Mahesh Shetty Thimarodi 
ಸುದ್ದಿಗಳು

'ನಾಯಿ ಬೊಗಳಿದರೆ ಬೊಗಳಲಿ ಬಿಡಿ' ಎಂದ ಹೈಕೋರ್ಟ್‌; ಮಹೇಶ್‌ ತಿಮರೋಡಿಗೆ ನಿರೀಕ್ಷಣಾ ಜಾಮೀನು ಮಂಜೂರು

“ತಿಮರೋಡಿ ಏನು ಮಾಡುತ್ತಾರೆ ನಮಗೆ ಬೇಕಿಲ್ಲ. ಮೂರು ವರ್ಷ ಶಿಕ್ಷೆಯಾಗುವ ಅಪರಾಧ ಪ್ರಕರಣ ಇದಾಗಿದೆ. ಅವರಿಗೆ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ. ನಿಮ್ಮ ವಾದವನ್ನು ಏಕೆ ಆಲಿಸಬೇಕು? ನಿಮ್ಮ ಅರ್ಜಿಯನ್ನು ಸ್ವೀಕರಿಸಿಲ್ಲ” ಎಂದ ಹೈಕೋರ್ಟ್‌.

Bar & Bench

ಫೋನ್‌ ಸಂಭಾಷಣೆಯ ವೇಳೆ ಮಹಿಳೆಯೊಬ್ಬರ ವಿರುದ್ಧ ಅಶ್ಲೀಲ ಶಬ್ದಗಳ ಬಳಕೆ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಮಹೇಶ್‌ ತಿಮರೋಡಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಅಲ್ಲದೇ, ʼನಾಯಿ ಬೊಗಳಿದರೆ ಬೊಗಳಲಿ ಬಿಡಿ ಏನೂ ಮಾಡುವುದಕ್ಕೆ ಆಗುವುದಿಲ್ಲʼ ಎಂದು ಮೌಖಿಕವಾಗಿ ಹೇಳಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಹೇಶ್‌ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice R Nataraj

“ತಿಮರೋಡಿಗೆ ನಿರೀಕ್ಷಣಾ ಜಾಮೀನು ನೀಡಿದರೆ ಅವರು ನ್ಯಾಯದಾನದಿಂದ ನಾಪತ್ತೆಯಾಗುವ ಸಾಧ್ಯತೆ ಇದೆ ಎಂದು ವಿಚಾರಣಾಧೀನ ನ್ಯಾಯಾಲಯ ಅರ್ಜಿ ತಿರಸ್ಕರಿಸಿದೆ. ಸೂಕ್ತ ಷರತ್ತುಗಳನ್ನು ವಿಧಿಸಿ ವಿಚಾರಣಾಧೀನ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದಿತ್ತು. ಇಲ್ಲಿ, ವಿಚಾರಣಾಧೀನ ನ್ಯಾಯಾಲಯ ಲೋಪ ಎಸಗಿದೆ” ಎಂದು ನ್ಯಾಯಾಲಯ ಹೇಳಿದ್ದು, ತಿಮರೋಡಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

"ತಿಮರೋಡಿ ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್‌ ಮತ್ತು ಭದ್ರತೆ ಒದಗಿಸಬೇಕು. ವಾರದಲ್ಲಿ ಒಂದು ದಿನ ಠಾಣೆಗೆ ಹೋಗಿ, ಸಹಿ ಹಾಕಬೇಕು. ಇಂಥದ್ದೇ ಅಪರಾಧದಲ್ಲಿ ಭಾಗಿಯಾಗಬಾರದು. ಈ ಷರತ್ತುಗಳನ್ನು ಉಲ್ಲಂಘಿಸಿದರೆ ನಿರೀಕ್ಷಣಾ ಜಾಮೀನು ರದ್ದಾಗಲಿದೆ" ಎಂದೂ ನ್ಯಾಯಾಲಯ ಆದೇಶಿಸಿದೆ.

ತಿಮರೋಡಿ ಪ್ರತಿನಿಧಿಸಿದ್ದ ವಕೀಲೆ ಕೆ ಅಕ್ಷತಾ ಶೆಟ್ಟಿ ಅವರು “ಅರ್ಜಿದಾರರ ವಿರುದ್ಧದ ಆರೋಪಗಳು ಗಂಭೀರವಾಗಿವೆ ಎಂದು ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ತಿರಸ್ಕರಿಸಿದೆ. ದೂರುದಾರರ ವಿರುದ್ಧ ತಿಮರೋಡಿ ಅವರು ಯಾವುದೇ ಮಾನಹಾನಿ ಅಥವಾ ಅಸಭ್ಯ ಪದ ಬಳಕೆ ಮಾಡಿಲ್ಲ. ಪ್ರಜ್ವಲ್‌ ಮತ್ತು ಸಂತ್ರಸ್ತೆಯ ಪುತ್ರ ನಟಿಸಿರುವ ನಾಟಕದ ಬಗ್ಗೆ ಮಾತನಾಡಿದ್ದಾರೆ. ವೀರೇಂದ್ರ ಹೆಗ್ಗಡೆ ಕುಟುಂಬದ ಅಕ್ರಮವನ್ನು ಅನಾವರಣ ಮಾಡಲು ಮುಂದಾಗಿರುವುದರಿಂದ ತಿಮರೋಡಿಯನ್ನು ಗುರಿಯಾಗಿಸಲಾಗಿದೆ” ಎಂದರು.

