ಬೆತ್ತಲೆ, ಅಶ್ಲೀಲ ಚಿತ್ರಗಳನ್ನು ಬಿತ್ತರಿಸುವ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಇತ್ಯರ್ಥಪಡಿಸಿದೆ.
ಲೀಗಲ್ ಅಟಾರ್ನೀಸ್ ಮತ್ತು ಬ್ಯಾರಿಸ್ಟರ್ಸ್ ಲಾ ಫರ್ಮ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಉಪ ಸಾಲಿಸಿಟರ್ ಜನರಲ್ ಎಚ್ ಶಾಂತಿಭೂಷಣ್ ಅವರು “ಇದೇ ವಿಚಾರದ ಸಂಬಂಧಿತ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ” ಎಂದು ತಿಳಿಸಿದರು.
ಇದನ್ನು ಆಲಿಸಿದ ನ್ಯಾಯಾಲಯವು “ಈ ಹಂತದಲ್ಲಿ ಹಾಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸುವುದು ಸೂಕ್ತವಲ್ಲ ಎಂದು ನಮಗನ್ನಿಸುತ್ತದೆ. ಹೀಗಾಗಿ, ಯಾವುದೇ ಆದೇಶದ ಅಗತ್ಯವಿಲ್ಲ” ಎಂದು ಅರ್ಜಿ ಇತ್ಯರ್ಥಪಡಿಸಿತು.
ಹದಿನೆಂಟು ವರ್ಷದ ಕೆಳಗಿನವರಿಗೆ ಅಶ್ಲೀಲ ವಿಚಾರಗಳ ವೀಕ್ಷಣೆಗೆ ನಿರ್ಬಂಧಿಸಬೇಕು ಎಂದು ಕೋರಿರುವುದು ಸೇರಿದಂತೆ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇವೆ.