POCSO ACT  
ಸುದ್ದಿಗಳು

ಅಪ್ರಾಪ್ತ ಸಂತ್ರಸ್ತೆಗೆ ₹1 ಲಕ್ಷ ಪರಿಹಾರ ಅತ್ಯಲ್ಪ; ಮೊತ್ತವನ್ನು ₹7 ಲಕ್ಷಕ್ಕೆ ಹೆಚ್ಚಿಸಿದ ಹೈಕೋರ್ಟ್

ಲೈಂಗಿಕ ದೌರ್ಜನ್ಯದಿಂದ ಗರ್ಭಧರಿಸಿ ವೈದ್ಯಕೀಯ ಮಂಡಳಿಯ ಸಲಹೆಯಂತೆ ಗರ್ಭಪಾತ ಮಾಡಿಸಿಕೊಂಡಿದ್ದ 16 ವರ್ಷದ ಬಾಲಕಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಲು ಬೀದರ್ ಡಿಎಲ್‌ಎಸ್‌ಎಗೆ ಶಿಫಾರಸ್ಸು ಮಾಡಿದ ನ್ಯಾಯಾಲಯ.

Bar & Bench

ಲೈಂಗಿಕ ದೌರ್ಜನ್ಯದಿಂದ ಗರ್ಭಧರಿಸಿ, ವೈದ್ಯಕೀಯ ಮಂಡಳಿಯ ಸಲಹೆಯಂತೆ ಗರ್ಭಪಾತ ಮಾಡಿಸಿಕೊಂಡಿದ್ದ ಅಪ್ರಾಪ್ತ ಸಂತ್ರಸ್ತೆಗೆ ₹1 ಲಕ್ಷ ಪರಿಹಾರ ಅತ್ಯಲ್ಪ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠವು ಪರಿಹಾರ ಮೊತ್ತವನ್ನು ₹7 ಲಕ್ಷಕ್ಕೆ ಹೆಚ್ಚಿಸಿದೆ.

ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ತ್ಯಾಗರಾಜ ಎನ್. ಇನವಲ್ಲಿ ಅವರ ಏಕಸದಸ್ಯ ಪೀಠವು, ಹೆಚ್ಚಿಸಿದ ಪರಿಹಾರ ಮೊತ್ತವನ್ನು ಸಂತ್ರಸ್ತೆಗೆ ಪಾವತಿಸಲು ಬೀದರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಡಿಎಲ್‌ಎಸ್‌ಎ) ಶಿಫಾರಸ್ಸು ಮಾಡಿದೆ.

Justice Tyagaraja Inavally

ಸಂತ್ರಸ್ತೆ ಈಗಾಗಲೇ ಪ್ರಾಪ್ತ ವಯಸ್ಕಳಾಗಿರುವುದರಿಂದ ಪರಿಹಾರದ ಮೊತ್ತ ಠೇವಣಿಯಾದ ಬಳಿಕ ಸಂಪೂರ್ಣ ಹಣವನ್ನು ಆಕೆಗೆ ಪಾವತಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

“ಸಂತ್ರಸ್ತೆ ಅನುಭವಿಸಿದ ಆಘಾತವನ್ನು ಪರಿಗಣಿಸಿದರೆ, ಸಂತ್ರಸ್ತರ ಪರಿಹಾರ ಯೋಜನೆಯಡಿ ಶಿಫಾರಸ್ಸು ಮಾಡಿರುವ ₹1 ಲಕ್ಷ ಪರಿಹಾರ ಅತ್ಯಂತ ಕಡಿಮೆಯಾಗಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪರಿಹಾರ ನಿಗದಿಪಡಿಸುವಾಗ ಅಪರಾಧದ ಗಂಭೀರತೆ, ಸಂತ್ರಸ್ತೆಗೆ ಉಂಟಾದ ದೈಹಿಕ ಮತ್ತು ಮಾನಸಿಕ ಹಾನಿಯ ತೀವ್ರತೆ, ವೈದ್ಯಕೀಯ ಚಿಕಿತ್ಸೆ ಹಾಗೂ ಸಮಾಲೋಚನೆಗೆ ತಗಲುವ ವೆಚ್ಚ, ಶಿಕ್ಷಣದ ಅವಕಾಶಗಳ ನಷ್ಟ ಮತ್ತು ಉದ್ಯೋಗಾವಕಾಶಗಳ ಮೇಲಿನ ಪರಿಣಾಮಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ 2018ರ ಮಹಿಳಾ ಲೈಂಗಿಕ ದೌರ್ಜನ್ಯ ಸಂತ್ರಸ್ತರ ಪರಿಹಾರ ಯೋಜನೆಯಡಿ ₹4 ಲಕ್ಷದಿಂದ ₹7 ಲಕ್ಷದವರೆಗೆ ಪರಿಹಾರ ನೀಡಲು ಅವಕಾಶವಿರುವುದನ್ನು ಪೀಠ ಉಲ್ಲೇಖಿಸಿದೆ.

