ED and Karnataka HC 
ಸುದ್ದಿಗಳು

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣ: ಮಾಜಿ ಅಧ್ಯಕ್ಷ ರಾಮಕೃಷ್ಣಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಸಾಲ ಮತ್ತು ಮುಂಗಡಗಳ ಖಾತೆಗಳಿಗೆ ಡೆಬಿಟ್ ಮಾಡುವ ಮೂಲಕ ನಕಲಿ ಠೇವಣಿ ಸೃಷ್ಟಿಸಲಾಗಿದೆ. ₹1,544.43 ಕೋಟಿ ಮೌಲ್ಯದ 2,876 ಸಾಲಗಳಿಗೆ ದಾಖಲೆಗಳು ಲಭ್ಯವಿಲ್ಲ, ಇವುಗಳಿಗೆ ಯಾವುದೇ ಭದ್ರತೆ ಪಡೆಯದೇ ಸಾಲ ಮಂಜೂರು ಮಾಡಲಾಗಿದೆ ಎಂಬುದು ಆರೋಪ.

Bar & Bench

ಬೆಂಗಳೂರಿನ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮತದಲ್ಲಿ ನಡೆದಿರುವ ₹1,544.43 ಕೋಟಿ ಬ್ಯಾಂಕ್‌ ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಕೆ ರಾಮಕೃಷ್ಣ ಅವರಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ಮಂಜೂರು ಮಾಡಿದೆ.

ಸುಮಾರು ನಾಲ್ಕು ವರ್ಷಗಳಿಗೂ ಅಧಿಕ ಕಾಲದಿಂದ ಜೈಲಿನಲ್ಲಿರುವುದು ಮತ್ತು ವಿಚಾರಣೆ ವಿಳಂಬ ಹಾಗೂ ರಾಮಕೃಷ್ಣಗೆ 76 ವರ್ಷವಾಗಿರುವುದನ್ನು ಪರಿಗಣಿಸಿ ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠವು ನವೆಂಬರ್‌ 6ರಂದು ಜಾಮೀನು ಮಂಜೂರು ಮಾಡಿದೆ.

Justice S Vishwajith Shetty

ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಏಪ್ರಿಲ್‌ 2012ರಿಂದ ಜನವರಿ 2018ರ ನಡುವೆ ನಡೆದಿರುವ ಅಕ್ರಮ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಆರ್‌ಬಿಐ ಪರಿಶೀಲನೆಯ ಬೆನ್ನಿಗೇ 2020ರ ಜನವರಿಯಲ್ಲಿ ಸಹಕಾರ ಸೊಸೈಟಿಗಳ ನೋಂದಣಾಧಿಕಾರಿ ದೂರು ನೀಡಿದ್ದರು.

ಸಾಲ ಮತ್ತು ಮುಂಗಡಗಳ ಖಾತೆಗಳಿಗೆ ಡೆಬಿಟ್ ಮಾಡುವ ಮೂಲಕ ನಕಲಿ ಠೇವಣಿಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿದೆ. ₹1,544.43 ಕೋಟಿ ಮೌಲ್ಯದ 2,876 ಸಾಲಗಳಿಗೆ ದಾಖಲೆಗಳು ಲಭ್ಯವಿಲ್ಲ, ಇವುಗಳಿಗೆ ಯಾವುದೇ ಭದ್ರತೆ ಪಡೆಯದೇ ಸಾಲ ಮಂಜೂರು ಮಾಡಲಾಗಿದೆ ಎನ್ನಲಾಗಿದೆ. ₹892.85 ಕೋಟಿ ಸಾಲವನ್ನು 24 ಫಲಾನುಭವಿಗಳಿಗೆ ವಿಸ್ತರಿಸಲಾಗಿದ್ದು, ಈ ವೇಳೆ ಆರ್‌ಬಿಐ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಆರೋಪಗಳಲ್ಲಿ ಒಂದಾಗಿದೆ.

ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀಡಿದ ದೂರಿನ ಅನ್ವಯ ಬಾನಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ರಾಮಕೃಷ್ಣ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರಕ್ರಿಯೆ ಆರಂಭಿಸಿದ್ದು, ಅವರನ್ನು ನಾಲ್ಕನೇ ಆರೋಪಿಯನ್ನಾಗಿಸಿತ್ತು.

ಈ ಹಿಂದೆ ವಿಚಾರಣಾಧೀನ ನ್ಯಾಯಾಲಯ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ರಾಮಕೃಷ್ಣ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ್ದವು. ನಾಲ್ಕು ವರ್ಷಗಳಿಗೂ ಅಧಿಕ ಅವಧಿಯಿಂದ ಜೈಲಿನಲ್ಲಿರುವುದು ಮತ್ತು ವಿಚಾರಣೆ ವಿಳಂಬವಾಗುತ್ತಿರುವುದನ್ನು ಪರಿಗಣಿಸಿ ಹೈಕೋರ್ಟ್‌ ಸದ್ಯ ಜಾಮೀನು ಮಂಜೂರು ಮಾಡಿದೆ.

ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತೆ, ವಿಚಾರಣೆಗೆ ನಿರಂತರವಾಗಿ ಹಾಜರಾಗುವುದು ಮತ್ತು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರದಂತೆ ಷರತ್ತು ವಿಧಿಸಿ ಹೈಕೋರ್ಟ್‌ ಜಾಮೀನು ನೀಡಿದೆ.

ರಾಮಕೃಷ್ಣ ಪರವಾಗಿ ವಕೀಲ ಡಿ ಎಸ್‌ ಸುಧನ್ವ ವಾದಿಸಿದ್ದರು.

Ramakrishna K v. ED.pdf
Preview