ಸರ್ಕಾರದ ಪರ ವಕೀಲೆ “ದೂರುದಾರೆಯ ಬಗ್ಗೆ ಮಾಡಿರುವ ಆರೋಪಗಳು ಗಂಭೀರವಾಗಿದ್ದು, ಆಕೆಯ ಘನತೆಗೆ ಚ್ಯುತಿ ಉಂಟು ಮಾಡಲಾಗಿದೆ. ಇದು ಕೋಮು ದ್ವೇಷಕ್ಕೂ ಪ್ರಚೋದನೆ ನೀಡಿದೆ. ತಿಮರೋಡಿಯನ್ನು ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕಿದೆ” ಎಂದು ಆಕ್ಷೇಪಿಸಿದರು.

ಇದಕ್ಕೂ ಮುನ್ನ ದೂರುದಾರರನ್ನು ಪ್ರತಿನಿಧಿಸುವುದಾಗಿ ಹಾಜರಾಗಿದ್ದ ವಕೀಲ ಎಸ್‌ ರಾಜಶೇಖರ್‌ ಅವರು “ತಿಮರೋಡಿಗೆ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುವುದು ಹವ್ಯಾಸವಾಗಿದೆ. ನ್ಯಾಯಮೂರ್ತಿಗಳ ವಿರುದ್ಧವೇ ಆರೋಪ ಮಾಡಿದ್ದಾರೆ. ಅದಕ್ಕೆ ಬೇಷರತ್‌ ಕ್ಷಮೆಯನ್ನೂ ಕೋರಿದ್ದಾರೆ” ಎಂದರು.

ಆಗ ಪೀಠವು “ನ್ಯಾಯಮೂರ್ತಿಗಳು ಯಾವಾಗಲೂ ಟೀಕೆಯನ್ನು ಸ್ವೀಕರಿಸುವ ಮತ್ತೊಂದು ತುದಿಯಲ್ಲಿರುತ್ತಾರೆ. ಅದರಿಂದ ಏನೂ ಆಗುವುದಿಲ್ಲ” ಎಂದಿತು.

ಈ ಮಧ್ಯೆ, ರಾಜಶೇಖರ್‌ ಅವರು “ತಿಮರೋಡಿ ರೌಡಿ ಶೀಟರ್‌ ಆಗಿದ್ದು, ಅವರ ನಡತೆಗೆ ಸಂಬಂಧಿಸಿದಂತೆ ಅರ್ಜಿ ಹಾಕಿದ್ದೇನೆ. ಸಂಬಂಧಿಸಿದ ದಾಖಲೆಗಳನ್ನೂ ಸಲ್ಲಿಸಿದ್ದೇನೆ. ತಿಮರೋಡಿ ಹಿಂಬಾಲಕರು ಬೆದರಿಕೆ ಹಾಕಿರುವ ಸಂಬಂಧ ಇನ್ನೊಂದು ದೂರು ದಾಖಲಾಗಿದೆ. ತಿಮರೋಡಿ ತಾನು ಕಾನೂನಿಗಿಂತ ದೊಡ್ಡವರು ಎಂದು ತಿಳಿದುಕೊಂಡಿದ್ದಾರೆ. ಈತನ ವಿರುದ್ಧ ಯಾವುದಾದರೂ ಆದೇಶವಾದರೆ ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ನ್ಯಾಯಾಧೀಶರ ವಿರುದ್ಧ ಮಾತನಾಡುತ್ತಾರೆ. ದಿನೇಶ್‌ನ ತಾಯಿ ಇನ್ನೊಬ್ಬರ ಜೊತೆ ಮಲಗಿದ್ದಾರೆ ಎಂದು ಹೇಳಿದ್ದಾರೆ. ಗಡೀಪಾರು ಆದೇಶ ತಿಮರೋಡಿ ವಿರುದ್ಧವಾಗಿದೆ” ಎಂದರು.