ಸಂತ್ರಸ್ತೆ ದೌರ್ಜನ್ಯಕ್ಕೊಳಗಾದಾಗ ಸುಮಾರು 16 ವರ್ಷ ವಯಸ್ಸಿನ ಅಪ್ರಾಪ್ತೆಯಾಗಿದ್ದಳು. ಆರೋಪಿಯ ಕೃತ್ಯದಿಂದ ಆಕೆ ಗರ್ಭಧರಿಸಿದ್ದು, ಡಿಎನ್‌ಎ ಪರೀಕ್ಷೆಯಲ್ಲಿ ಆರೋಪಿಯೇ ಗರ್ಭದಲ್ಲಿದ್ದ ಭ್ರೂಣದ ಜೈವಿಕ ತಂದೆ ಎಂಬುದು ದೃಢಪಟ್ಟಿತ್ತು. ಬಳಿಕ ವೈದ್ಯಕೀಯ ಮಂಡಳಿಯ ಸಲಹೆಯಂತೆ ಸಂತ್ರಸ್ತೆ ಗರ್ಭಪಾತ ಮಾಡಿಸಿಕೊಂಡಿದ್ದಳು.

ಈ ಎಲ್ಲ ಸಂಗತಿಗಳನ್ನು ಪರಿಗಣಿಸಿದ ನ್ಯಾಯಾಲಯ, ಸಂತ್ರಸ್ತೆಗೆ ಗರಿಷ್ಠ ₹7 ಲಕ್ಷ ಪರಿಹಾರ ನೀಡುವುದು ನ್ಯಾಯಸಮ್ಮತ ಮತ್ತು ಸಮಂಜಸ ಎಂದು ತೀರ್ಮಾನಿಸಿದೆ.

ಪ್ರಕರಣದ ಹಿನ್ನೆಲೆ: ಪ್ರಕರಣದ ವಿಚಾರಣೆ ನಡೆಸಿದ್ದ ಬೀದರ್‌ನ ಬಸವಕಲ್ಯಾಣದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯವು 2023ರ ಡಿಸೆಂಬರ್ 17ರಂದು ಆರೋಪಿಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(i)(n) ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 4 ಹಾಗೂ 6ರ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿತ್ತು.

ಆರೋಪಿಗೆ ಭಾರತೀಯ ದಂಡ ಸಂಹಿತೆಯಡಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ಪೋಕ್ಸೊ ಕಾಯಿದೆಯ ಸೆಕ್ಷನ್ 4ರಡಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಸೆಕ್ಷನ್ 6ರಡಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಈ ಎಲ್ಲ ಶಿಕ್ಷೆಗಳನ್ನು ಏಕಕಾಲದಲ್ಲಿ ಜಾರಿಗೊಳಿಸಲು ಆದೇಶಿಸಲಾಗಿತ್ತು.

ಜತೆಗೆ, ಆರೋಪಿಯಿಂದ ವಿಧಿಸಲಾದ ದಂಡದ ಮೊತ್ತದಲ್ಲಿ ₹20,000 ಅನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ಆದೇಶಿಸಿತ್ತು. ಪ್ರತ್ಯೇಕವಾಗಿ ಸಂತ್ರಸ್ತರ ಪರಿಹಾರ ಯೋಜನೆಯಡಿ ₹1 ಲಕ್ಷ ಪರಿಹಾರ ನೀಡುವಂತೆ ಡಿಎಲ್‌ಎಸ್‌ಎಗೆ ಶಿಫಾರಸು ಮಾಡಿತ್ತು.

ಆದರೆ, ಈ ಪರಿಹಾರ ಮೊತ್ತ ಅತ್ಯಲ್ಪವಾಗಿದೆ ಎಂದು ಆಕ್ಷೇಪಿಸಿ ಸಂತ್ರಸ್ತೆಯ ತಾಯಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಪರಿಹಾರವನ್ನು ₹4 ಲಕ್ಷದಿಂದ ₹7 ಲಕ್ಷದವರೆಗೆ ಹೆಚ್ಚಿಸುವಂತೆ ಅವರು ಕೋರಿದ್ದರು.

ಮೇಲ್ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್, ಸಂತ್ರಸ್ತೆಗೆ ನೀಡಬೇಕಾದ ಪರಿಹಾರವನ್ನು ₹7 ಲಕ್ಷಕ್ಕೆ ಹೆಚ್ಚಿಸಿ, ಅದನ್ನು ಪಾವತಿಸಲು ಬೀದರ್ ಡಿಎಲ್‌ಎಸ್‌ಎಗೆ ಶಿಫಾರಸ್ಸು ಮಾಡಿದೆ.

ಸಂತ್ರಸ್ತೆಯ ತಾಯಿ ಪರ ವಕೀಲೆ ಸ್ವಾತಿ ಎಂ ಎನ್ ವಾದ ಮಂಡಿಸಿದ್ದರು. ಪ್ರತಿವಾದಿಗಳ ಪರ ವಕೀಲ ಬಿ.ಸಿ. ಜಾಕಾ ಹಾಜರಿದ್ದರು.