Acting Chief Justice Alok Aradhe paid floral tributes to Dr. B R Ambedkar and Mahatma Gandhi 
ಸುದ್ದಿಗಳು

[ಸ್ವಾತಂತ್ರ್ಯ ಸಂಭ್ರಮ] 7.8 ಲಕ್ಷ ವರ್ಚುವಲ್ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್‌ ದೇಶಕ್ಕೇ ನಂ.1: ಹಂಗಾಮಿ ಸಿಜೆ

2047ಕ್ಕೆ ದೇಶವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿದ್ದು, ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಲು ನಾವೆಲ್ಲರೂ ಸಕ್ರಿಯರಾಗಬೇಕು. ಆ ಮೂಲಕ ಎಲ್ಲರಿಗೂ ತುರ್ತಾಗಿ ನ್ಯಾಯದಾನ ಸಿಗುವಂತೆ ಮಾಡಬೇಕು ಎಂದ ನ್ಯಾ. ಅಲೋಕ್‌ ಅರಾಧೆ.

Bar & Bench

ಪ್ರಸಕ್ತ ವರ್ಷದ ಜೂನ್ ಅಂತ್ಯಕ್ಕೆ ಕರ್ನಾಟಕ ಹೈಕೋರ್ಟ್ 7,80,305 ವರ್ಚುವಲ್ ವಿಚಾರಣೆಗಳನ್ನು ನಡೆಸಿದ್ದು, ವರ್ಚುವಲ್ ವಿಚಾರಣೆ ನಡೆಸುವ ವಿಚಾರದಲ್ಲಿ ದೇಶದ ಇತರೆ ಹೈಕೋರ್ಟ್‌ಗಳ ಹೋಲಿಕೆಯಲ್ಲಿ ರಾಜ್ಯದ ಹೈಕೋರ್ಟ್‌ ನಂಬರ್ 1 ಆಗಿದೆ ಎಂದು ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಹೇಳಿದ್ದಾರೆ.

ಬೆಂಗಳೂರಿನ ಹೈಕೋರ್ಟ್ ಪ್ರಧಾನ ಪೀಠದಲ್ಲಿ 76ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

"ದಾವೆದಾರರಿಗೆ ತುರ್ತಾಗಿ ನ್ಯಾಯದಾನ ಕೊಡಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ನಾವು ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು” ಎಂದು ಅವರು ಪ್ರತಿಪಾದಿಸಿದರು.

“ಸ್ವಾತಂತ್ರ್ಯದ 75ನೇ ವರ್ಷದ ಹಿನ್ನೆಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಮೇಲಿನ ಘೋಷಣೆಯು ನಮ್ಮ ದೇಶದ ಭವಿಷ್ಯ ರೂಪಿಸುವ ನಮ್ಮ ಸಾಮೂಹಿಕ ಸಂಕಲ್ಪ ಮತ್ತು ನಿರ್ಣಯದ ಮೇಲೆ ಕೇಂದ್ರೀಕೃತವಾಗಿದೆ. ನಮ್ಮ ರಾಷ್ಟ್ರೀಯ ಧ್ವಜವು ನಮ್ಮ ದೇಶದ ಹೆಮ್ಮೆಯ ಸಂಕೇತವಾಗಿದೆ. ʼಮನೆ ಮನೆಯಲ್ಲೂ ಧ್ವಜʼ ಅಭಿಯಾನವು ಸ್ವಾತಂತ್ರ್ಯ ದಿನೋತ್ಸವದ ಭಾಗವಾಗಿದೆ. ವಿದೇಶಿಯರಿಂದ ನಮ್ಮನ್ನು ಮುಕ್ತಗೊಳಿಸಲು ತ್ಯಾಗ ಮಾಡಿದ ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಇಂದು ಸ್ಮರಿಸುತ್ತಿದ್ದೇವೆ. ಸ್ವತಂತ್ರ ಭಾರತದಲ್ಲಿ ಜನಿಸಿದ್ದನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸಲು ನಾವೆಲ್ಲಾ ಇಂದು ಇಲ್ಲಿ ಸೇರಿದ್ದೇವೆ” ಎಂದರು.

