಲ್ಯಮಾಪನದ ಅಂಕ ಮತ್ತು ಹಿಂದಿನ ವರ್ಷದ ಅವರ ಸಾಧನೆ ಪರಿಗಣಿಸಿ ಮುಂದಿನ ಸೆಮಿಸ್ಟರ್ ಗೆ ಉತ್ತೀರ್ಣಗೊಳಿಸಬೇಕು ಎಂದು ಜುಲೈ 10ರಂದು ಹೊರಡಿಸಲಾಗಿದ್ದ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿತ್ತು.

Bar & Bench

ಕೊರೊನಾ ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನ ಮತ್ತು ಅವರ ಹಿಂದಿನ ವರ್ಷದ ಸಾಧನೆ ಪರಿಗಣಿಸಿ ಉತ್ತೀರ್ಣಗೊಳಿಸಬೇಕು ಎಂದು ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ.

ಇದೇ ವೇಳೆ, ವಿಶ್ವವಿದ್ಯಾಲಯಗಳಲ್ಲಿ ಮಧ್ಯಂತರ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವ ಕುರಿತಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನೀಡಿರುವ ಮಾರ್ಗಸೂಚಿಗಳು ಸ್ವಭಾವತಃ ಸಲಹಾತ್ಮಕವಾಗಿವೆ ಮತ್ತು ಈ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುವ ವಿವೇಚನಾಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಬಿ.ವಿ.ನಗರತ್ನ ಮತ್ತು ರವಿ ಹೊಸಮನಿ ಅವರಿದ್ದ ವಿಭಾಗೀಯ ಪೀಠ ನೀಡಿದ ಆದೇಶದ ವಿವರ ಹೀಗಿದೆ:

"ಯುಜಿಸಿ ಸಲಹಾ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅಂತಿಮವಾಗಿ ಕೋವಿಡ್ 19 ಸಾಂಕ್ರಾಮಿಕ ರೋಗ ಪ್ರಸರಣ ಮತ್ತು ವಿದ್ಯಾರ್ಥಿಗಳು, ಸಂಬಂಧಪಟ್ಟವರು ಹಾಗೂ ರಾಜ್ಯದ ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಭೌತಿಕವಾಗಿ ಪರೀಕ್ಷೆಗೆ ಹಾಜರಾಗಬೇಕೆ ಅಥವಾ ಇನ್ನಾವುದಾದರೂ ವಿಧದಲ್ಲಿ ಉತ್ತೀರ್ಣಗೊಳಿಸಬಹುದೇ ಎಂಬ ವಿಚಾರ ಕುರಿತಂತೆ ನಿರ್ಧಾರ ಕೈಗೊಳ್ಳುವ ವಿವೇಚನಾಧಿಕಾರ ಸರ್ಕಾರಕ್ಕೆ ಇದೆ. ವಿಶ್ವವಿದ್ಯಾಲಯ ಕಾಯ್ದೆ, 2000 ಇದರ ವ್ಯಾಪ್ತಿಗೆ ಒಳಪಡುವ ವಿವಿಗಳಿಗೆ ಖುದ್ದಾಗಿ ಮಾರ್ಗದರ್ಶನ ಮಾಡಲು ಅಥವಾ ಅವುಗಳಿಗೆ ಸಲಹೆ ನೀಡುವ ಅಧಿಕಾರ ಮತ್ತು ವಿವೇಚನೆ ಸದಾ ರಾಜ್ಯ ಸರ್ಕಾರಕ್ಕೆ ಇರುತ್ತದೆ”
ಕರ್ನಾಟಕ ಹೈಕೋರ್ಟ್

ಎಲ್ಲಾ ವಿವಿಗಳ ನಡುವೆ ಏಕರೂಪತೆ ಕಾಪಾಡಿಕೊಳ್ಳಲು ರಾಜ್ಯ ಸರ್ಕಾರ ಇಂತಹ ನೀತಿ ನಿರ್ಧಾರ ತೆಗೆದುಕೊಂಡಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು ಇದರಿಂದಾಗಿ ವಿಭಿನ್ನ ವಿಧಾನಗಳನ್ನು ಅಳವಡಿಸಿಕೊಂಡ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಯಾವುದೇ ತಾರತಮ್ಯ/ ತೊಂದರೆ ಅನುಭವಿಸುವುದಿಲ್ಲ ಎಂದಿದೆ.

ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳು ಪಡೆದ ಆಂತರಿಕ ಮೌಲ್ಯಮಾಪನ ಅಂಕಗಳು ಮತ್ತು ಹಿಂದಿನ ವರ್ಷದ ಅವರ ಸಾಧನೆ ಪರಿಗಣಿಸಿ ಶೇ 50ರಷ್ಟು ಮೌಲ್ಯ ನೀಡಿ ಮುಂದಿನ ಸೆಮಿಸ್ಟರ್ ಗೆ ಉತ್ತೀರ್ಣಗೊಳಿಸಬೇಕು ಎಂದು ಜುಲೈ 10ರಂದು ಹೊರಡಿಸಲಾಗಿದ್ದ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿತ್ತು.

ಹಿಂದಿನ ಸೆಮಿಸ್ಟರ್ ಅಂಕಗಳು ಲಭ್ಯವಿಲ್ಲದಿದ್ದರೆ, ಅದರಲ್ಲಿಯೂ ವಿಶೇಷವಾಗಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳ ಆಧಾರದ ಮೇಲೆ 100% ಮೌಲ್ಯಮಾಪನ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.

ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಎಚ್ ಸುನೀಲ್ ಕುಮಾರ್ ಅವರು ಸರ್ಕಾರದ ಅಧಿಸೂಚನೆ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ಸರ್ಕಾರದ ಕ್ರಮ ಅವೈಜ್ಞಾನಿಕ ಮತ್ತು ತರ್ಕಬದ್ಧವಲ್ಲದ್ದು. ಇದರಿಂದ ಮೆರಿಟ್ ಪಡೆದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತದೆ ಎಂದು ವಾದಿಸಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಫ್ ಲೈನ್, ಆನ್ ಲೈನ್ ಅಥವಾ ಎರಡೂ ವಿಧಾನಗಳನ್ನು ಬಳಸಿ ಪರೀಕ್ಷೆ ನಡೆಸಲಾಗುತ್ತದೆ ಆದರೆ ಮಧ್ಯಂತರ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದು ಅವರು ಆಕ್ಷೇಪಿಸಿದರು. ಕೋವಿಡ್ 19 ದೃಷ್ಟಿಯಲ್ಲಿಟ್ಟುಕೊಂಡು ಯುಜಿಸಿ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೂಡ ಕೋರ್ಟಿಗೆ ಮನವರಿಕೆ ಮಾಡಿಕೊಡಲಾಯಿತು. ಪರೀಕ್ಷೆ ನಡೆಸುವ ವಿವೇಚನಾಧಿಕಾರವನ್ನು ಸರ್ಕಾರದ ಬದಲು ವಿಶ್ವವಿದ್ಯಾಲಯಗಳಿಗೆ ನೀಡಬೇಕಿತ್ತು ಎಂಬುದು ಅರ್ಜಿದಾರರ ವಾದವಾಗಿತ್ತು.

ಮತ್ತೊಂದೆಡೆ, ರಾಜ್ಯ ಸರ್ಕಾರದ ಪರ ವಕೀಲ ವೈ.ಎಚ್. ವಿಜಯ್ ಕುಮಾರ್ ಅವರು ರಾಜ್ಯದಲ್ಲಿ ಕೋವಿಡ್- 19 ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪರೀಕ್ಷೆಗಳನ್ನು ಬರೆಯಲು ಭೌತಿಕವಾಗಿ ಹಾಜರಾಗುವ ಮೂಲಕ ವಿದ್ಯಾರ್ಥಿಗಳು ಕೋವಿಡ್- 19 ಅಪಾಯ ಎದುರಿಸುವಂತಾಗಬಾರದು ಎಂದು ಅವರು ವಾದಿಸಿದರು.

ವಾದಗಳನ್ನು ಆಲಿಸಿದ ನ್ಯಾಯಾಲಯ ವಿದ್ಯಾರ್ಥಿಗಳ ಆರೋಗ್ಯ, ಸುರಕ್ಷತೆ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಜುಲೈ 10 ರ ಆದೇಶ ಹೊರಡಿಸಿದೆ ಎಂಬುದನ್ನು ಗಮನಿಸಿ ಇದನ್ನು ಪ್ರಶ್ನಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.

ಆದೇಶವನ್ನು ಇಲ್ಲಿ ಓದಿ:

Intermediate_exams___Karnataka_HC.pdf
Preview