Religious Conversion  
ಸುದ್ದಿಗಳು

ಅತ್ಯಾಚಾರ, ಬಲವಂತದ ಮತಾಂತರ ಪ್ರಕರಣ: ಆರೋಪಿ ತಾಯಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಆರೋಪಿ ತನ್ನನ್ನು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮಾತ್ರ ಮದುವೆಯಾಗುವುದಾಗಿ ಒತ್ತಾಯಿಸಿದ್ದು, 2025ರ ಜೂನ್‌ 22ರಂದು ಇಸ್ಲಾಂಗೆ ಮತಾಂತರಗೊಂಡು ಜೈನಾಬ್‌ ಎಂದು ಬದಲಿಸಿ, ಆತನನ್ನು ಮದುವೆಯಾಗಿದ್ದೇನೆ ಎಂದು ಆರೋಪಿಸಿರುವ ಸಂತ್ರಸ್ತೆ.

Bar & Bench

ಅತ್ಯಾಚಾರ ಮತ್ತು ಬಲವಂತದ ಮತಾಂತರ ಪ್ರಕರಣದಲ್ಲಿನ ಪ್ರಮುಖ ಆರೋಪಿಯ ತಾಯಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅತ್ಯಾಚಾರ ಆರೋಪದಲ್ಲಿ ಅರ್ಜಿದಾರೆ ಜಬೀನ್‌ ತಾಜ್‌ ಅವರ ಭಾಗವಹಿಸುವಿಕೆ ಈ ಹಂತದಲ್ಲಿ ಕಾಣುತ್ತಿಲ್ಲ. ಹೀಗಾಗಿ, ಆರೋಪಗಳು ಗಂಭೀರ ಎಂದು ಆಕೆಗೆ ನಿರೀಕ್ಷಣಾ ಜಾಮೀನು ನಿರಾಕರಿಸಲಾಗದು ಎಂದು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ರಜಾಕಾಲೀನ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

Justice R Nataraj

ಜಬೀನ್‌ ತಾಜ್‌ ಅವರನ್ನು ಅವರನ್ನು ಬಂಧಿಸಿದರೆ ₹2 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌, ಒಬ್ಬರ ಭದ್ರತೆ ಪಡೆದು ಬಿಡುಗಡೆ ಮಾಡಬೇಕು. ಆರೋಪ ಪಟ್ಟಿ ಸಲ್ಲಿಸುವವರೆಗೆ ಪ್ರತಿ ಶನಿವಾರ ಬೆಳಿಗ್ಗೆ 11 ಗಂಟೆಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಇಂಥದ್ದೇ ಪ್ರಕರಣದಲ್ಲಿ ಭಾಗಿಯಾಗಬಾರದು, ಪ್ರಾಸಿಕ್ಯೂಷನ್‌ ಸಾಕ್ಷಿಯನ್ನು ತಿರುಚಬಾರದು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.

ದೂರುದಾರೆ ಮತ್ತು ಮೊದಲನೇ ಆರೋಪಿಯು ಪ್ರೀತಿಸಿ ಮದುವೆಯಾಗಿದ್ದು, ಅದು ವಿಶೇಷ ವಿವಾಹ ಕಾಯಿದೆ ಅಡಿ ನೋಂದಾಯಿಸಲ್ಪಟ್ಟಿದೆ. ಮೊದಲನೇ ಆರೋಪಿಯ ವಿರುದ್ಧದ ಆರೋಪವು ಜೀವಾವಧಿ ಅಥವಾ ಗಲ್ಲು ಶಿಕ್ಷೆ ವಿಧಿಸುವಂಥದ್ದಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಅರ್ಜಿದಾರೆಯ ಪರ ವಕೀಲರು “ಅರ್ಜಿದಾರೆಯು ಮೊದಲನೇ ಆರೋಪಿಯ ತಾಯಿಯಾಗಿದ್ದಾರೆ. ಆರೋಪಿತ ಅಪರಾಧದಲ್ಲಿ ಅವರ ಪಾತ್ರವಿಲ್ಲ. 2025ರ ಜೂನ್‌ 18ರಂದು ವಿಶೇಷ ವಿವಾಹ ಕಾಯಿದೆ ಅಡಿ ದೂರುದಾರೆ ಮತ್ತು ಮೊದಲನೇ ಆರೋಪಿಯ ವಿವಾಹ ನೋಂದಾಯಿಸಲ್ಪಟ್ಟಿದೆ” ಎಂದರು.

ಪ್ರಕರಣದ ಹಿನ್ನೆಲೆ: 2025ರ ಫೆಬ್ರವರಿಯ ಒಂದು ದಿನ ಮೊದಲನೇ ಆರೋಪಿಯು ತನಗೆ ಮದ್ಯಸೇವನೆ ಮಾಡಿಸಿ, ಪ್ರಜ್ಞೆ ತಪ್ಪಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆನಂತರ ತನ್ನ ಮೊಬೈಲ್‌ನಿಂದ ತನ್ನ ಬೆತ್ತಲೆ ಮತ್ತು ಆಕ್ಷೇಪರ್ಹವಾದ ಚಿತ್ರಗಳನ್ನು ತೆಗೆದಿದ್ದಾನೆ. ಇದನ್ನೇ ಇಟ್ಟುಕೊಂಡು ತನ್ನನ್ನು ಬ್ಲಾಕ್‌ಮೇಲ್‌ ಮಾಡಿ, ಪದೇಪದೇ ಲೈಂಗಿಕ ದೌರ್ಜನ್ಯ ನಡೆಸಿದ್ದರಿಂದ ಗರ್ಭ ಧರಿಸಿದ್ದೆನು. ಈ ಸಂದರ್ಭದಲ್ಲಿ ದೈಹಿಕ ಹಲ್ಲೆ ನಡೆಸಿದ್ದರಿಂದ ನವಜಾತ ಶಿಶು ಮರಣ ಹೊಂದಿತ್ತು. ಮೊದಲನೇ ಆರೋಪಿಯು ತನ್ನನ್ನು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮಾತ್ರ ಮದುವೆಯಾಗುವುದಾಗಿ ಒತ್ತಾಯಿಸಿದ್ದು, 2025ರ ಜೂನ್‌ 22ರಂದು ಇಸ್ಲಾಂಗೆ ಮತಾಂತರಗೊಂಡು ಜೈನಾಬ್‌ ಎಂದು ಬದಲಿಸಿಕೊಂಡು, ಆತನನ್ನು ಮದುವೆಯಾಗಿದ್ದೇನೆ ಎಂದು ದೂರಿದ್ದಾರೆ.

ಮದುವೆಯ ಬಳಿಕ ಮೊದಲನೇ ಆರೋಪಿಯು ತನ್ನನ್ನು ಎಲ್ಲೆಲ್ಲೋ ಕರೆದುಕೊಂಡು ಹೋಗಿದ್ದು, ಅಂತಿಮವಾಗಿ 2026ರ ಜನವರಿ 23ರಂದು ಎರಡು ತಿಂಗಳ ಮಗುವಿನ ಜೊತೆಗೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಬಿಟ್ಟು ಹೋಗಿದ್ದ. ಆನಂತರ ಪ್ರಯಾಸಪಟ್ಟು ಬೆಂಗಳೂರಿಗೆ ತಾನು ಬಂದಿದ್ದು, ಆರೋಪಿಯ ತಾಯಿಯ ಕೆಲವು ಬೆಂಬಲಿಗರು ತನ್ನ ಬಳಿಗೆ ಬಂದು ತಾನು ಮದುವೆಯಾದ ಬಳಿಕ ಸಂತೋಷವಾಗಿದ್ದೇನೆ ಎಂದು ಹೇಳಿಸಿ, ವಿಡಿಯೊ ರೆಕಾರ್ಡ್‌ ಮಾಡಿದ್ದಾರೆ. ಮದುವೆಯ ವಿಚಾರ ಬಹಿರಂಗಗೊಳಿಸದಂತೆ ಬೆದರಿಕೆ ಹಾಕಿದ್ದು, ಮೊದಲನೇ ಆರೋಪಿ ಮತ್ತು ಆತನ ಸಹಚರರು ತನ್ನ ಮಗುವನ್ನು ಕರೆದೊಯ್ದಿದ್ದಾರೆ ಎಂದು ದೂರಿದ್ದಾರೆ.

ಬಿಎನ್‌ಎಸ್‌ ಸೆಕ್ಷನ್‌ಗಳಾದ 64 (ಅತ್ಯಾಚಾರ), 85 (ಕಿರುಕುಳ), 137(2) (ಅಕ್ರಮ ಚಟುವಟಿಕೆಗಾಗಿ ವಿವಾಹ) 118(1) ಮತ್ತು 118(2) (ಹಲ್ಲೆ), 351(2) (ಬೆದರಿಕೆ), 61(1) (ಸಮಾನ ಉದ್ದೇಶ); ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66E (ಖಾಸಗಿತನ ಉಲ್ಲಂಘನೆ); ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್‌ 4, ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ರಕ್ಷಣೆಯ ಸುಗ್ರೀವಾಜ್ಞೆ ಸೆಕ್ಷನ್‌ 3 (ದುರುದ್ದೇಶದಿಂದ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ) ಅಡಿ ಬೆಂಗಳೂರಿನ ಸುದ್ದಗುಂಟಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Jabeen Taj Vs State of Karnataka.pdf
Preview