ಇದಕ್ಕೆ ಪೀಠವು “ತಿಮರೋಡಿ ಏನು ಮಾಡುತ್ತಾರೆ ನಮಗೆ ಬೇಕಿಲ್ಲ. ಮೂರು ವರ್ಷ ಶಿಕ್ಷೆಯಾಗುವ ಅಪರಾಧ ಪ್ರಕರಣ ಇದಾಗಿದೆ. ಅವರಿಗೆ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ. ನಿಮ್ಮ ವಾದವನ್ನು ಏಕೆ ಆಲಿಸಬೇಕು? ನಿಮ್ಮ ಅರ್ಜಿಯನ್ನು ಸ್ವೀಕರಿಸಿಲ್ಲ” ಎಂದು ತಿರಸ್ಕರಿಸಿತು.

ಮುಂದುವರಿದು, “ಹರಕಲು ಬಾಯಿ ಅಂತ ಇರುತ್ತೆ ಏನು ಮಾಡಲಾಗುತ್ತದೆ? ನಾಯಿ ಬೊಗಳಿದರೆ ಏನಾಗುತ್ತದೆ? ನಾಯಿ ಬೊಗಳಿದರೆ ಬೊಗಳುತ್ತದೆ ಅಷ್ಟೆ. ಅದು ಪದೇ ಪದೇ ಬೊಗಳಿದರೆ ಹುಚ್ಚು ನಾಯಿ ಎಂದು ಪರಿಗಣಿಸಿ, ಮುಂದೆ ಹೋಗಬೇಕು” ಎಂದಿತು.

ಪ್ರಕರಣದ ಹಿನ್ನೆಲೆ: ಮಹೇಶ್‌ ತಿಮರೋಡಿಯು ಪ್ರಜ್ವಲ್‌ ಎಂಬಾತನಿಗೆ ಕರೆ ಮಾಡಿ ನಾನು ಒಂದು ವಿಡಿಯೊ ನೋಡಿದ್ದೇನೆ ಎಂದು ತುಳು ಭಾಷೆಯಲ್ಲಿ ಮಾತು ಆರಂಭಿಸಿ, ಏನು ನಿನ್ನ ತಂದೆಯ ಕತೆ ಹೇಳುವುದಾ ಎಂದು ಪ್ರಶ್ನಿಸಿ, ಮುಂದುವರಿದು ಬುರುಡೆಯ ವಿಡಿಯೊ ಮಾಡಿದ್ದೀಯಾ ಎಂದು ಕೇಳಿದ್ದಾರೆ. ಸಂಭಾಷಣೆಯ ನಡುವೆ ವಿಡಿಯೊ ನಿಮ್ಮ ತಂದೆಗೆ ಸಂಬಂಧಿಸಿದ್ದಾ ಎಂದು ಕೇಳಿದ್ದಾರೆ. ಬುರುಡೆ (ಧರ್ಮಸ್ಥಳ ಸಾಮೂಹಿಕ ಕೊಲೆ) ಕತೆಯ ಬಗ್ಗೆ ತಿಮರೋಡಿಯು ಪ್ರಜ್ವಲ್‌ನನ್ನು ಕೇಳಿದ್ದು, ದೂರುದಾರೆಯು ವೀರೇಂದ್ರ ಹೆಗ್ಗಡೆ ಜೊತೆ ಮಲಗಿದ್ದರಾ ಎಂದು ಕೇಳಿದ್ದಾರೆ. ದಿನೇಶ್‌ ಕೊಡಪದವು (ಸಂತ್ರಸ್ತೆಯ ಪುತ್ರ) ಮತ್ತು ಮಂದಾರ ಸುಂದರ ರೈ ಅವರು ಶೆಟ್ಟರಿಗೆ ಹುಟ್ಟಿಲ್ಲ, ಜೈನರಿಗೆ ಹುಟ್ಟಿದ್ದಾರೆ ಎಂದು ಹೇಳಿದ್ದಾರೆ. ಈ ಮೂಲಕ ತಿಮರೋಡಿಯು ಸಂತ್ರಸ್ತೆಯನ್ನು ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರಿಗೆ ಸಂಪರ್ಕ ಕಲ್ಪಿಸಿದ್ದಾರೆ. ಇದು ತನ್ನ ಘನತೆಗೆ ಚ್ಯುತಿ ಉಂಟು ಮಾಡಿದ್ದು, ಸಮುದಾಯಗಳ ನಡುವೆ ದ್ವೇಷ ಬಿತ್ತುವ ಕೃತ್ಯ ಎಸಗಿದ್ದಾರೆ. ಹೀಗಾಗಿ, ತಿಮರೋಡಿಯ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ತಿಮರೋಡಿ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ಗಳಾದ 196(1), 352, 351(2), 79 ಅಡಿ ಪ್ರಕರಣ ದಾಖಲಿಸಲಾಗಿದೆ.