ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಮತಗಳ ಮರು ಎಣಿಕೆ ಕೋರಿದ್ದ ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಕ್ಷೇತ್ರದ ಮತದಾರರಾದ ಕೆ ಎಸ್ ಸುರೇಶ್ ಮತ್ತಿತರರು ಮರು ಮತಎಣಿಕೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ಎಸ್ ಹೇಮಲೇಖಾ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ದಿನೇಶ್ ಗುಂಡೂರಾವ್ ಪರ ವಕೀಲ ಬಿಪಿನ್ ಹೆಗ್ಡೆ ಅವರು “ಅರ್ಜಿದಾರರು ಯಾವುದೇ ನಿಖರ ಅಂಕಿ ಅಂಶ ಸಲ್ಲಿಸದೇ ಮರು ಮತ ಎಣಿಕೆಗೆ ಮನವಿ ಮಾಡಿದ್ದಾರೆ. ಆ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಬಾರದು. ಚುನಾವಣಾ ತಕರಾರು ಅರ್ಜಿ ವಜಾಗೊಳಿಸಬೇಕು” ಎಂದು ಕೋರಿದ್ದರು.
2023ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗಾಂಧಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಆಯ್ಕೆಯಾಗಿದ್ದರು. ಅವರ ಪ್ರತಿಸ್ಪರ್ಧಿ ಬಿಜೆಪಿಯ ಸಪ್ತಗಿರಿಗೌಡ 105 ಮತಗಳಿಂದ ಪರಾಭವಗೊಂಡಿದ್ದರು. ಹೀಗಾಗಿ, ಮತ್ತೆ ಮತ ಎಣಿಕೆ ಮಾಡಬೇಕು, ಈಗಾಗಲೇ ಘೋಷಿಸಿರುವ ಫಲಿತಾಂಶವನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯದ ಕದತಟ್ಟಿದ್ದರು.