“ನಮ್ಮ ದೇಶದ ನಿರ್ಮಾತೃಗಳು ಲಿಖಿತ ಸಂವಿಧಾನದಲ್ಲಿ ಆದರ್ಶವಾದ ಮೌಲ್ಯಗಳನ್ನು ನೀಡಿದ್ದಾರೆ. ಸಂವಿಧಾನದ ರಕ್ಷಕನ ಹೊಣೆ ಹೊತ್ತಿರುವ ನ್ಯಾಯಾಂಗವು ಸಂವಿಧಾನದಲ್ಲಿ ಉಲ್ಲೇಖಿಸಲ್ಪಟ್ಟಿರುವ ಆದರ್ಶ ಮತ್ತು ಮೌಲ್ಯಗಳನ್ನು ರಕ್ಷಿಸುವ ಜವಾಬ್ದಾರಿ ಹೊಂದಿದೆ. ಎಲ್ಲರೂ ನ್ಯಾಯದಾನ ಕೋರಲು ಅವಕಾಶ ಮಾಡಿಕೊಡುವುದು ಭಾರತ ಸಂವಿಧಾನದ ಪ್ರಮುಖ ಆಶಯವಾಗಿದೆ” ಎಂದರು.

“ಸಂವಿಧಾನವು ನಮಗೆ ನೀಡಿರುವ ಹಕ್ಕುಗಳ ಬಗ್ಗೆ ನಮಗೆ ಗೊತ್ತಿದೆ. ಅದೇ ರೀತಿ ಸಂವಿಧಾನದ 51ಎ ವಿಧಿಯಡಿ ಅಡಕಗೊಳಿಸಲಾಗಿರುವ ನಮ್ಮ ಮೂಲಭೂತ ಕರ್ತವ್ಯಗಳ ಬಗ್ಗೆ ಇಂದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಉದಾತ್ತ ಆದರ್ಶಗಳನ್ನು ಪಾಲಿಸಲು ಮತ್ತು ಅನುಸರಿಸಲು ಮೂಲಭೂತ ಕರ್ತವ್ಯಗಳು ಅವಕಾಶ ಮಾಡಿಕೊಟ್ಟಿವೆ” ಎಂದರು.

“ಅತ್ಯಂತ ಶ್ರೀಮಂತವಾದ ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಜೊತೆ ಬೆಸೆದುಕೊಂಡು ವ್ಯಕ್ತಿಗತವಾಗಿ ಮತ್ತು ಸಮೂಹ ಚಟುವಟಿಕೆಗಳ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಅದ್ವಿತೀಯ ಸಾಧನೆ ಮಾಡಲು ಪ್ರಯತ್ನಿಸಬೇಕು. ಇದರಿಂದ ನಮ್ಮ ದೇಶವು ಅತ್ಯುನ್ನತ ಸಾಧನೆಗಳ ಮೂಲಕ ಮಹತ್ವದ ಮಟ್ಟಕ್ಕೇರಲಿದೆ” ಎಂದರು.

“2047ಕ್ಕೆ ದೇಶವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿದ್ದು, ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಲು ನಾವೆಲ್ಲರೂ ಸಕ್ರಿಯರಾಗಬೇಕು. ಈ ಮೂಲಕ ಎಲ್ಲರಿಗೂ ತುರ್ತಾಗಿ ನ್ಯಾಯದಾನ ಸಿಗುವಂತೆ ಮಾಡಬೇಕು. ಅತ್ಯಂತ ಶ್ರೀಮಂತವಾದ ನಮ್ಮ ಬಹು ಸಂಸ್ಕೃತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ನಾವು ಮತ್ತೆ ಶಪಥ ಮಾಡಬೇಕಿದೆ” ಎಂದು ಹೇಳಿದರು.